ADVERTISEMENT

ಆಸಿಸ್ ವಿರುದ್ಧದ ಟೆಸ್ಟ್‌ಗೆ ಭಾರತ ಮಹಿಳಾ ತಂಡ: ರಾವಲ್, ವೈಷ್ಣವಿಗೆ ಸ್ಥಾನ

ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕೈಕ ಟೆಸ್ಟ್‌

ಪಿಟಿಐ
Published 24 ಜನವರಿ 2026, 23:30 IST
Last Updated 24 ಜನವರಿ 2026, 23:30 IST
ವೈಷ್ಣವಿ ಶರ್ಮಾ
ವೈಷ್ಣವಿ ಶರ್ಮಾ   

ನವದೆಹಲಿ: ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್‌, ಎಡಗೈ ಸ್ಪಿನ್ನರ್‌ ವೈಷ್ಣವಿ ಶರ್ಮಾ, ವೇಗಿ ಕ್ರಾಂತಿ ಗೌಡ್‌ ಅವರು ಆಸ್ಟ್ರೇಲಿಯಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂವರಿಗೂ ಟೆಸ್ಟ್‌ನಲ್ಲಿ ಚೊಚ್ಚಲ ಅವಕಾಶವಾಗಿದೆ. 

15 ಆಟಗಾರ್ತಿಯರ ತಂಡವನ್ನು ಹರ್ಮನ್‌ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ. ಫೆ.15ರಿಂದ ಮಾರ್ಚ್ 1ರವರೆಗೆ ಭಾರತ ತಂಡವು ಮೂರು ಟಿ20 ಮತ್ತು ಅಷ್ಟೇ ಏಕದಿನ ಪಂದ್ಯಗಳನ್ನು ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡಲಿದೆ. ಮಾರ್ಚ್ 6ರಿಂದ 9 ರವರೆಗೆ ಟೆಸ್ಟ್‌ ಪಂದ್ಯ ನಡೆಯಲಿದೆ. ಏಕದಿನ ಮತ್ತು ಟಿ20 ಸರಣಿಗೆ ಈ ಮೊದಲೇ ತಂಡವನ್ನು ಪ್ರಕಟಿಸಲಾಗಿತ್ತು. 

ಏಕದಿನ ವಿಶ್ವಕಪ್‌ ವಿಜೇತ ಭಾರತ ತಂಡದಲ್ಲಿದ್ದ 25 ವರ್ಷದ ಪ್ರತೀಕಾ ಅವರು ಒಟ್ಟು 24 ಏಕದಿನ ಪಂದ್ಯಗಳಿಂದ 50.45 ಸರಾಸರಿಯಲ್ಲಿ 1110 ರನ್ ಗಳಿಸಿದ್ದಾರೆ. ಅದರಲ್ಲಿ ಎರಡು ಶತಕ ಮತ್ತು ಏಳು ಅರ್ಧಶತಕಗಳು ಸೇರಿವೆ. 

ADVERTISEMENT

ವಿಶ್ವಕಪ್ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಂದ ಹೊರಗುಳಿಯಲು ಕಾರಣವಾದ ಪಾದದ ಗಾಯದಿಂದ ಚೇತರಿಸಿಕೊಂಡಿರುವ ಪ್ರತೀಕಾ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಆದರೆ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಸೀಮಿತ ಓವರ್‌ಗಳ ಮಾದರಿಯಿಂದ ಹೊರಗುಳಿದಿದ್ದಾರೆ. 

25 ವರ್ಷದ ಕ್ರಾಂತಿ ಅವರು ಕಳೆದ ವರ್ಷ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಅವರು ಈತನಕ 15 ಏಕದಿನ ಮತ್ತು ನಾಲ್ಕು ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನ ಮಾದರಿಯಲ್ಲಿ 23 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 20 ವರ್ಷದ ವೈಷ್ಣವಿ ಭಾರತ ಟಿ20 ತಂಡಕ್ಕೆ ಐದು ಪಂದ್ಯಗಳನ್ನು ಆಡಿ, ಐದು ವಿಕೆಟ್‌ ಪಡೆದಿದ್ದಾರೆ.

ಮುಂಬೈ ವೇಗಿ, 25 ವರ್ಷದ ಸಯಾಲಿ ಸತ್ಘರೆ ಅವರೂ ಟೆಸ್ಟ್‌ ತಂಡದಲ್ಲಿ ಮೊದಲ ಬಾರಿ ಅವಕಾಶ ಪಡೆದಿದ್ದಾರೆ. 2025ರ ಜನವರಿನಲ್ಲಿ ನಡೆದ ಐರ್ಲೆಂಡ್‌ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲಿ ಅವರು ಆಡಿದ್ದಾರೆ. ಅವರ ಸೇರ್ಪಡೆಯಿಂದಾಗಿ ಅನುಭವಿ ಅರುಂಧತಿ ರೆಡ್ಡಿ ಅವರಿಗೆ ಕೊಕ್‌ ನೀಡಲಾಗಿದೆ. 

ಗಾಯದ ಸಮಸ್ಯೆಯಿಂದಾಗಿ ಯುವ ವಿಕೆಟ್ ಕೀಪರ್ ಜಿ. ಕಮಲಿನಿ ಅವರು ಆಸ್ಟ್ರೇಲಿಯಾ ಪ್ರವಾಸದಿಂದ ಹೊರಗುಳಿದಿದ್ದಾರೆ. ಅವರ ಬದಲು ಉಮಾ ಚೆಟ್ರಿ ಅವರಿಗೆ ಅವಕಾಶ ನೀಡಲಾಗಿದೆ. 

ಫೆಬ್ರುವರಿ 13ರಿಂದ 22ರವರೆಗೆ ಥಾಯ್ಲೆಂಡ್‌ನಲ್ಲಿ ನಡೆಯುವ ಚೊಚ್ಚಲ ಎಸಿಸಿ ರೈಸಿಂಗ್‌ ಸ್ಟಾರ್‌ ಏಷ್ಯಾ ಕಪ್‌ ಟೂರ್ನಿಗೆ ಆಯ್ಕೆ ಸಮಿತಿಯು ಭಾರತ ಎ ತಂಡವನ್ನು ಪ್ರಕಟಿಸಿದೆ. ರಾಧಾ ಯಾದವ್‌ ಅವರು ತಂಡವನ್ನು ಮುನ್ನಡೆಸುವರು. ಭಾರತವು ಈ ಟೂರ್ನಿಯಲ್ಲಿ ಯುಎಇ (ಫೆ.13), ಪಾಕಿಸ್ತಾನ ಎ (ಫೆ.15) ಮತ್ತು ನೇಪಾಳ (ಫೆ.17) ತಂಡಗಳನ್ನು ಎದುರಿಸಲಿದೆ.

ಭಾರತ ಟೆಸ್ಟ್‌ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಅಮನ್ಜೋತ್ ಕೌರ್, ರಿಚಾ ಘೋಷ್, ಉಮಾ ಚೆಟ್ರಿ (ಇಬ್ಬರೂ ವಿಕೆಟ್‌ ಕೀಪರ್), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ರೇಣುಕಾ ಠಾಕೂರ್, ಸ್ನೇಹ ರಾಣಾ, ಕ್ರಾಂತಿ ಗೌಡ್, ವೈಷ್ಣವಿ ಶರ್ಮಾ, ಸಯಾಲಿ ಸತ್ಘರೆ.

ಎಸಿಸಿ ರೈಸಿಂಗ್‌ ಸ್ಟಾರ್‌ ಏಷ್ಯಾ ಕಪ್‌ಗೆ ಭಾರತ ಎ ತಂಡ: ರಾಧಾ ಯಾದವ್‌ (ನಾಯಕಿ), ಹುಮೈರಾ ಖಾಜಿ, ವೃಂದಾ ದಿನೇಶ್, ಅನುಷ್ಕಾ ಶರ್ಮಾ, ದಿಯಾ ಯಾದವ್ (ಫಿಟ್‌ನೆಸ್‌ ಷರತ್ತಿಗೆ ಒಳಪಟ್ಟಿದೆ), ತೇಜಲ್ ಹಸಬ್ನಿಸ್‌, ನಂದನಿ ಕಶ್ಯಪ್ ವಿಕೆಟ್‌ ಕೀಪರ್‌, ಮಮತಾ ಎಂ. (ವಿಕೆಟ್‌ ಕೀಪರ್‌–ಫಿಟ್‌ನೆಸ್‌ ಷರತ್ತಿಗೆ ಒಳಪಟ್ಟಿದೆ), ಸೋನಿಯಾ ಮೆಂಧಿಯಾ, ಮಿನ್ನು ಮಣಿ, ತನುಜಾ ಕನ್ವರ್, ಪ್ರೇಮಾ ರಾವತ್, ಸೈಮಾ ಠಾಕೂರ್, ಜಿಂತಿಮಣಿ ಕಲಿತಾ, ನಂದನಿ ಶರ್ಮಾ. 

ಪ್ರತೀಕಾ ರಾವಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.