ADVERTISEMENT

ಭಾರತದ ಮಹಿಳೆಯರಿಗೆ ಪಾಕ್ ಶರಣು

ವನಿತೆಯರ ಟಿ20 ವಿಶ್ವಕಪ್: ಜೆಮಿಮಾ ರಾಡ್ರಿಗಸ್ ಅರ್ಧಶತಕ; ರಾಧಾ ಉತ್ತಮ ಬೌಲಿಂಗ್

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2023, 20:51 IST
Last Updated 12 ಫೆಬ್ರುವರಿ 2023, 20:51 IST
ವಿಕೆಟ್ ಗಳಿಸಿದ ರಾಧಾ ಯಾದವ್ ಅವರನ್ನು ಸಹ ಆಟಗಾರ್ತಿಯರು ಅಭಿನಂದಿಸಿದರು –ಪಿಟಿಐ ಚಿತ್ರ
ವಿಕೆಟ್ ಗಳಿಸಿದ ರಾಧಾ ಯಾದವ್ ಅವರನ್ನು ಸಹ ಆಟಗಾರ್ತಿಯರು ಅಭಿನಂದಿಸಿದರು –ಪಿಟಿಐ ಚಿತ್ರ   

ಕೇಪ್‌ಟೌನ್ : ಚೆಂದದ ಅರ್ಧಶತಕ ಗಳಿಸಿದ ಜೆಮಿಮಾ ರಾಡ್ರಿಗಸ್ ಅವರ ನೆರವಿನಿಂದ ಭಾರತ ತಂಡವು ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರು ಜಯಭೇರಿ ಬಾರಿಸಿತು.

ಭಾನುವಾರ ನ್ಯೂಲ್ಯಾಂಡ್ಸ್‌ನಲ್ಲಿ ನಡೆದ ಬಿ ಗುಂಪಿನ ಮೊದಲ ಪಂದ್ಯದಲ್ಲಿ ಭಾರತವು 7 ವಿಕೆಟ್‌ಗಳಿಂದ ಗೆಲುವು ಸಾಧಿಸಿತು.

ಟಾಸ್ ಗೆದ್ದ ಪಾಕಿಸ್ತಾನ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕಿ ಬಿಸ್ಮಾ ಮರೂಫ್ (ಔಟಾಗದೆ 68; 55ಎ, 4X7) ಹಾಗೂ ಆಯೇಷಾ ನಸೀಮ್ (ಔಟಾಗದೆ 43; 25ಎ, 4X2, 6X2) ಅವರ ಅಟದ ಬಲದಿಂದ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 149 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ ತಂಡವು 19 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 151 ರನ್ ಗಳಿಸಿತು.

ADVERTISEMENT

ಮಧ್ಯಮ ಕ್ರಮಾಂಕದ ಬ್ಯಾಟರ್ ಜೆಮಿಮಾ (ಔಟಾಗದೆ 53; 38ಎಸೆತ, 8 ಬೌಂಡರಿ) ಅರ್ಧಶತಕ ಗಳಿಸಿದರು. ಇತ್ತೀಚೆಗಷ್ಟೇ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿ ಜಯಿಸಿದ ಭಾರತ ಮಹಿಳೆಯರ ತಂಡವನ್ನು ಮುನ್ನಡೆಸಿದ್ದ ಶಫಾಲಿ ವರ್ಮಾ ಅವರು ಈ ಪಂದ್ಯದಲ್ಲಿ ಯಷ್ಟಿಕಾ ಭಾಟಿಯಾ ಅವರೊಂದಿಗೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 38 ರನ್‌ ಸೇರಿಸಿದರು. ಪಾಕ್ ತಂಡದ ಬೌಲರ್ ಸದಾ ಇಕ್ಬಾಲ್ ಅವರು ಯಷ್ಟಿಕಾ ವಿಕೆಟ್ ಗಳಿಸಿ ಜೊತೆಯಾಟ
ಮುರಿದರು.

ಈ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಜೆಮಿಮಾ ಅಬ್ಬರದ ಬ್ಯಾಟಿಂಗ್ ಮಾಡಿದರು. ಇನ್ನೊಂದೆಡೆ 25 ಎಸೆತಗಳಲ್ಲಿ 33 ರನ್‌ ಗಳಿಸಿದ ಶಫಾಲಿ ಅವರ ವಿಕೆಟ್‌ ಅನ್ನು ನಷ್ರಾ ಸಂಧು ಗಳಿಸಿ ಸಂಭ್ರಮಿಸಿದರು.

ನಾಯಕಿ ಹರ್ಮನ್‌ಪ್ರೀತ್ ಕೌರ್ (16 ರನ್) ಅವರ ವಿಕೆಟ್ ಕೂಡ ನಷ್ರಾ ಅವರ ಪಾಲಾಯಿತು. ಇದಾದ ನಂತರ ಪಾಕ್ ಆಟಗಾರ್ತಿಯರಿಗೆ ಸಂಭ್ರಮಿಸುವ ಅವಕಾಶ ಸಿಗಲಿಲ್ಲ.

ಜೆಮಿಮಾ ಜೊತೆಗೂಡಿದ ರಿಚಾ ಘೋಷ್ (ಔಟಾಗದೆ 31; 20ಎ, 5ಬೌಂಡರಿ) ತಂಡವನ್ನು ಗೆಲುವಿನ ದಡ ಸೇರಿಸಿದರು.

ರಾಧಾಗೆ 2 ವಿಕೆಟ್: ಪಾಕ್ ತಂಡದ ಎರಡು ಪ್ರಮುಖ ವಿಕೆಟ್‌ಗಳನ್ನು ಗಳಿಸಿದ ರಾಧಾ ಯಾದವ್ ಮಿಂಚಿದರು. ಆರಂಭಿಕ ಬ್ಯಾಟರ್ ಮುನೀಬಾ ಅಲಿ ಹಾಗೂ ಆಮೀನ್ ಅವರ ವಿಕೆಟ್‌ಗಳನ್ನು ರಾಧಾ ಗಳಿಸಿದರು. ಇದರಿಂದಾಗಿ ತಂಡವು ಬೃಹತ್ ಮೊತ್ತ ಪೇರಿಸುವುದು ತಪ್ಪಿತು.

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ: 20 ಓವರ್‌ಗಳಲ್ಲಿ 4ಕ್ಕೆ149 (ಬಿಸ್ಮಾ ಮರೂಫ್ ಔಟಾಗದೆ 68, ಆಯೇಷಾ ನಸೀಮ್ ಔಟಾಗದೆ 43, ರಾಧಾ ಯಾದವ್ 21ಕ್ಕೆ2) ಭಾರತ: 19 ಓವರ್‌ ಗಳಲ್ಲಿ 3ಕ್ಕೆ 151 (ಶಫಾಲಿ ವರ್ಮಾ 33, ಜೆಮಿಮಾ ರಾಡ್ರಿಗಸ್ ಔಟಾಗದೆ 53, ಹರ್ಮನ್‌ಪ್ರೀತ್ ಕೌರ್ 16, ರಿಚಾ ಘೋಷ್ ಔಟಾಗದೆ 31, ನಷ್ರಾ ಸಂಧು 15ಕ್ಕೆ2) ಫಲಿತಾಂಶ:ಭಾರತ ತಂಡಕ್ಕೆ ಏಳು ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.