ಕೊಲಂಬೊ: ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ತ್ರಿಕೋನ ಏಕದಿನ ಸರಣಿಯ ಕಿರೀಟವನ್ನು ಧರಿಸುವ ಛಲದಲ್ಲಿದೆ.
ಭಾನುವಾರ ಇಲ್ಲಿ ನಡೆಯಲಿರುವ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಆತಿಥೇಯ ಶ್ರೀಲಂಕಾ ಎದುರು ಕಣಕ್ಕಿಳಿಯಲಿದೆ.
ಲೀಗ್ ಹಂತದ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿರುವ ಕೌರ್ ಬಳಗವು ಎಲ್ಲ ವಿಭಾಗಗಳಲ್ಲಿಯೂ ಉತ್ತಮವಾಗಿದೆ. ಅದರಲ್ಲೂ ಬ್ಯಾಟರ್‌ಗಳು ಉತ್ತಮವಾಗಿ ಆಡುತ್ತಿರುವುದು ಪ್ರಮುಖ ಕಾರಣವಾಗಿದೆ. ಜೆಮಿಮಾ ರಾಡ್ರಿಗಸ್ ಅವರು ದಕ್ಷಿಣ ಆಫ್ರಿಕಾ ಎದುರು ಶತಕ ದಾಖಲಿಸಿದ್ದರು. ಅವರು ಒಟ್ಟು 201 ರನ್ ಕಲೆಹಾಕಿದ್ದಾರೆ. ಪ್ರತೀಕಾ ರಾವಲ್ (164), ಸ್ಮೃತಿ ಮಂದಾನ (148) ಮತ್ತು ದೀಪ್ತಿ ಶರ್ಮಾ (126) ಅವರೂ ಬ್ಯಾಟಿಂಗ್ ವಿಭಾಗವನ್ನು ಗಟ್ಟಿಗೊಳಿಸಿದ್ದಾರೆ. ಆದರೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಮಾತ್ರ ಇನ್ನೂ ದೊಡ್ಡ ಇನಿಂಗ್ಸ್ ಅಡಿಲ್ಲ. ಕಳೆದ ಮೂರು ಪಂದ್ಯಗಳಲ್ಲಿ ಅವರು (ಔಟಾಗದೇ 41, 30 ಮತ್ತು 28 ರನ್) ಎರಡಂಕಿ ತಲುಪಿದ್ದರು.
ತಂಡದ ಬೌಲರ್‌ಗಳೂ ಉತ್ತಮ ಲಯದಲ್ಲಿದ್ಧಾರೆ. ಸ್ನೇಹ ರಾಣಾ ಅವರು ಒಟ್ಟು 11 ವಿಕೆಟ್ ಗಳಿಸಿದ್ದಾರೆ. ಅವರು ದಕ್ಷಿಣ ಆಫ್ರಿಕಾ ಎದುರು ಐದು ವಿಕೆಟ್ ಗೊಂಚಲು ಗಳಿಸಿದ ಸಾಧನೆ ಮಾಡಿದ್ದರು. ಅವರ ಮುಂದೆ ಈಗ ಲಂಕಾ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಸವಾಲು ಇದೆ.
ಲಂಕಾ ತಂಡದ ಬ್ಯಾಟರ್ ಹರ್ಷಿತಾ ಸಮರವಿಕ್ರಮ ಅವರು ಲೀಗ್ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದರು. ಹೋದ ವರ್ಷ ನಡೆದಿದ್ದ ಟಿ20 ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಹರ್ಷಿತಾ ಅವರು ಭಾರತದ ಎದುರು ಅಜೇಯ 69 ರನ್ ಗಳಿಸಿದ್ದರು.
ನಾಯಕಿ ಮತ್ತು ಆಲ್‌ರೌಂಡರ್ ಚಾಮರಿ ಅಟಪಟ್ಟು (88 ರನ್ ಹಾಗೂ 5 ವಿಕೆಟ್) ಅವರು ಅಮೋಘ ಲಯದಲ್ಲಿದ್ದಾರೆ. ಬೌಲರ್ ದೆವಮಿ ವಿಹಾಂಗ್ (9 ವಿಕೆಟ್) ಅವರು ಬೌಲಿಂಗ್ ವಿಭಾಗದ ಪ್ರಮುಖ ಶಕ್ತಿಯಾಗಿದ್ದಾರೆ. ಆದರೆ ಲೀಗ್ ಹಂತದಲ್ಲಿ ಇವರು ಭಾರತದ ಬ್ಯಾಟರ್‌ಗಳ ಎದುರು ಹೆಚ್ಚು ಯಶಸ್ವಿಯಾಗಿರಲಿಲ್ಲ. ಲಂಕಾ ತಂಡವು ಲೀಗ್ ಹಂತದಲ್ಲಿ 2 ಗೆದ್ದು, 2ರಲ್ಲಿ ಸೋತಿತ್ತು.
ಪಂದ್ಯ ಆರಂಭ: ಬೆಳಿಗ್ಗೆ 10
ನೇರಪ್ರಸಾರ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.