ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಗೆ ಈಗ 18ರ ಹುಮ್ಮಸ್ಸು. 43 ವರ್ಷ ವಯಸ್ಸಿನ ಮಹೇಂದ್ರಸಿಂಗ್ ಧೋನಿ ಮತ್ತು 13 ವರ್ಷ ವಯಸ್ಸಿನ ವೈಭವ ಸೂರ್ಯವಂಶಿ ಅವರಿಬ್ಬರೂ ಕಾಣಿಸಿಕೊಳ್ಳಲಿರುವ ಟೂರ್ನಿ ಇದು. ಶನಿವಾರದಿಂದ ಮೇ 25ರವರೆಗೆ ಈ ಕ್ರಿಕೆಟ್ ಉತ್ಸವ ನಡೆಯಲಿದ್ದು, 10 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಹೊಸ ನಿಯಮಗಳು ರೋಚಕತೆ ಹೆಚ್ಚಿಸುವ ನಿರೀಕ್ಷೆ ಇದೆ. ಹೊಸ ಪ್ರತಿಭೆಗಳು ತಮ್ಮ ಸಾಮರ್ಥ್ಯ ಮೆರೆಯಲು ಕಾದಿವೆ. ಹಳೆಯ ಹುಲಿಗಳು ಮತ್ತೊಮ್ಮೆ ಗರ್ಜಿಸಲು ಹಾತೊರೆದಿವೆ. ಝಗಮಗಿಸುವ ಟೂರ್ನಿಯಲ್ಲಿ ಮತ್ತಷ್ಟು ಹೊಸ ದಾಖಲೆಗಳು ಒಡಮೂಡುವ ನಿರೀಕ್ಷೆಯೂ ಗರಿಗೆದರಿದೆ.
ಕೋಲ್ಕತ್ತ: ನೂತನ ನಾಯಕ, ಹೊಸದಾಗಿ ಬಂದ ಆಟಗಾರರ ಸಂಯೋಜನೆಯೊಡನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಶನಿವಾರ ಎದುರಿಸಲಿದೆ. ಮತ್ತೊಮ್ಮೆ ಮೊದಲ ಪ್ರಶಸ್ತಿಯ ನಿರೀಕ್ಷೆಯೊಡನೆ ತನ್ನ ಅಭಿಯಾನ ಆರಂಭಿಸಲಿದೆ.
ಈ ಮಧ್ಯೆ ಹವಾಮಾನ ಇಲಾಖೆ ಶನಿವಾರ ‘ಆರೆಂಜ್ ಅಲರ್ಟ್’ ಘೋಷಿಸಿದ್ದು, ಈಡನ್ ಗಾರ್ಡನ್‌ನಲ್ಲಿ ನಡೆಯುವ ಈ ಪಂದ್ಯ ಮಳೆಯ ಪಾಲಾಗುವ ಸಾಧ್ಯತೆ ದಟ್ಟವಾಗಿದೆ.
31 ವರ್ಷ ವಯಸ್ಸಿನ ರಜತ್ ಪಾಟೀದಾರ್ ಮೊದಲ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೇತೃತ್ವ ವಹಿಸಿದ್ದಾರೆ. ನಾಲ್ಕು ವರ್ಷಗಳಲ್ಲಿ ಅವರು ಮೂರನೇ ನಾಯಕ. ವಿರಾಟ್ ಕೊಹ್ಲಿ 2022ರಲ್ಲಿ ನಾಯಕತ್ವ ತ್ಯಜಿಸಿದ ನಂತರ ಮೂರು ಋತುವಿಗೆ ದಕ್ಷಿಣ ಆಫ್ರಿಕಾದ ಬ್ಯಾಟರ್ ಫಾಫ್ ಡುಪ್ಲೆಸಿ ತಂಡವನ್ನು ಮುನ್ನಡೆಸಿದ್ದರು.
17 ವರ್ಷಗಳ ಹಿಂದೆ ಐಪಿಎಲ್‌ನ ಮೊದಲ ಆವೃತ್ತಿಯ ಉದ್ಘಾಟನಾ ಪಂದ್ಯ ಈ ಎರಡು ತಂಡಗಳ ನಡುವೆ ಇದೇ ಕ್ರೀಡಾಂಗಣದಲ್ಲಿ ನಡೆದಿತ್ತು. ಆ ಪಂದ್ಯದಲ್ಲಿ ಕೋಲ್ಕತ್ತ ತಂಡದ ಬ್ರೆಂಡನ್ ಮೆಕ್ಕಲಂ 158 ರನ್ ಗಳಿಸಿ ಟೂರ್ನಿಯ ಮೊದಲ ಶತಕ ದಾಖಲಿಸಿದ್ದರು. ಆ ಪಂದ್ಯದ ಬಳಿಕ ಹೂಗ್ಲಿ ನದಿಯಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಕೋಲ್ಕತ್ತದ ತಂಡ ಮೂರು ಬಾರಿ ಚಾಂಪಿಯನ್ ಆಗಿದೆ. ಆರ್‌ಸಿಬಿಗೆ ಮಾತ್ರ ಪ್ರಶಸ್ತಿ ಇನ್ನೂ ಕೈಗೆಟುಕಿಲ್ಲ.
ಕೋಲ್ಕತ್ತ ತಂಡದ ನಾಯಕತ್ವವೂ ಬದಲಾವಣೆಯಾಗಿದ್ದು, ಶ್ರೇಯಸ್ ಅಯ್ಯರ್ ಸ್ಥಾನದಲ್ಲಿ ಅಜಿಂಕ್ಯ ರಹಾನೆ ಸಾರಥ್ಯ ವಹಿಸಿದ್ದಾರೆ.
ಇತ್ತೀಚಿ ನಡೆದ ಚಾಂಪಿಯನ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವರುಣ್ ಚಕ್ರವರ್ತಿ ಅವರು ಅನುಭವಿ ವಿರಾಟ್ ಕೊಹ್ಲಿ ಅವರನ್ನು ಹೇಗೆ ಕಟ್ಟಿಹಾಕ ಬಲ್ಲರು ಎಂಬ ಕುತೂಹಲ ಮೂಡಿದೆ. ನೆಟ್ಸ್‌ನಲ್ಲಿ ಕೊಹ್ಲಿ ಅವರು ಸ್ಪಿನ್ ದಾಳಿಯನ್ನು ಎದುರಿಸುವ ಕಡೆಗೇ ಹೆಚ್ಚು ಲಕ್ಷ್ಯ ನೀಡಿದರು.
ವೆಸ್ಟ್ ಇಂಡೀಸಿನ 36 ವರ್ಷ ವಯಸ್ಸಿನ ಆಲ್‌ರೌಂಡರ್ ಸುನಿಲ್ ನಾರಾಯಣ್ ಅವರು ಕೋಲ್ಕತ್ತದ ಪ್ರಮುಖ ಆಟಗಾರ. ಇಲ್ಲಿನ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ವರುಣ್ ಚಕ್ರವರ್ತಿ ಅವರ ಜೊತೆ ನಾರಾಯಣ್ ಅಪಾಯಕಾರಿ ಸಂಯೋಜನೆ ಆಗಬಲ್ಲರು. ಆರ್‌ಸಿಬಿ ಬ್ಯಾಟಿಂಗ್ ಕ್ರಮಾಂಕದಲ್ಲೂ ಹೊಸತನ ಕಾಣಲಿದೆ. ಕೊಹ್ಲಿ ಅವರೊಂದಿಗೆ ಆಸ್ಟ್ರೇಲಿಯಾದ ಆಕ್ರಮಣಕಾರಿ ಆಟಗಾರ ಫಿಲ್ ಸಾಲ್ಟ್ ಆಡಲು ಇಳಿಯಲಿದ್ದಾರೆ. ತಂಡದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್, ಟಿಮ್ ಡೇವಿಡ್, ಜಿತೇಶ್ ಶರ್ಮಾ ಅಂಥ ನುರಿತ ಫಿನಿಷರ್‌ಗಳಿದ್ದಾರೆ.
ಅನುಭವಿ ಮೊಹಮ್ಮದ್ ಸಿರಾಜ್ ಅವರ ಅನುಪಸ್ಥಿತಿಯಲ್ಲಿ ವೇಗದ ಬೌಲಿಂಗ್ ಹೊಣೆ ಜೋಶ್ ಹ್ಯಾಜಲ್‌ವುಡ್ ಮತ್ತು ಅನುಭವಿ ಭುವನೇಶ್ವರ ಕುಮಾರ್ ಹೆಗಲೇರಲಿದೆ. ಕೃಣಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್ ಅಂಥ ಆಲ್‌ರೌಂಡರ್‌ಗಳೂ ತಂಡದಲ್ಲಿದ್ದಾರೆ.
ಈ ಬಾರಿ ಐಪಿಎಲ್ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ನಾಯಕರನ್ನು ಕಾಣುತ್ತಿದೆ. ಜೊತೆಗೇ ಕೆಲವು ಆಟಗಾರರು ‘ಸ್ಟಾಪ್‌ಗ್ಯಾಪ್’ ಆಧಾರದಲ್ಲೂ ನಾಯಕರಾಗಿದ್ದಾರೆ.
ಭಾರತ ತಂಡದಲ್ಲಿ ಒಂದೂ ಟಿ20 ಪಂದ್ಯ ಆಡದ ರಜತ್ ಪಾಟೀದಾರ್, ವಿರಾಟ್ ಕೊಹ್ಲಿ ಅಂಥ ಅನುಭವಿಯಿದ್ದರೂ ಆರ್‌ಸಿಬಿ ತಂಡದ ನಾಯಕತ್ವ ವಹಿಸುತ್ತಿದ್ದಾರೆ. ಅಕ್ಷರ್ ಪಟೇಲ್ ಅವರಿಗೆ ಡೆಲ್ಲಿ ಕ್ಯಾಪಿಟಲ್ಸ್ ಸಾರಥ್ಯ ಒಲಿದಿದೆ. ಈ ಹಿಂದಿನ ಋತುವಿನಲ್ಲಿ ಕೋಲ್ಕತ್ತ ತಂಡಕ್ಕೆ ನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಈ ಬಾರಿ ಪಂಜಾಬ್ ಕಿಂಗ್ಸ್ ನಾಯಕ. ಅವರ ಸ್ಥಾನದಲ್ಲಿ ಅಜಿಂಕ್ಯ ರಹಾನೆ ಅವರು ಕೋಲ್ಕತ್ತ ನೈಟ್ ರೈಡರ್ಸ್ ಕಪ್ತಾನರಾಗಿದ್ದಾರೆ. ಬೆರಳಿನ ಗಾಯದಿಂದ ಚೇತರಿಸಿಕೊಳ್ಳುತ್ತಿ ರುವ ಸಂಜು ಸ್ಯಾಮ್ಸನ್ ಬದಲು ಯುವ ಬ್ಯಾಟರ್ ರಿಯಾನ್ ಪರಾಗ್ ಮೊದಲ ಮೂರು ಪಂದ್ಯಗಳಿಗೆ ರಾಜಸ್ಥಾನ ರಾಯಲ್ಸ್ ತಂಡದ ನೇತೃತ್ವ ವಹಿಸುವರು.
ಮೂರು ಪಂದ್ಯಗಳಲ್ಲಿ ನಿಗದಿತ ಅವಧಿಯಲ್ಲಿ ಓವರುಗಳನ್ನು ಪೂರೈಸದ ಕಾರಣ ಹಾರ್ದಿಕ್ ಪಾಂಡ್ಯ ಅವರು ಒಂದು ಪಂದ್ಯದ ನಿಷೇಧ ಅನುಭವಿ ಸುತ್ತಿದ್ದು, ಮುಂಬೈ ಇಂಡಿಯನ್ಸ್ ತಂಡದ ಮೊದಲ ಪಂದ್ಯಕ್ಕೆ ನಾಯಕತ್ವವು ಸೂರ್ಯಕುಮಾರ್ ಯಾದವ್ ಹೆಗಲೇರಿದೆ.
2024ರಲ್ಲಿ ಡೆಲ್ಲಿ ತಂಡದ ನಾಯಕರಾಗಿದ್ದ ರಿಷಭ್ ಪಂತ್ ಅವರು ಈ ಸಲ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಲಿ ದ್ದಾರೆ. ಮೆಗಾ ಹರಾಜಿನಲ್ಲಿ ಅತ್ಯಧಿಕ ಮೊತ್ತ (₹27 ಕೋಟಿ) ಪಡೆದ ಪಂತ್ ಅವರು ಟೀಕಾಕಾರರ ಬಾಯಿ ಮುಚ್ಚಿಸುವ ಸವಾಲು ಎದುರಿಸುತ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಅವರು ತಂಡದಲ್ಲಿದ್ದರೂ ಆಡುವ ಅವಕಾಶ ಪಡೆದುಕೊಂಡಿರಲಿಲ್ಲ. ಇಲ್ಲಿ ಉತ್ತಮವಾಗಿ ಆಡಿ ತಾವು ಚುಟುಕು ಮಾದರಿಯಲ್ಲೂ ಆಕ್ರಮಣದ ಆಟಕ್ಕೆ ಸೈ ಎಂದು ಸಾಬೀತುಪಡಿಸಿಕೊಳ್ಳುವ ಸವಾಲು ಅವರ ಮುಂದಿದೆ.
ಜಸ್‌ಪ್ರೀತ್ ಬೂಮ್ರಾ ಅವರ ಫಿಟ್ನೆಸ್ ಕುರಿತು ಇನ್ನೂ ಸ್ಪಷ್ಟತೆ ಲಭಿಸಿಲ್ಲ. ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಅವರು ಆರೈಕೆಯಲ್ಲಿದ್ದು ಫಿಟ್ನೆಸ್ ಪರಿಶೀಲನೆಗೆ ಒಳಗಾಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಅವರು ಪ್ರಮುಖ ಅಸ್ತ್ರವಾಗಿದ್ದಾರೆ.
2024ರಲ್ಲಿ ಚುಟುಕು ವಿಶ್ವಕಪ್ ಗೆದ್ದ ನಂತರ ಅಂತರಾಷ್ಟ್ರೀಯ ಟಿ20ಗೆ ವಿದಾಯ ಹೇಳಿದ್ದರೂ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಐಪಿಎಲ್‌ನಲ್ಲಿ ಈಗಲೂ ಪ್ರಮುಖ ತಾರೆಗಳಾಗಿ ಉಳಿದಿದ್ದಾರೆ. ಕೊಹ್ಲಿ, ಕಳೆದ ಸಾಲಿನಲ್ಲಿ 741 ರನ್‌ಗಳೊಡನೆ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ಗೌರವಕ್ಕೆ ಪಾತ್ರರಾಗಿದ್ದರು. ರೋಹಿತ್ ಅವರೂ ತಮ್ಮ ವೈಭವದ ಆಟಕ್ಕೆ ಮರಳಲು ತುದಿಗಾಲಲ್ಲಿ ನಿಂತಿದ್ದಾರೆ.
ಈ ಬಾರಿಯ ಐಪಿಎಲ್ ದಿಗ್ಗಜ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರಿಗೆ ಆಟಗಾರನಾಗಿ ಕೊನೆಯದಾಗಬಹುದು ಎಂಬ ಚರ್ಚೆಯೂ ನಡೆಯುತ್ತಿದೆ. 43 ವರ್ಷ ವಯಸ್ಸಿನ ಧೋನಿ 2020ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೂ, ಐಪಿಎಲ್‌ನಲ್ಲಿ ಮುಂದುವರಿದಿದ್ದಾರೆ.
ಅಭಿಮಾನಿಗಳ ಪಾಲಿಗೆ ಮೆಚ್ಚಿನ ಆಟಗಾರರಾಗಿರುವ ಧೋನಿ ಈ ಹಿಂದಿನಂತೆ ಮ್ಯಾಚ್ ವಿನ್ನರ್ ಎನಿಸದಿದ್ದರೂ ಈ ಚಾಣಾಕ್ಷ ಆಟಗಾರನ ಉಪಸ್ಥಿತಿ ತಂಡಕ್ಕೆ ಅನುಕೂಲಕರವಾಗಲಿದೆ. ಆಟದ ಸೂಕ್ಷ್ಮತೆ ಅರಿಯುವಲ್ಲಿ, ಕ್ಷೇತ್ರ ರಕ್ಷಣೆ ನಿಯೋಜಿಸುವಲ್ಲಿ ಮತ್ತು ಫಿನಿಷಿಂಗ್‌ನಲ್ಲಿ ಅವರ ಕೌಶಲ ಮಸುಕಾಗಿಲ್ಲ.
ಅವರಿಗಿಂತ ಸರಿಯಾಗಿ 30 ವರ್ಷ ಕಿರಿಯ ಆಟಗಾರ ವೈಭವ ಸೂರ್ಯವಂಶಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಆದರೆ ಅವರಿಗೆ ಆಡುವ ಅವಕಾಶ ದೊರೆಯಲಿದೆಯೇ ಎಂಬ ಪ್ರಶ್ನೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.