ADVERTISEMENT

ಐಪಿಎಲ್‌ನಲ್ಲಿ ಭಾರತದ ಆಟಗಾರರಷ್ಟೇ ಆಡಿದರೆ ದೇಶಿ ಟೂರ್ನಿಯಂತಾಗುತ್ತದೆ: ಸಿಎಸ್‌ಕೆ

ಏಜೆನ್ಸೀಸ್
Published 12 ಮೇ 2020, 12:23 IST
Last Updated 12 ಮೇ 2020, 12:23 IST
   

ಚೆನ್ನೈ: ಕೋವಿಡ್‌–19 ನಿಂದ ಉಂಟಾಗಿರುವ ಸಂಕಷ್ಟದ ಸನ್ನಿವೇಶವನ್ನು ಗಮನದಲ್ಲಿರಿಸಿ ಮುಂದಿನ ದಿನಗಳಲ್ಲಿ ಐಪಿಎಲ್‌ ಟೂರ್ನಿಯನ್ನು ಭಾರತದ ಆಟಗಾರರನ್ನು ಮಾತ್ರವೇ ಒಳಗೊಂಡಂತೆ ನಡೆಸಬಹುದು ಎಂದು ರಾಜಸ್ಥಾನ ರಾಯಲ್ಸ್‌ ಪ್ರಾಂಚೈಸ್‌ ನೀಡಿರುವ ಸಲಹೆಯನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ನಿರಾಕರಿಸಿದೆ.

ಸದ್ಯ ಐಪಿಎಲ್‌ ಟೂರ್ನಿಯನ್ನು ಕೋವಿಡ್‌–19 ಭೀತಿಯಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಆಸ್ಟ್ರೇಲಿಯಾದಲ್ಲಿ ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ ನಡೆಯಬೇಕಿರುವ ಟಿ–20 ವಿಶ್ವಕಪ್‌ ರದ್ದಾದರೆ, ಅದೇ ವೇಳೆ ಭಾರತದಲ್ಲಿ ಐಪಿಎಲ್‌ ನಡೆಸಲು ಯೋಜಿಸಲಾಗುತ್ತಿದೆ.

ರಾಜಸ್ಥಾನ ಪ್ರಾಂಚೈಸ್‌ ಸಲಹೆ ಸಂಬಂಧ ಪ್ರತಿಕ್ರಿಯಿಸಿರುವ ಚೆನ್ನೈ, ‘ಕೇವಲ ಭಾರತೀಯ ಆಟಗಾರರೊಂದಿಗೆ ಐಪಿಎಲ್‌ ಆಡುವ ವಿಚಾರದಲ್ಲಿ ಸಿಎಸ್‌ಕೆಗೆ ಆಸಕ್ತಿಯಿಲ್ಲ. ಆ ರೀತಿಯಲ್ಲಿ ಆಡುವುದಾದರೆ ಅದು ಇನ್ನೊಂದು ಸೈಯದ್‌ ಮುಷ್ತಾಕ್‌ ಅಲಿ (ದೇಶೀಯ ಟಿ20) ಟೂರ್ನಿಯಂತಾಗಲಿದೆ. ಸದ್ಯ ಪರಿಸ್ಥಿತಿ ಹದಗೆಡುವುದರಿಂದ ಈ ಸಂಬಂಧ ಬಿಸಿಸಿಐನೊಂದಿಗೆ ಚರ್ಚೆ ನಡೆಸಿಲ್ಲ’ ಎಂದು ಹೇಳಿರುವುದಾಗಿ ತಂಡದ ಮೂಲಗಳು ತಿಳಿಸಿವೆ.

ADVERTISEMENT

‘ಈ ವರ್ಷದ ಕೊನೆಯಲ್ಲಿ ನಾವು ಐಪಿಎಲ್‌ ಆಡುವ ವಿಶ್ವಾಸ ಇಟ್ಟುಕೊಳ್ಳೋಣ’ ಎಂದಿರುವುದಾಗಿಯೂ ವರದಿಯಾಗಿದೆ.

ಐಪಿಎಲ್‌ನಲ್ಲಿ ಸಿಎಸ್‌ಕೆ ಇದುವರೆಗೆ ಮೂರು ಬಾರಿ ಚಾಂಪಿಯನ್‌ ಆಗಿದೆ. ನಾಲ್ಕು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಬಳಿಕ ಅತ್ಯಂತ ಯಶಸ್ವಿ ತಂಡ ಎನಿಸಿದೆ.

ಒಂದುವೇಳೆ ಈ ಬಾರಿ ಐಪಿಎಲ್‌ ನಡೆಯದಿದ್ದರೆ, ಕ್ರಿಕೆಟ್‌ ಆಸ್ಟ್ರೇಲಿಯಾ ರೀತಿಯಲ್ಲಿ ಆರ್ಥಿಕ ಸಂಕಷ್ಟ ಎದುರಿಸಬೇಕಾಗುವ ಭೀತಿಯಲ್ಲಿರುವ ಬಿಸಿಸಿಐ, ಟಿ20 ಟೂರ್ನಿ ಆಯೋಜಿಸಲು ಅತ್ಯಂತ ಉತ್ಸುಕವಾಗಿದೆ.

‘ಈ ಬಾರಿಯ ಐಪಿಎಲ್‌ ಟೂರ್ನಿ ನಡೆಯದಿದ್ದರೆ ಮಂಡಳಿಗೆ (ಬಿಸಿಸಿಐ) ಸುಮಾರು ₹ 4 ಸಾವಿರ ಕೋಟಿ ನಷ್ಟ ಉಂಟಾಗಲಿದೆ. ಇದು ಮಂಡಳಿಯನ್ನು ದೊಡ್ಡ ಸಂಕಷ್ಟಕ್ಕೆ ದೂಡಲಿದೆ’ ಎಂದು ಬಿಸಿಸಿಐ ಖಜಾಂಚಿ ಅರುಣ್‌ ಧುಮಾಲ್‌ ಹೇಳಿದ್ದಾರೆ.

ದೇಶದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬಿಸಿಸಿಐ ಮತ್ತು ಐಪಿಎಲ್‌ ಆಡಳಿತಾಧಿಕಾರಿಗಳು ಟೂರ್ನಿ ಆಯೋಜನೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.