ADVERTISEMENT

IPL-2020: ರೋಹಿತ್ ಶರ್ಮಾ ಗಾಯದ ಸಮಸ್ಯೆ ಬಗ್ಗೆ ಗೊಂದಲ

ಏಜೆನ್ಸೀಸ್
Published 28 ಅಕ್ಟೋಬರ್ 2020, 11:56 IST
Last Updated 28 ಅಕ್ಟೋಬರ್ 2020, 11:56 IST
ರೋಹಿತ್‌ ಶರ್ಮಾ
ರೋಹಿತ್‌ ಶರ್ಮಾ    

ಅಬುಧಾಬಿ: ಐಪಿಎಲ್‌–2020 ಟೂರ್ನಿ ವೇಳೆ ಗಾಯಗೊಂಡಿರುವ ರೋಹಿತ್‌ ಶರ್ಮಾ ಅವರನ್ನು ಕೈಬಿಟ್ಟು ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುವ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಸೋಮವಾರ ಪ್ರಕಟಿಸಿತ್ತು. ಆದರೆ, ಇದೀಗ ಫಿಟ್‌ನೆಸ್‌ ಸಾಬೀತುಪಡಿಸಿದರೆ ತಂಡದಲ್ಲಿ ಸ್ಥಾನ ನೀಡಲಾಗುವುದು ಎಂದು ಮಂಡಳಿಯ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದ್ದು, ರೋಹಿತ್‌ ಗಾಯದ ಸಮಸ್ಯೆ ಬಗ್ಗೆ ಗೊಂದಲ ಮೂಡಿದೆ.

ತಂಡದ ಆಯ್ಕೆ ಸಂಬಂಧ ಪ್ರಕಟಣೆ ಹೊರಡಿಸಿದ್ದ ಬಿಸಿಸಿಐ, ಸದ್ಯ ರೋಹಿತ್‌ ಹಾಗೂ ಇಶಾಂತ್ ಶರ್ಮಾ ಗಾಯಗೊಂಡಿರುವ ಕಾರಣ ನಿಯಮದ ಪ್ರಕಾರ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಈ ಆಟಗಾರರ ಫಿಟ್‌ನೆಸ್‌ ಮೇಲೆ ನಿಗಾವಹಿಸಲಾಗುವುದು ಎಂದು ಉಲ್ಲೇಖಿಸಿತ್ತು. ಅದೇ ದಿನ ರೋಹಿತ್ ಅವರು ನೆಟ್ಸ್‌ನಲ್ಲಿ ಅಭ್ಯಾಸದಲ್ಲಿ ತೊಡಗಿಕೊಂಡಿದ್ದ ವಿಡಿಯೊವನ್ನು ಮುಂಬೈ ಇಂಡಿಯನ್ಸ್ ಪ್ರಾಂಚೈಸ್‌ ಹಂಚಿಕೊಂಡಿತ್ತು. ಇದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ರೋಹಿತ್‌ ಅವರ ಗಾಯದ ಸಮಸ್ಯೆಯ ಗಂಭೀರತೆ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ. ಆದರೆ ಬಿಸಿಸಿಐ ಮೂಲಗಳು, ‘ನಾವು ಆರಂಭದಲ್ಲಿ ಅಂದುಕೊಂಡಿದ್ದಕ್ಕಿಂತಲೂ ಗಂಭೀರವಾಗಿ ರೋಹಿತ್ ಗಾಯಗೊಂಡಿದ್ದಾರೆ. ಪ್ರಾಂಚೈಸ್‌ ಸೋಮವಾರ ಬಿಡುಗಡೆ ಮಾಡಿರುವ ವಿಡಿಯೊ ಸದ್ಯದ ಸನ್ನಿವೇಶದ್ದಲ್ಲ’ ಎಂದು ಹೇಳಿವೆ.

ADVERTISEMENT

ಆಸ್ಟ್ರೇಲಿಯಾ ಪ್ರವಾಸಕ್ಕೆ ರೋಹಿತ್ ಅವರನ್ನು ಆಯ್ಕೆ ಮಾಡದ ಬಗ್ಗೆ ಹಲವು ಹಿರಿಯ ಕ್ರಿಕೆಟಿಗರು ಪ್ರಶ್ನೆ ಮಾಡಿದ್ದಾರೆ. ಮುಂಬೈ ಪ್ರಾಂಚೈಸ್‌ ಬಿಡುಗಡೆ ಮಾಡಿದ್ದ ವಿಡಿಯೊವನ್ನು ಉಲ್ಲೇಖಿಸಿ ಮಾತನಾಡಿರುವ ಸುನೀಲ್ ಗವಾಸ್ಕರ್, ‘ನಾವು ಇನ್ನೂ ಒಂದೂವರೆ ತಿಂಗಳ ನಂತರ ನಡೆಯಲಿರುವ ಟೆಸ್ಟ್ ಸರಣಿ ಬಗ್ಗೆ ಮಾತನಾಡುತ್ತಿದ್ದೇವೆ. ರೋಹಿತ್ ಅವರು, ಮುಂಬೈ ಪರವಾಗಿ ಅಭ್ಯಾಸ ನಡೆಸುತ್ತಿದ್ದಾರೆ ಎಂದಾದರೆ, ಅವರ ಗಾಯದ ಸ್ವರೂಪ ಯಾವ ರೀತಿಯದ್ದು ಎಂಬುದು ನನಗೆ ಗೊತ್ತಾಗುತ್ತಿಲ್ಲ. ನಿಜವಾಗಿ ಸಮಸ್ಯೆ ಏನು ಎಂಬುದರ ಬಗ್ಗೆ ಪಾರದರ್ಶಕತೆ ಇರಬೇಕಾಗಿದೆ’ ಎಂದು ಹೇಳಿದ್ದಾರೆ.

ಗಾಯಾಳು ರೋಹಿತ್ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುವ ಭಾರತ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿಲ್ಲ. ಆದರೆ ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡದ ಆಟಗಾರ ಮಯಂಕ್ ಅಗರವಾಲ್ ಕೂಡ ಗಾಯಗೊಂಡಿದ್ದು, ಅವರನ್ನೇಕೆ ಮೂರು ಮಾದರಿಗಳಿಗೂ ಆಯ್ಕೆ ಮಾಡಲಾಗಿದೆ ಎಂದು ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಜಾ ಪ್ರಶ್ನಿಸಿದ್ದಾರೆ.

ಐಪಿಎಲ್‌ನಲ್ಲಿ ಆಡುತ್ತಿರುವ ಮಂಡಳಿಯ ಆಟಗಾರರ ಮೇಲ್ವಿಚಾರಣೆ ಸಲುವಾಗಿ ಬಿಸಿಸಿಐ ಫಿಸಿಯೊ ನಿತಿನ್‌ ಪಟೇಲ್ ಅವರು ಯುಎಇಗೆ ತೆರಳಿದ್ದು, ತಂಡಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಐಪಿಎಲ್ ನವೆಂಬರ್‌ 10ರಂದು ಮುಕ್ತಾಯವಾದ ಬಳಿಕ ಆಟಗಾರರ ಫಿಟ್‌ನೆಸ್‌ ಪರೀಕ್ಷೆ ನಡೆಸಿ, ಆಯ್ಕೆ ಸಮಿತಿಗೆ ವರದಿ ಸಲ್ಲಿಸಲಿದ್ದಾರೆ.

ಇದೇ ತಿಂಗಳು 18ರಂದು ಮುಂಬೈ ಮತ್ತು ಪಂಜಾಬ್‌ ತಂಡಗಳು ಸೆಣಸಾಟ ನಡೆಸಿದ್ದವು. ಪಂದ್ಯವು ಡಬಲ್‌ ಸೂಪರ್ ‌ಓವರ್‌ಗೆ ಸಾಕ್ಷಿಯಾಗಿತ್ತು. ಮೊದಲ ಸೂಪರ್‌ ಓವರ್‌ನಲ್ಲಿ ರನ್‌ಗಾಗಿ ಓಡುವ ವೇಳೆ ರೋಹಿತ್‌ ಗಾಯಗೊಂಡಿದ್ದರು.ಹೀಗಾಗಿ ಅವರು ಕಳೆದೆರಡು ಪಂದ್ಯಗಳಲ್ಲಿ ಕಣಕ್ಕಿಳಿದಿರಲಿಲ್ಲ. ಇಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆಡುವುದೂ ಖಚಿತವಾಗಿಲ್ಲ. ಅನುಭವಿ ಆಟಗಾರ ಕೀರನ್‌ ಪೊಲಾರ್ಡ್‌ ಅವರು ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಜಸ್ಥಾನ ರಾಯಲ್ಸ್‌ ವಿರುದ್ಧ ಮುಂಬೈ ತಂಡ ಮುನ್ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.