ADVERTISEMENT

RR vs MI: ರಾಜಸ್ಥಾನವನ್ನು ಮಣಿಸಿ ಹ್ಯಾಟ್ರಿಕ್ ಜಯದ ಕನಸು ನನಸಾಗಿಸುವುದೇ ಮುಂಬೈ?

ರಯಾನ್ ಪರಾಗ್, ಜಯದೇವ್ ಉನದ್ಕತ್ ಮೇಲೆ ಕಣ್ಣು; ರೋಹಿತ್–ಸ್ಟೀವ್ ಸ್ಮಿತ್ ಮುಖಾಮುಖಿ

ಪಿಟಿಐ
Published 6 ಅಕ್ಟೋಬರ್ 2020, 13:03 IST
Last Updated 6 ಅಕ್ಟೋಬರ್ 2020, 13:03 IST
ರೋಹಿತ್ ಶರ್ಮಾ ಮತ್ತು ಜೇಮ್ಸ್ ಪ್ಯಾಟಿನ್ಸನ್ –ಪಿಟಿಐ ಚಿತ್ರ
ರೋಹಿತ್ ಶರ್ಮಾ ಮತ್ತು ಜೇಮ್ಸ್ ಪ್ಯಾಟಿನ್ಸನ್ –ಪಿಟಿಐ ಚಿತ್ರ   

ಅಬುಧಾಬಿ: ಹ್ಯಾಟ್ರಿಕ್ ಜಯದ ಕನಸಿನಲ್ಲಿರುವ ಮುಂಬೈ ಇಂಡಿಯನ್ಸ್ ಮತ್ತು ಸತತ ಮೂರನೇ ಸೋಲು ತಪ್ಪಿಸಿಕೊಳ್ಳುವ ಇರಾದೆ ಹೊಂದಿರುವ ರಾಜಸ್ಥಾನ ರಾಯಲ್ಸ್ ತಂಡಗಳು ಮಂಗಳವಾರ ಇಲ್ಲಿ ಸೆಣಸಲಿವೆ.

ಮೊದಲ ‍ಪಂದ್ಯದಲ್ಲಿ ಸೋತು ನಿರಾಸೆ ಹೊಂದಿದ್ದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎರಡನೇ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳಿತ್ತು. ಆದರೆ ಮೂರನೇ ಪಂದ್ಯದಲ್ಲಿ ಆರ್‌ಸಿಬಿ ಎದುರು ಗೆಲುವಿನ ಅಂಚಿನಲ್ಲಿ ಎಡವಿತ್ತು. ಕಳೆದ ಎರಡು ಪಂದ್ಯಗಳಲ್ಲಿ ಸಂಪೂರ್ಣ ಆಧಿಪತ್ಯ ಸ್ಥಾಪಿಸಿ ಜಯ ಗಳಿಸಿತ್ತು. ಆ ಪಂದ್ಯಗಳಲ್ಲಿ ಕ್ರಮವಾಗಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು 48 ರನ್‌ಗಳಿಂದ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಬಳಗವನ್ನು 34 ರನ್‌ಗಳಿಂದ ಸೋಲಿಸಿತ್ತು.

ಅತ್ತ ರಾಜಸ್ಥಾನ ರಾಯಲ್ಸ್ ಮೊದಲ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಭವ ಮೆರೆದು ಗೆಲುವಿನ ಸಂಭ್ರಮದ ಅಲೆಯಲ್ಲಿ ತೇಲಿತ್ತು. ಆ ಪಂದ್ಯಗಳನ್ನು ಅದು ಶಾರ್ಜಾದಲ್ಲಿ ಆಡಿತ್ತು. ಕ್ರಮವಾಗಿ ದುಬೈ ಮತ್ತು ಅಬುಧಾಬಿಯಲ್ಲಿ ನಡೆದ ಮುಂದಿನ ಎರಡು ಪಂದ್ಯಗಳಲ್ಲಿ ಸೋಲಿನ ದವಡೆಗೆ ಸಿಲುಕಿತ್ತು. ಕಳೆದ ಶನಿವಾರ ನಡೆದ ಪಂದ್ಯದಲ್ಲಂತೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ರಾಜಸ್ಥಾನ ಎಂಟು ವಿಕೆಟ್‌ಗಳಿಂದ ಸೋಲುಂಡಿತ್ತು. ಅದೇ ಅಂಗಣದಲ್ಲಿ ಇದೀಗ ಮುಂಬೈ ಇಂಡಿಯನ್ಸ್ ಸವಾಲನ್ನು ಆ ತಂಡ ಎದುರಿಸಬೇಕಾಗಿದೆ.

ADVERTISEMENT

ಬ್ಯಾಟಿಂಗ್‌ನಲ್ಲೂ ಬೌಲಿಂಗ್‌ನಲ್ಲೂ ಸಮಾನ ಸಾಮರ್ಥ್ಯ ತೋರಲು ಸಾಧ್ಯವಾಗುತ್ತಿರುವುದು ಮುಂಬೈ ಇಂಡಿಯನ್ಸ್‌ ತಂಡದ ಯಶಸ್ಸಿಗೆ ಪ್ರಮುಖ ಕಾರಣ. ರೋಹಿತ್ ಶರ್ಮಾ ಈಗಾಗಲೇ 176 ರನ್ ಗಳಿಸಿದ್ದು ಕ್ವಿಂಟನ್ ಡಿ ಕಾಕ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕೀರನ್ ಪೊಲಾರ್ಡ್ ಮತ್ತು ಇಶಾನ್ ಕಿಶನ್ ಬ್ಯಾಟಿನಿಂದ ರನ್‌ಗಳು ಸರಾಗವಾಗಿ ಹರಿದು ಬರುತ್ತಿವೆ. ಅಂತಿಮ ಓವರ್‌ಗಳಲ್ಲಿ ಹಾರ್ದಿಕ್ ಪಾಂಡ್ಯ ಸಾಕಷ್ಟು ರನ್ ತಂದುಕೊಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಹಾರ್ದಿಕ್ ಅವರ ಸಹೋದರ ಕೃಣಾಲ್ ಪಾಂಡ್ಯ ಕೂಡ ಸಿಕ್ಸರ್‌ಗಳ ಮೂಲಕ ರಂಜಿಸಿದ್ದರು.

ಜೇಮ್ಸ್ ಪ್ಯಾಟಿನ್ಸನ್, ಜಸ್‌ಪ್ರೀತ್ ಬೂಮ್ರಾ ಮತ್ತು ಟ್ರೆಂಟ್ ಬೌಲ್ಟ್ ಅವರ ಜೊತೆ ಹಾರ್ದಿಕ್ ಪಾಂಡ್ಯ ಕೂಡ ಸೇರಿ ತಂಡದ ಬೌಲಿಂಗ್ ವಿಭಾಗವೂ ಗಟ್ಟಿಯಾಗಿದೆ. ಸ್ಪಿನ್ ದಾಳಿಯಲ್ಲಿ ಕೃಣಾಲ್ ‍ಪಾಂಡ್ಯ ಕೂಡ ಮೊನಚು ತೋರಬಲ್ಲರು.

ಬೆನ್ ಸ್ಟೋಕ್ಸ್‌ ಲಭ್ಯ ಇಲ್ಲ
ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಯುಎಇಗೆ ಬಂದಿಳಿದಿದ್ದರೂ ಈ ಪಂದ್ಯಕ್ಕೆ ಲಭ್ಯ ಇರುವುದಿಲ್ಲ. ಕ್ವಾರಂಟೈನ್ ಅವಧಿ ಮುಗಿಸಿ ಈ ತಿಂಗಳ 11ರಿಂದ ಅವರು ಕಣಕ್ಕೆ ಇಳಿಯಲಿದ್ದಾರೆ. ಭರವಸೆಯ ಆಟಗಾರರಾದ ಇಂಗ್ಲೆಂಡ್‌ನ ಜೋಸ್ ಬಟ್ಲರ್ ಮತ್ತು ಜಯದೇವ ಉನದ್ಕತ್ ಅವರಿಗೆ ನಿರೀಕ್ಷೆಗೆ ತಕ್ಕಂತೆ ಆಡಲು ಸಾಧ್ಯವಾಗದೇ ಇರುವುದು ರಾಜಸ್ಥಾನ ರಾಯಲ್ಸ್ ತಂಡದ ಚಿಂತೆಗೆ ಕಾರಣವಾಗಿದೆ. ಯುವ ಆಟಗಾರ ರಿಯಾನ್ ಪರಾಗ್ ಅವರಿಗೂ ಕಳೆದ ಬಾರಿಯಂತೆ ಮಿಂಚಲು ಆಗುತ್ತಿಲ್ಲ. ಆದ್ದರಿಂದ ಅವರನ್ನು ಬೆಂಚ್‌ನಲ್ಲಿ ಕೂರಿಸಿ ಮತ್ತೊಬ್ಬ ಯುವ ಆಟಗಾರ ಯಶಸ್ವಿ ಜೈಸ್ವಾಲ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ಪರಿಣಾಮ ಬೀರಲು ಉನದ್ಕತ್‌ಗೆ ಸಾಧ್ಯವಾಗದೇ ಇರುವುದರಿಂದ ಸ್ಯಾಮ್ ಕರನ್ ಮತ್ತು ಜೊಫ್ರಾ ಆರ್ಚರ್ ಹೆಗಲ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ. ಮಧ್ಯಮ ವೇಗಿಗಳಾದ ವರುಣ್ ಆ್ಯರನ್ ಹಾಗೂ ಕಾರ್ತಿಕ್ ತ್ಯಾಗಿ ಅವರನ್ನು ಪರಿಗಣಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.