ADVERTISEMENT

IPL 2021: ಕನ್ನಡಿಗ ಪ್ರಸಿದ್ಧ ಕೃಷ್ಣ ಹಾಗೂ ಕೀರನ್ ಪೊಲಾರ್ಡ್ ನಡುವೆ ಜಟಾಪಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಸೆಪ್ಟೆಂಬರ್ 2021, 12:50 IST
Last Updated 24 ಸೆಪ್ಟೆಂಬರ್ 2021, 12:50 IST
ಚತ್ರಿ ಕೃಪೆ: ಟ್ವಿಟರ್ ಸ್ಕ್ರೀನ್‌ಶಾಟ್/@pant_fc
ಚತ್ರಿ ಕೃಪೆ: ಟ್ವಿಟರ್ ಸ್ಕ್ರೀನ್‌ಶಾಟ್/@pant_fc   

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತ ನೈಟ್ ರೈಡರ್ಸ್ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಈ ನಡುವೆ ಮುಂಬೈ ಬ್ಯಾಟ್ಸ್‌ಮನ್ ಕೀರನ್ ಪೊಲಾರ್ಡ್ ಹಾಗೂ ಕೆಕೆಆರ್ ವೇಗದ ಬೌಲರ್, ಕನ್ನಡಿಗ ಪ್ರಸಿದ್ಧ ಕೃಷ್ಣ ನಡುವೆ ಬಿಸಿ ಬಿಸಿ ವಾತಾವರಣ ಸೃಷ್ಟಿಯಾಗಿತ್ತು.

ಆಗಲೇ ಸೂರ್ಯ ಕುಮಾರ್ ಯಾದವ್ (5) ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ (55) ವಿಕೆಟ್‌ಗಳನ್ನು ಕಬಳಿಸಿರುವ ಪ್ರಸಿದ್ಧ ಕೃಷ್ಣ, ತಮ್ಮ ನಿಖರ ದಾಳಿಯಿಂದ ಬ್ಯಾಟ್ಸ್‌ಮನ್‌ಗಳ ನಿದ್ದೆಗೆಡಿಸಿದರು.

ಪ್ರಸಿದ್ಧ ಕೃಷ್ಣ ಎಸೆದ ಇನ್ನಿಂಗ್ಸ್‌ನ 15ನೇ ಓವರ್ ವೇಳೆ ಘಟನೆ ನಡೆದಿತ್ತು. ಓವರ್‌ನ ಅಂತಿಮ ಎಸೆತದಲ್ಲಿ ಪೊಲಾರ್ಡ್ ಹೊಡೆಯಲು ಯತ್ನಿಸಿದ ಚೆಂಡು ನೇರವಾಗಿ ಬೌಲರ್ ಪ್ರಸಿದ್ಧ ಕೃಷ್ಣ ಬಳಿ ತೆರಳಿತ್ತು. ಈ ವೇಳೆ ಚೆಂಡನ್ನು ಹಿಡಿಯಲು ವಿಫಲರಾದರೂ ಮರಳಿ ಪೊಲಾರ್ಡ್ ಕಡೆಗೆ ಎಸೆಯುವ ರೀತಿಯಲ್ಲಿ ಕೈಸನ್ನೆ ಮಾಡಿದರು.

ಇದು ಪೊಲಾರ್ಡ್ ಕೋಪಕ್ಕೆ ಕಾರಣವಾಯಿತು. ತಕ್ಷಣವೇ ಪ್ರಸಿದ್ಧ ಅವರನ್ನು ದಿಟ್ಟಿಸಿ ನೋಡಲಾರಂಭಿಸಿದರು. ಪ್ರಸಿದ್ಧ ಕೂಡ ಅಲ್ಲೇ ನಿಂತು ಕ್ಯಾಪ್ ಧರಿಸುತ್ತಾ ಪೊಲಾರ್ಡ್‌ಗೆ ತಕ್ಕ ಉತ್ತರ ನೀಡಿದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿನಡೆಯಿತು.

ಅಂತಿಮವಾಗಿ ಪೊಲಾರ್ಡ್ 21 ರನ್ ಗಳಿಸಿ ರನೌಟ್ ಆದರು. ಅತ್ತ ಪ್ರಸಿದ್ಧ ನಾಲ್ಕು ಓವರ್‌ಗಳಲ್ಲಿ 43 ರನ್ ತೆತ್ತು ಎರಡು ವಿಕೆಟ್ ಕಬಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.