ADVERTISEMENT

IPL: ಮ್ಯಾಕ್ಸ್‌ವೆಲ್-ಚಾಹಲ್ ಗೆಲುವಿನ ರೂವಾರಿ; ಪಂಜಾಬ್ ವಿರುದ್ಧ ಗೆದ್ದ ಆರ್‌ಸಿಬಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಅಕ್ಟೋಬರ್ 2021, 17:52 IST
Last Updated 3 ಅಕ್ಟೋಬರ್ 2021, 17:52 IST
ವಿಕೆಟ್ ಗಳಿಸಿದ ಸಂಭ್ರಮ
ವಿಕೆಟ್ ಗಳಿಸಿದ ಸಂಭ್ರಮ   

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 6 ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸಿದೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಬಳಿಕ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದ ಮೂರನೇ ತಂಡವೆನಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ, ಗ್ಲೆನ್ ಮ್ಯಾಕ್ಸ್‌ವೆಲ್ ಬಿರುಸಿನ ಅರ್ಧಶತಕದ (57) ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 164 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಪಂಜಾಬ್, ಮಯಂಕ್ ಅಗರವಾಲ್ ಅರ್ಧಶತಕದ (57) ಹೋರಾಟದ ಹೊರತಾಗಿಯೂ ಆರು ವಿಕೆಟ್ ನಷ್ಟಕ್ಕೆ 158ರನ್ ಗಳಿಸಲಷ್ಟೇ ಸಮರ್ಥವಾಯಿತು. ಆರ್‌ಸಿಬಿ ಪರ ಮೂರು ವಿಕೆಟ್ ಕಬಳಿಸಿದ ಯಜುವೇಂದ್ರ ಚಾಹಲ್, ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಇದರೊಂದಿಗೆ ಆಡಿರುವ 12 ಪಂದ್ಯಗಳಲ್ಲಿ ಎಂಟು ಗೆಲುವಿನೊಂದಿಗೆ ಒಟ್ಟು 16 ಅಂಕಗಳನ್ನು ಸಂಪಾದಿಸಿರುವ ಆರ್‌ಸಿಬಿ, ಪ್ಲೇ-ಆಫ್‌ಗೆ ಲಗ್ಗೆಯಿಟ್ಟಿದೆ. ಅತ್ತ ಐದನೇ ಸ್ಥಾನದಲ್ಲಿರುವ ಪಂಜಾಬ್ 13 ಪಂದ್ಯಗಳಲ್ಲಿ 10 ಅಂಕಗಳನ್ನು ಹೊಂದಿದ್ದು, ಪ್ಲೇ-ಆಫ್ ಹಾದಿ ಕಠಿಣವೆನಿಸಿದೆ.

ADVERTISEMENT

ಚಾಹಲ್ ಕೈಚಳಕ, ರೋಚಕ ಗೆಲುವು...
ಸವಾಲಿನ ಮೊತ್ತ ಬೆನ್ನತ್ತಿದ ಪಂಜಾಬ್ ತಂಡಕ್ಕೆ ಕೆ.ಎಲ್. ರಾಹುಲ್ ಹಾಗೂ ಮಯಂಕ್ ಅಗರವಾಲ್ ಉತ್ತಮ ಆರಂಭವೊದಗಿಸಿದರು. ಆರ್‌ಸಿಬಿ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ, ಮೊದಲ ವಿಕೆಟ್‌ಗೆ 10.5 ಓವರ್‌ಗಳಲ್ಲಿ 91 ರನ್‌ಗಳ ಜೊತೆಯಾಟ ನೀಡಿದರು.

ಉತ್ತಮವಾಗಿ ಆಡುತ್ತಿದ್ದ ರಾಹುಲ್ (35) ಅವರನ್ನು ಶಹಬಾಜ್ ಅಹ್ಮದ್ ಪೆವಿಲಿಯನ್‌ಗೆ ಮರಳಿಸಿದರು. ನಿಕೋಲಸ್ ಪೂರನ್ (3) ಅವರನ್ನು ಯಜುವೇಂದ್ರ ಚಾಹಲ್ ಹೊರದಬ್ಬುವ ಮೂಲಕ ತಿರುಗೇಟು ನೀಡಿದರು.

ಅತ್ತ ಸಮಯೋಚಿತ ಇನ್ನಿಂಗ್ಸ್ ಕಟ್ಟಿದ ಮಯಂಕ್ ಅಗರವಾಲ್ ಆಕರ್ಷಕ ಅರ್ಧಶತಕ ಸಾಧನೆ ಮಾಡಿದರು. ಆದರೆ ಫಿಫ್ಟಿ ಬೆನ್ನಲ್ಲೇ ಚಾಹಲ್ ಬಲೆಗೆ ಬಿದ್ದರು. ಅಕ್ಷರಶಃ ಜಾದೂ ಮಾಡಿದ ಚಾಹಲ್ (29ಕ್ಕೆ 3 ವಿಕೆಟ್), ಪಂಜಾಬ್ ಓಟಕ್ಕೆ ಕಡಿವಾಣ ಹಾಕಿದರು. ಅಂತಿಮವಾಗಿ ಆರು ವಿಕೆಟ್ ನಷ್ಟಕ್ಕೆ 158 ರನ್ ಗಳಿಸಲಷ್ಟೇ ಸಮರ್ಥವಾಯಿತು. 42 ಎಸೆತಗಳನ್ನು ಎದುರಿಸಿದ ಮಯಂಕ್ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 57 ರನ್ ಗಳಿಸಿದರು. ಇನ್ನುಳಿದಂತೆ ಏಡೆನ್ ಮಾರ್ಕ್ರಂ 20, ಶಾರೂಕ್ ಖಾನ್ 16, ಮೊಯಿಸಿಸ್ ಹೆನ್ರಿಕ್ಸ್ 12* ರನ್ ಗಳಿಸಿದರು.

29 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ ಮ್ಯಾಕ್ಸ್‌ವೆಲ್...
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ತ ಪಡಿಕ್ಕಲ್ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 68 ರನ್ ಪೇರಿಸಿದರು.

ಈ ಹಂತದಲ್ಲಿ ದಾಳಿಗಿಳಿದ ಮೊಯಿಸಿಸ್ ಹೆನ್ರಿಕ್ಸ್, ಆರಂಭಿಕರಾದ ಕೊಹ್ಲಿ, ಪಡಿಕ್ಕಲ್ ಜೊತೆಗೆ ಡ್ಯಾನಿಯಲ್ ಕ್ರಿಸ್ಟಿಯನ್ (0) ಅವರನ್ನು ಹೊರದಬ್ಬಿದರು. ಪಡಿಕ್ಕಲ್ 40 ಹಾಗೂ ವಿರಾಟ್ 25 ರನ್ ಗಳಿಸಿ ಔಟಾದರು. ಪರಿಣಾಮ 73 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡಿತು.

ಬಳಿಕ ಕ್ರೀಸಿಗಿಳಿದ ಗ್ಲೆನ್ ಮ್ಯಾಕ್ಸ್‌ವೆಲ್, ಕೌಂಟರ್ ಅಟ್ಯಾಕ್ ಮಾಡುವ ಮೂಲಕ ಆರ್‌ಸಿಬಿ ರನ್ ಗತಿ ಏರಿಸುವಲ್ಲಿ ನೆರವಾದರು. ಎಬಿ ಡಿವಿಲಿಯರ್ಸ್ ಜೊತೆಗೂಡಿದ ಮ್ಯಾಕ್ಸ್‌ವೆಲ್ 73 ರನ್‌ಗಳ ಮಹತ್ವದ ಜೊತೆಯಾಟ ಕಟ್ಟಿದರು.

ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಮ್ಯಾಕ್ಸ್‌ವೆಲ್ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಈ ಮೂಲಕ ಆರ್‌ಸಿಬಿ ಏಳು ವಿಕೆಟ್ ನಷ್ಟಕ್ಕೆ 164 ರನ್‌ಗಳ ಸವಾಲಿನ ಮೊತ್ತ ಪೇರಿಸಲು ನೆರವಾಯಿತು. ಅತ್ತ ವಿಲಿಯರ್ಸ್ 23 ರನ್ ಗಳಿಸಿದರು. ಇನ್ನುಳಿದಂತೆ ಶಹಬಾಜ್ ಅಹ್ಮದ್ ಎಂಟು ರನ್ ಗಳಿಸಿದರು.

ಪಂಜಾಬ್ ಪರ ಮೊಯಿಸಿಸ್ ಹೆನ್ರಿಕ್ಸ್ (12ಕ್ಕೆ3) ಹಾಗೂ ಮೊಹಮ್ಮದ್ ಶಮಿ (39ಕ್ಕೆ 3) ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.