ADVERTISEMENT

PV Web Exclusive: ಕಷ್ಟಗಳ ತಿದಿಯಲ್ಲಿ ಅರಳಿದ ‘ಚೇತನ’

ವಿಕ್ರಂ ಕಾಂತಿಕೆರೆ
Published 18 ಏಪ್ರಿಲ್ 2021, 7:00 IST
Last Updated 18 ಏಪ್ರಿಲ್ 2021, 7:00 IST
ಚೇತನ್ ಸಕಾರಿಯಾ –ಟ್ವಿಟರ್ ಚಿತ್ರ
ಚೇತನ್ ಸಕಾರಿಯಾ –ಟ್ವಿಟರ್ ಚಿತ್ರ   

ಸಾಮಾಜಿಕ ತಾಣಗಳಲ್ಲಿ ಸದಾ ಸಕ್ರಿಯರಾಗಿರುವ, ಕ್ರೀಡೆ–ರಾಜಕೀಯ–ಸಾಮಾಜಿಕ–ಮಾನವೀಯ ವಿಷಯಗಳಿಗೆ ಸಂಬಂಧಿಸಿದ ಪೋಸ್ಟ್‌ಗಳ ಮೂಲಕ ಗಮನ ಸೆಳೆಯುವ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಏಪ್ರಿಲ್ 13ರಂದು ಟ್ವೀಟ್ ಮಾಡಿದ ವಿಷಯವೊಂದು ಅನೇಕರ ಮನ ಮಿಡಿಯುವಂತೆ ಮಾಡಿತು. ಹಿಂದಿನ ದಿನ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಮಿಂಚಿದ ರಾಜಸ್ಥಾನ್ ರಾಯಲ್ಸ್‌ನ ಚೇತನ್ ಸಕಾರಿಯಾ ಕುರಿತಾಗಿತ್ತು ಆ ಪೋಸ್ಟ್‌.

ಆ ಪಂದ್ಯದ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಸೌರಾಷ್ಟ್ರದ ಚೇತನ್ ಸಕಾರಿಯಾ ಮೂರು ವಿಕೆಟ್‌ ಕಬಳಿಸಿ ಗಮನ ಸೆಳೆದಿದ್ದರು. ಪಂದ್ಯದಲ್ಲಿ ರಾಯಲ್ಸ್ ನಾಲ್ಕು ರನ್‌ಗಳಿಂದ ಸೋತಿದ್ದರೂ ಪಂಜಾಬ್‌ನ ಆರಂಭಿಕ ಜೋಡಿ ಕೆ.ಎಲ್‌.ರಾಹುಲ್‌, ಮಯಂಕ್ ಅಗರವಾಲ್ ಅವರ ವಿಕೆಟ್ ಸೇರಿದಂತೆ ಮೂವರನ್ನು ಪೆವಿಲಿಯನ್‌ಗೆ ಮರಳಿಸಿದ್ದ ಸಕಾರಿಯಾ ಅವರನ್ನು ಕ್ರಿಕೆಟ್ ಪ್ರಿಯರು ಮತ್ತು ತಜ್ಞರು ಕೊಂಡಾಡಿದ್ದರು.

ಸೆಹ್ವಾಗ್ ಹಾಕಿದ್ದ ಪೋಸ್ಟ್‌, ಸಕಾರಿಯಾ ಅವರ ತಾಯಿ ‘ಅರೌಂಡ್‌ ದ ವಿಕೆಟ್’ ಎಂಬ ವೆಬ್‌ಸೈಟ್‌ಗೆ ನೀಡಿದ ಸಂದರ್ಶನವೊಂದರ ಸಾರವಾಗಿತ್ತು. ಅದು, ಹೃದಯ ಕಲಕುವ ಕಥೆಯೊಂದನ್ನು ಹೇಳುತ್ತಿತ್ತು. ಸಕಾರಿಯಾ ತಾಯಿ ಹೇಳಿದ್ದು ಇಷ್ಟು:

ADVERTISEMENT

‘ಬದುಕಿನಲ್ಲಿ ನಾವು ಅನುಭವಿಸಿದ ಸಂಕಷ್ಟ ಹೇಳತೀರದು. ಬಡತನದಲ್ಲೇ ಹೊದ್ದುಹಾಸಿಕೊಂಡ ನಮಗೆ ಇತ್ತೀಚೆಗೆ ಭಾರಿ ದೊಡ್ಡ ಆಘಾತವಾಗಿತ್ತು. ಚೇತನ್‌ಗಿಂತ ಒಂದು ವರ್ಷ ಸಣ್ಣವ, ನಮ್ಮ ಎರಡನೇ ಮಗ ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ. ಆಗ ಚೇತನ್, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿದ್ದ. ಹೀಗಾಗಿ 10 ದಿನಗಳ ಕಾಲ ಆತನಿಗೆ ಸಹೋದರನ ಸಾವಿನ ವಿಷಯ ತಿಳಿಸಲಿಲ್ಲ. ಕರೆ ಮಾಡಿದಾಗಲೆಲ್ಲ ತಂದೆಗೆ ಹುಷಾರಿಲ್ಲ ಎಂದಷ್ಟೇ ಹೇಳುತ್ತಿದ್ದೆವು. ಸಹೋದರನಿಗೆ ಫೋನ್ ಕೊಡಲು ಹೇಳಿದಾಗಲೆಲ್ಲ ಏನೇನೋ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದೆವು. ಇದೆಲ್ಲ ಆಗಿ ಒಂದು ತಿಂಗಳ ನಂತರ ಚೇತನ್‌ಗೆ ಐಪಿಎಲ್‌ ಆಟಗಾರರ ಹರಾಜಿನಲ್ಲಿ ₹ ಒಂದು ಕೋಟಿ 20 ಲಕ್ಷ ಮೊತ್ತ ಲಭಿಸಿತು. ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ತೋರಿದ ಉತ್ತಮ ಸಾಮರ್ಥ್ಯವೇ ಇದಕ್ಕೆ ಕಾರಣ...’

ಸಕಾರಿಯಾ ತಾಯಿಯ ಮಾತಿಗೆ ಪ್ರತಿಕ್ರಿಯಿಸಿದ್ದ ಸೆಹ್ವಾಗ್‌ ‘ಇಂಥ ಅನೇಕ ಕುಟುಂಬಗಳಿಗೆ ಕ್ರಿಕೆಟ್ ಆಟ ಬದುಕಿನ ಆಧಾರ’ ಎಂದು ಹೇಳಿದ್ದರೆ, ಅದಕ್ಕೆ ಉತ್ತರಿಸಿದ ವ್ಯಕ್ತಿಯೊಬ್ಬರು ‘ಐಪಿಎಲ್‌ ಎಂದರೆ ಬರೀ ಮಜಾ ಉಡಾಯಿಸುವ ಆಟ ಎಂದು ಹೇಳುವವರಿಗೆ, ಅನೇಕ ಯುವ ಆಟಗಾರರ ವೃತ್ತಿಜೀವನಕ್ಕೂ ಬದುಕಿಗೂ ಈ ಟೂರ್ನಿ ದಾರಿದೀಪವಾದ ವಿಷಯ ಗೊತ್ತಿಲ್ಲ’ ಎಂದಿದ್ದರು.

ಚೇತನ್ ಸಕಾರಿಯಾ, ತಂಗವೇಲು ನಟರಾಜನ್ ಮುಂತಾದ ಆಟಗಾರರ ಪಾಲಿಗಂತೂ ಈ ಮಾತು ನಿಜ. ಕಷ್ಟದಲ್ಲೇ ಬದುಕಿದ ನಟರಾಜನ್ ಕಳೆದ ಬಾರಿಯ ಐಪಿಎಲ್‌ನಲ್ಲಿ ಮಿಂಚಿದ್ದರೆ, ಈ ಬಾರಿ ಇಂಥ ಅವಕಾಶ ಲಭಿಸಿರುವುದು ಚೇತನ್‌ಗೆ. ಚೇತನ್ ತಂದೆ ಟ್ರಕ್ ಚಾಲಕ. ತಾಯಿ, ಸೀರೆ ಮೇಲೆ ಕಸೂತಿ ಮಾಡಿ ಅಲ್ಪ ಸ್ವಲ್ಪ ಹಣ ಸಂಪಾದಿಸುತ್ತಿದ್ದರು. ಮೂರು ಬಾರಿ ಅಪಘಾತಕ್ಕೆ ಸಿಲುಕಿ ಮೂರು ಶಸ್ತ್ರಕ್ರಿಯೆಗೆ ಒಳಗಾಗಿರುವ ತಂದೆ ಈಗ ಎದ್ದು ನಡೆಯುವ ಸ್ಥಿತಿಯಲ್ಲಿಲ್ಲ. ಬದುಕಿಗೆ ಆಧಾರವಾಗಿದ್ದ ಮಗ ಆತ್ಮಹತ್ಯೆ ಮಾಡಿಕೊಂಡ. ಇಂಥ ಸಂದರ್ಭದಲ್ಲಿ ಐಪಿಎಲ್‌ ಮೂಲಕ ಈ ಕುಟುಂಬಕ್ಕೆ ಅದೃಷ್ಟ ಒಲಿದಿತ್ತು.

ಇದರ ಹಿಂದೆ ಚೇತನ್ ಅವರ ಕಠಿಣ ಪರಿಶ್ರಮ ಮತ್ತು ಅರ್ಪಣಾ ಭಾವದ ಕಥೆಯೂ ಇದೆ. ಸಂಬಂಧಿಕರೊಬ್ಬರ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡಿ ಓದು ಮತ್ತು ಕ್ರಿಕೆಟ್‌ಗೆ ಬೇಕಾದ ಹಣ ಹೊಂದಿಸಿಕೊಳ್ಳುತ್ತಿದ್ದ ಚೇತನ್‌ ಅವರ ಮನೆಯಲ್ಲಿ ಇತ್ತೀಚಿನವರೆಗೂ ಟಿವಿ ಇರಲಿಲ್ಲ. ಐಪಿಎಲ್‌ನಿಂದ ಬಂದ ಹಣದಲ್ಲಿ ಚೇತನ್‌ ರಾಜ್‌ಕೋಟ್‌ನಲ್ಲಿ ಮನೆಯೊಂದನ್ನು ಖರೀದಿಸಿ ಕುಟುಂಬಕ್ಕೆ ಸೂರು ಒದಗಿಸಿದ್ದಾರೆ.

ವಿಕೆಟ್ ಗಳಿಸಿದಾಗ ಚೇತನ್ ಸಕಾರಿಯಾ ಸಂಭ್ರಮ –ಟ್ವಿಟರ್ ಚಿತ್ರ

ಗುಜರಾಜ್‌ನ ಭಾವನಗರದಲ್ಲಿ ಜನಿಸಿದ ಚೇತನ್‌ಗೆ ಈಗ 23 ವರ್ಷ. ಈ ಎಡಗೈ ವೇಗಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಕಾಲಿಟ್ಟು ನಾಲ್ಕು ವರ್ಷಗಳು ಆಗುತ್ತಿವೆಯಷ್ಟೆ. ಇಷ್ಟರಲ್ಲೇ ಬೌಲಿಂಗ್‌ನಲ್ಲಿ ಭರವಸೆ ಮೂಡಿಸಿದ್ದಾರೆ. ಖ್ಯಾತ ಬ್ಯಾಟ್ಸ್‌ಮನ್‌ಗಳ ವಿಕೆಟ್ ಪಡೆದು ಸಂಭ್ರಮಿಸಿದ್ದಾರೆ. ‘ಕ್ಲಾಸ್‌ ಬ್ಯಾಟ್ಸ್‌ಮನ್‌ಗಳ ವಿಕೆಟ್ ಉರುಳಿಸುವುದರಲ್ಲಿ ಚೇತನ್‌ ಪಳಗಿದ್ದಾರೆ. ಭಾರತದ ಎಡಗೈ ವೇಗದ ದಾಳಿಗೆ ಅವರು ಉತ್ತಮ ಕಾಣಿಕೆಯಾಗಬಲ್ಲರು’ ಎಂದು ಸಂಜಯ್ ಮಾಂಜ್ರೇಕರ್ ಆಡಿರುವ ಮೆಚ್ಚುಗೆಯ ಮಾತು ಗಮನಾರ್ಹ.

ಸೌರಾಷ್ಟ್ರ ಪರ ಆಡುವ ಚೇತನ್‌ 2017–18ನೇ ಸಾಲಿನ ವಿಜಯ್‌ ಹಜಾರೆ ಟ್ರೋಫಿ ಟೂರ್ನಿ ಮೂಲಕ ಲಿಸ್ಟ್ ‘ಎ’ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಮುಂದಿನ ವರ್ಷ ರಣಜಿ ಟ್ರೋಫಿಯಲ್ಲಿ ಕಣಕ್ಕೆ ಇಳಿದು ಪ್ರಥಮ ದರ್ಜೆ ಕ್ರಿಕೆಟ್‌ನ ಚೊಚ್ಚಲ ಪಂದ್ಯ ಆಡಿದರು. ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲೇ ಐದು ವಿಕೆಟ್ ಪಡೆದು ಸಂಭ್ರಮಿಸಿದ್ದರು. ಅದರ ಮುಂದಿನ ವರ್ಷ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿ ಮೂಲಕ ಟಿ20 ಕ್ರಿಕೆಟ್‌ನಲ್ಲೂ ಕಾಣಿಸಿಕೊಂಡರು.

ಪ್ರಥಮ ದರ್ಜೆ ಕ್ರಿಕೆಟ್‌ನ 15 ಪಂದ್ಯಗಳಲ್ಲಿ 41 ವಿಕೆಟ್ ಉರುಳಿಸಿರುವ ಅವರು ಲಿಸ್ಟ್ ‘ಎ’ ಕ್ರಿಕೆಟ್‌ನ ಏಳು ಪಂದ್ಯಗಳಲ್ಲಿ 10 ವಿಕೆಟ್, ಟಿ20 ಕ್ರಿಕೆಟ್‌ನ 18 ಪಂದ್ಯಗಳಲ್ಲಿ 31 ಬಲಿ ಪಡೆದಿದ್ದಾರೆ. ಮೂರೂ ಮಾದರಿಗಳಲ್ಲಿ ಕ್ರಮವಾಗಿ 63ಕ್ಕೆ6, 63ಕ್ಕೆ3 ಮತ್ತು 11ಕ್ಕೆ5 ವಿಕೆಟ್ ಅವರ ಶ್ರೇಷ್ಠ ಸಾಧನೆ.

ಗೆಳೆಯರ ಬಳಗದಲ್ಲಿ ‘ಚೀತಾ’ ಎಂದೇ ಕರೆಸಿಕೊಳ್ಳುವ ಚೇತನ್ ಸಕಾರಿಯಾ ಐಪಿಎಲ್‌ನ ಮೊದಲ ಪಂದ್ಯದಲ್ಲಿ 31ಕ್ಕೆ3 ವಿಕೆಟ್ ಪಡೆದಿದ್ದಾರೆ. ಆದರೆ ಎರಡನೇ ಪಂದ್ಯದಲ್ಲಿ ಯಶಸ್ಸು ಒಲಿಯಲಿಲ್ಲ. ಮುಂದಿನ ಹಾದಿಯಲ್ಲಿ ಐಪಿಎಲ್ ಹೀರೊ ಆಗಿ ಮೆರೆಯುವರೇ ಎಂಬುದನ್ನು ಕಾದುನೋಡಬೇಕು.

ವಿಕೆಟ್ ಗಳಿಸಿದಾಗ ಚೇತನ್ ಸಕಾರಿಯಾ ಅವರಿಗೆ ಸಹ ಆಟಗಾರರಿಂದ ಅಭಿನಂದನೆ –ಟ್ವಿಟರ್ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.