ADVERTISEMENT

IPL 2021: ಮ್ಯಾಕ್ಸ್‌ವೆಲ್, ಎಬಿಡಿ ಸಿಡಿಲಬ್ಬರದ ಬ್ಯಾಟಿಂಗ್; ಕೊಹ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 13:12 IST
Last Updated 18 ಏಪ್ರಿಲ್ 2021, 13:12 IST
ಚಿತ್ರ ಕೃಪೆ: ಟ್ವಿಟರ್
ಚಿತ್ರ ಕೃಪೆ: ಟ್ವಿಟರ್   

ಚೆನ್ನೈ: ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಎಬಿ ಡಿ ವಿಲಿಯರ್ಸ್ ಬ್ಯಾಟಿಂಗ್ ವೈಭವವನ್ನು ವೀಕ್ಷಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಹಾಗೂ ವಿಲಿಯರ್ಸ್ ಸ್ಫೋಟಕ ಅರ್ಧಶತಕ ಗಳಿಸುವ ಮೂಲಕ ಆರ್‌ಸಿಬಿ 204 ರನ್‌ಗಳ ಬೃಹತ್ ಮೊತ್ತ ಪೇರಿಸಲು ನೆರವಾಗಿದ್ದರು.

ಸ್ವತಃ ನಾಯಕ ವಿರಾಟ್ ಕೊಹ್ಲಿ (5) ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿದ್ದರು. ಇದರಿಂದಾಗಿ ಬೇಗನೇ ಡಗೌಟ್‌ಗೆ ಮರಳುವಂತಾಗಿತ್ತು. ಅತ್ತ ಗ್ಲೆನ್ ಮ್ಯಾಕ್ಸ್‌ವೆಲ್ ಎದುರಾಳಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದರು.

ADVERTISEMENT

ಮೊದಲು ಮ್ಯಾಕ್ಸ್‌ವೆಲ್ ಬಳಿಕ ವಿಲಿಯರ್ಸ್, ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇದನ್ನು ಕಣ್ಣಾರೆ ವೀಕ್ಷಿಸಿದ ಕೊಹ್ಲಿ, ಪದೇ ಪದೇ ವಿಭಿನ್ನ ಹಾವ-ಭಾವಗಳ ಮೂಲಕ ಹುರಿದುಂಬಿಸುತ್ತಿದ್ದರು.

ಆಕ್ರಮಣಕಾರಿ ನಾಯಕತ್ವವನ್ನು ಮೈಗೂಡಿಸಿಕೊಂಡಿರುವ ವಿರಾಟ್ ಕೊಹ್ಲಿ, ಪ್ರತಿಯೊಂದು ಎಸೆತದಲ್ಲೂ ಮ್ಯಾಕ್ಸ್‌ವೆಲ್ ಹಾಗೂ ವಿಲಿಯರ್ಸ್‌ ಅವರನ್ನು ಬೆಂಬಲಿಸುತ್ತಿದ್ದರು. ಇದು ಕ್ಯಾಮರಾ ಕಣ್ಣುಗಳಲ್ಲೂ ಸರೆಯಾಗಿದೆ. ಮ್ಯಾಕ್ಸ್‌ವೆಲ್ ಅರ್ಧಶತಕ ಗಳಿಸಿದ ವೇಳೆಯಂತೂ ಕೊಹ್ಲಿ ಕೈಚಪ್ಪಾಳೆ ತಟ್ಟುತ್ತಾ ಸಂಭ್ರಮಿಸಿದರು.

ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 49 ಎಸೆತಗಳಲ್ಲಿ 78 ಮತ್ತು ಎಬಿ ಡಿ ವಿಲಿಯರ್ಸ್ 34 ಎಸೆತಗಳಲ್ಲಿ ಅಜೇಯ 76 ರನ್ ಸಿಡಿಸಿದ್ದರು. ಅವರಿಬ್ಬರ ಮನಮೋಹಕ ಇನ್ನಿಂಗ್ಸ್‌ಗಳಲ್ಲಿ ತಲಾ ಒಂಬತ್ತು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸೇರಿದ್ದವು.

ಏತನ್ಮಧ್ಯೆ ಆರಂಭದಲ್ಲೇ ವರುಣ್ ಚಕ್ರವರ್ತಿ ದಾಳಿಯಲ್ಲಿ ರಾಹುಲ್ ತ್ರಿಪಾಠಿ ಅದ್ಭುತ ಕ್ಯಾಚ್‌ಗೆ ಕೊಹ್ಲಿ ಬಲಿಯಾಗಿದ್ದರು. ಆರು ಎಸೆತಗಳನ್ನು ಎದುರಿಸಿದ ಕೊಹ್ಲಿ ಒಂದು ಬೌಂಡರಿ ನೆರವಿನಿಂದ 5 ರನ್ ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.