ADVERTISEMENT

IPL 2022 GT vs DC: ಗಿಲ್, ಫರ್ಗ್ಯುಸನ್ ಮಿಂಚು; ಟೈಟನ್ಸ್‌ಗೆ ಮಣಿದ ಡೆಲ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಏಪ್ರಿಲ್ 2022, 17:58 IST
Last Updated 2 ಏಪ್ರಿಲ್ 2022, 17:58 IST
   

ಪುಣೆ: ಶುಭಮನ್ ಗಿಲ್ ಆಕರ್ಷಕ ಅರ್ಧಶತಕ (84) ಹಾಗೂ ಲಾಕಿ ಫರ್ಗ್ಯುಸನ್ ನಾಲ್ಕು ವಿಕೆಟ್ ನೆರವಿನಿಂದ ಗುಜರಾತ್ ಟೈಟನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ 14 ರನ್ ಅಂತರದ ಗೆಲುವು ದಾಖಲಿಸಿದೆ.

ಈ ಮೂಲಕ ಇದೇ ಮೊದಲ ಬಾರಿಗೆ ಐಪಿಎಲ್‌ಗೆ ಪದಾರ್ಪಣೆ ಮಾಡಿರುವ ಗುಜರಾತ್ ಟೈಟನ್ಸ್, ಸತತ ಎರಡನೇ ಗೆಲುವು ದಾಖಲಿಸಿದೆ. ಇನ್ನೊಂದೆಡೆ ರಿಷಭ್ ಪಂತ್ ಬಳಗವು ಮೊದಲ ಸೋಲು ಅನುಭವಿಸಿದೆ.

ಗಿಲ್ ಅಮೋಘ ಆಟದ ನೆರವಿನಿಂದ ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್, ಆರು ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಡೆಲ್ಲಿ, ನಾಯಕ ರಿಷಭ್ ಪಂತ್ (43) ಉತ್ತಮ ಆಟದ ಹೊರತಾಗಿಯೂ ಒಂಬತ್ತು ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ADVERTISEMENT

ಡೆಲ್ಲಿ ಪರ ನಾಯಕ ಪಂತ್ ಹಾಗೂ ಲಲಿತ್ ಯಾದವ್ (25) ಹೊರತುಪಡಿಸಿದರೆ ಇತರೆ ಯಾವ ಬ್ಯಾಟರ್ ಮಿಂಚಲಿಲ್ಲ. ಗುಜರಾತ್ ಪರ ಲಾಕಿ ಫರ್ಗ್ಯೂಸನ್ 28 ರನ್ನಿಗೆ ನಾಲ್ಕು ವಿಕೆಟ್ ಕಿತ್ತು ಮಿಂಚಿದರು.

ಈ ಮೊದಲು ಗಿಲ್ ಅಬ್ಬರದ ನೆರವಿನಿಂದ ಗುಜರಾತ್, ಬೃಹತ್ ಮೊತ್ತ ಕಲೆ ಹಾಕಿತು. 46 ಎಸೆತಗಳನ್ನು ಎದುರಿಸಿದ ಗಿಲ್, ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನರೆವಿನಿಂದ 84 ರನ್ ಗಳಿಸಿದರು.

ನಾಯಕ ಹಾರ್ದಿಕ್ ಪಾಂಡ್ಯ (31), ಡೇವಿಡ್ ಮಿಲ್ಲರ್ (20*) ಹಾಗೂ ರಾಹುಲ್ ತೆವಾಟಿಯಾ (14) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು.

ಡೆಲ್ಲಿ ಪರ ಮುಸ್ತಾಫಿಜುರ್ ರಹಮಾನ್ ಮೂರು ಹಾಗೂ ಖಲೀಲ್ ಅಹ್ಮದ್ ಎರಡು ವಿಕೆಟ್ ಕಿತ್ತು ಮಿಂಚಿದರು.

ಡೆಲ್ಲಿ ಫೀಲ್ಡಿಂಗ್...
ಈ ಮೊದಲುಟಾಸ್ ಗೆದ್ದಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಐಪಿಎಲ್‌ ಟೂರ್ನಿಯಲ್ಲಿ ಎರಡೂ ತಂಡಗಳು ತಲಾ ಒಂದು ಪಂದ್ಯ ಆಡಿವೆ. ರಿಷಭ್ ನಾಯಕತ್ವದ ಡೆಲ್ಲಿ ತಂಡವು ಮುಂಬೈ ಇಂಡಿಯನ್ಸ್ ಎದುರು ಮತ್ತು ಹಾರ್ದಿಕ ಪಾಂಡ್ಯ ಮುಂದಾಳತ್ವದ ಗುಜರಾತ್ ಟೈಟನ್ಸ್ ತಂಡವು ಲಖನೌ ಸೂಪರ್ ಜೈಂಟ್ಸ್‌ ವಿರುದ್ಧ ಜಯಿಸಿವೆ.

ಡೆಲ್ಲಿ ತಂಡದಲ್ಲಿ ಪೃಥ್ವಿ ಶಾ, ರಿಷಭ್, ಲಲಿತ್ ಯಾದವ್, ರೋವ್ಮನ್ ಪಾಲ್, ಅಲ್‌ರೌಂಡರ್ ಅಕ್ಷರ್ ಪಟೇಲ್, ಮನದೀಪ್ ಸಿಂಗ್, ಶಾರ್ದೂಲ್ ಠಾಕೂರ್ ಅವರು ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. ಇದೀಗ ಮೂರು ದಿನಗಳ ಕ್ವಾರಂಟೈನ್ ಮುಗಿಸಿರುವ ಲುಂಗಿ ಗಿಡಿ, ಮುಸ್ತಫಿಜುರ್ ರೆಹಮಾನ್ ಮತ್ತು ಸರ್ಫರಾಜ್ ಖಾನ್ ಕೂಡ ಕಣಕ್ಕಿಳಿಯಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿರುವ ಗುಜರಾತ್ ತಂಡವೂ ಗೆಲುವಿನ ಆರಂಭದಿಂದ ಆತ್ಮವಿಶ್ವಾಸದಲ್ಲಿದೆ. ತಂಡದ ಸ್ಪಿನ್ನರ್ ರಶೀದ್ ಖಾನ್, ಕನ್ನಡಿಗ ಬ್ಯಾಟರ್ ಅಭಿನವ್ ಸದಾರಂಗಿನಿ, ರಾಹುಲ್ ತೆವಾಟಿಯಾ, ಶುಭಮನ್ ಗಿಲ್, ಬೌಲರ್ ಮೊಹಮ್ಮದ್ ಶಮಿ ಅಮೋಘ ಲಯದಲ್ಲಿದ್ದಾರೆ. ಡೆಲ್ಲಿ ತಂಡಕ್ಕೆ ಕಠಿಣ ಪೈಪೋಟಿಯೊಡ್ಡಲು ಸಿದ್ಧರಾಗಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.