ADVERTISEMENT

ಡೆಲ್ಲಿ ತಂಡದ ಆಟಗಾರನಿಗೆ ಕೋವಿಡ್ ದೃಢ, ಪುಣೆ ಪ್ರಯಾಣ ವಿಳಂಬ

ಪಿಟಿಐ
Published 18 ಏಪ್ರಿಲ್ 2022, 10:21 IST
Last Updated 18 ಏಪ್ರಿಲ್ 2022, 10:21 IST
ಡೆಲ್ಲಿ ಕ್ಯಾಪಿಟಲ್ಸ್
ಡೆಲ್ಲಿ ಕ್ಯಾಪಿಟಲ್ಸ್   

ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ವಿದೇಶಿ ಆಟಗಾರನಿಗೆ ಕೋವಿಡ್ ದೃಢಪಟ್ಟಿದೆ. ಇದರಿಂದಾಗಿ ತಂಡದ ಪುಣೆ ಪ್ರಯಾಣ ವಿಳಂಬಗೊಂಡಿದ್ದು, ಎಲ್ಲ ಆಟಗಾರರಲ್ಲೂ ಹೋಟೆಲ್ ಕೊಠಡಿಯಲ್ಲೇ ಉಳಿದುಕೊಳ್ಳಲು ಸೂಚಿಸಲಾಗಿದೆ.

ಕೋವಿಡ್ ಮಾನದಂಡದಂತೆ ಎಲ್ಲ ಆಟಗಾರರನ್ನು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಪುಣೆಯಲ್ಲಿ ಬುಧವಾರ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ತಂಡವು ಪಂಜಾಬ್ ಕಿಂಗ್ಸ್ ಸವಾಲನ್ನು ಎದುರಿಸಲಿದೆ.

ADVERTISEMENT

ಕೋವಿಡ್ ಲಕ್ಷಣಗಳು ಕಂಡುಬಂದ ಬಳಿಕ ನಡೆಸಿದ ರ್‍ಯಾಪಿಡ್‌ ಆ್ಯಂಟಿಜೆನ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಆಲ್‌ರೌಂಡರ್‌ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಡೆಲ್ಲಿ ಕ್ಯಾಪಿಟಲ್ಸ್ ಇಂದು (ಸೋಮವಾರ) ಪುಣೆಗೆ ಪ್ರಯಾಣಿಸಬೇಕಿತ್ತು. ಆದರೆ ತಂಡದ ಎಲ್ಲ ಸದಸ್ಯರಿಗೆ ತಮ್ಮ ತಮ್ಮ ಕೊಠಡಿಗಳಲ್ಲಿ ಉಳಿದುಕೊಳ್ಳುವಂತೆ ಸೂಚಿಸಲಾಗಿದೆ. ಶಿಬಿರದಲ್ಲಿ ಏಕಾಏಕಿ ಕೋವಿಡ್ ಪ್ರಕರಣ ಕಾಣಿಸಿಕೊಂಡಿದೆಯೇ ಅಥವಾ ಪ್ಯಾಟ್ರಿಕ್ ಫರ್ಹಾರ್ಟ್‌‌ನಂತಹ ಪ್ರತ್ಯೇಕ ಪ್ರಕರಣವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಡೆಲ್ಲಿ ತಂಡದ ಮಗದೊಬ್ಬ ಸಹಾಯಕ ಸಿಬ್ಬಂದಿಯಲ್ಲೂ ರೋಗ ಲಕ್ಷಣಗಳು ಕಂಡುಬಂದಿದ್ದು, ಆರ್‌ಟಿ-ಪಿಸಿಆರ್ ವರದಿಗಾಗಿ ಕಾಯಲಾಗುತ್ತಿದೆ ಎಂದು ವರದಿಯಾಗಿದೆ.

ಕೆಲವು ದಿನಗಳ ಹಿಂದೆಯಷ್ಟೇ ಕೊರೊನ ಸೋಂಕಿಗೆ ಒಳಗಾಗಿದ್ದ ಡೆಲ್ಲಿ ತಂಡದ ಫಿಸಿಯೊ ಪ್ಯಾಟ್ರಿಕ್ ಫರ್ಹಾರ್ಟ್‌, ಕ್ವಾರಂಟೈನ್‌ಗೆ ಒಳಗಾಗಿದ್ದರು.

ಐಪಿಎಲ್‌ಗಾಗಿ ಆಟಗಾರರು ಪ್ರತ್ಯೇಕ ಜೀವಾ ಸುರಕ್ಷಾ ವಲಯದಲ್ಲಿ ಇದ್ದರೂ ಕೋವಿಡ್ ಪ್ರಕರಣಗಳು ಕಂಡುಬಂದಿರುವುದು ಆತಂಕ ಸೃಷ್ಟಿಸಿದೆ.

ಕಳೆದ ವರ್ಷ ಕೋವಿಡ್ ಎರಡನೇ ಅಲೆಯಿಂದಾಗಿ ಐಪಿಎಲ್ ಟೂರ್ನಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಕೆಲವು ತಿಂಗಳ ಬಳಿಕ ಟೂರ್ನಿಯನ್ನು ಯುಎಇನಲ್ಲಿ ಪೂರ್ಣಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.