ADVERTISEMENT

IPL 2022: ಬೌಲಿಂಗ್ ಲಯ ಕಳೆದುಕೊಂಡ ಆರ್‌ಸಿಬಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮಾರ್ಚ್ 2022, 11:33 IST
Last Updated 28 ಮಾರ್ಚ್ 2022, 11:33 IST
ಮೊಹಮ್ಮದ್ ಸಿರಾಜ್
ಮೊಹಮ್ಮದ್ ಸಿರಾಜ್   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ 15ನೇ ಆವೃತ್ತಿಯಲ್ಲಿ ಸೋಲಿನೊಂದಿಗೆ ಅಭಿಯಾನ ಪ್ರಾರಂಭಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎದುರಾಳಿ ಪಂಜಾಬ್ ಕಿಂಗ್ಸ್ ಜೊತೆ ಸೇರಿಕೊಂಡು ಅನಗತ್ಯ ದಾಖಲೆಯೊಂದನ್ನು ಬರೆದಿದೆ.

ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ಒಟ್ಟು 45 ಇತರೆ ರನ್‌ ಬಿಟ್ಟುಕೊಟ್ಟಿದೆ. ಇದು ಐಪಿಎಲ್ ಐತಿಹಾಸದಲ್ಲಿ ಪಂದ್ಯವೊಂದರಲ್ಲಿ ದಾಖಲಾದ ಗರಿಷ್ಠ ಎಕ್ಸ್‌ಟ್ರಾ ರನ್ (Extras) ಆಗಿದೆ.

ಪಂಜಾಬ್ 23 (ಐದು ಬೈ, ಆರು ಲೆಗ್-ಬೈ, 12 ವೈಡ್) ಹಾಗೂ ಆರ್‌ಸಿಬಿ 22 ಇತರೆ ರನ್‌ (1 ಲೆಗ್-ಬೈ, 21 ವೈಡ್) ಬಿಟ್ಟುಕೊಟ್ಟಿತ್ತು. ಈ ಪೈಕಿ ಸಿರಾಜ್ ವೈಡ್ ಮೂಲಕ 14 ರನ್ ನೀಡಿದ್ದರು.

2008ರಲ್ಲಿ ಕೋಲ್ಕತ್ತ ಹಾಗೂ ಡೆಕ್ಕನ್ ಚಾರ್ಜರ್ಸ್ ನಡುವಣ ಪಂದ್ಯದಲ್ಲಿ 38 ಮತ್ತು 2010ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದಲ್ಲಿ 38 ಎಕ್ಸ್‌ಟ್ರಾ ರನ್ ದಾಖಲಾಗಿತ್ತು.

ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ, ನಾಯಕ ಫಫ್ ಡುಪ್ಲೆಸಿ ಬಿರುಸಿನ ಅರ್ಧಶತಕದ (88) ನೆರವಿನಿಂದ 205 ರನ್ ಪೇರಿಸಿತ್ತು. ಬಳಿಕ ಗುರಿ ಬೆನ್ನಟ್ಟಿದ ಪಂಜಾಬ್ ಇನ್ನೂ ಒಂದು ಓವರ್ ಬಾಕಿ ಉಳಿದಿರುವಂತೆಯೇ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಮೊಹಮ್ಮದ್ ಸಿರಾಜ್ ಎರಡು ವಿಕೆಟ್ ಕಬಳಿಸಿದರೂ ನಾಲ್ಕು ಓವರ್‌ಗಳಲ್ಲಿ 59 ರನ್ ಬಿಟ್ಟುಕೊಡುವ ಮೂಲಕ ದುಬಾರಿಯೆನಿಸಿದರು. ವಣಿಂದು ಹಸರಂಗಾ, ಹರ್ಷಲ್ ಪಟೇಲ್, ಆಕಾಶ್ ದೀಪ್ ಹಾಗೂ ಡೇವಿಡ್ ವಿಲ್ಲಿ ಪ್ರಭಾವಿ ಎನಿಸಿಕೊಳ್ಳುವಲ್ಲಿ ವಿಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.