ADVERTISEMENT

IPL 2022: ಹರ್ಷಲ್ ಪಟೇಲ್ - ರಿಯಾನ್ ಪರಾಗ್ ನಡುವೆ ಮಾತಿನ ಚಕಮಕಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಏಪ್ರಿಲ್ 2022, 10:56 IST
Last Updated 27 ಏಪ್ರಿಲ್ 2022, 10:56 IST
ಐಎಎನ್‌ಎಸ್ ಚಿತ್ರ
ಐಎಎನ್‌ಎಸ್ ಚಿತ್ರ   

ಪುಣೆ: ಐಪಿಎಲ್ 2022 ಟೂರ್ನಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹರ್ಷಲ್ ಪಟೇಲ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ರಿಯಾನ್ ಪರಾಗ್ ನಡುವೆ ಮಾತಿನ ಚಕಮಕಿ ನಡೆದಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್, ರಿಯಾನ್ ಪರಾಗ್ ಆಕರ್ಷಕ ಅರ್ಧಶತಕದ ನೆರವಿನಿಂದ ಎಂಟು ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತ್ತು.

ಆರ್‌ಸಿಬಿ ವೇಗಿ ಹರ್ಷಲ್ ಅವರ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಪರಾಗ್ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಸೇರಿದಂತೆ 18 ರನ್ ಸಿಡಿಸಿದ್ದರು.

ಕೊನೆಯ ಎಸೆತದಲ್ಲಿ ಪರಾಗ್ ಸಿಕ್ಸರ್ ಬಾರಿಸಿದ್ದರು. ಬಳಿಕ ಆಟಗಾರರೆಲ್ಲ ಪೆವಿಲಿಯನ್‌ನತ್ತ ಹೆಜ್ಜೆ ಹಾಕುತ್ತಿದ್ದ ವೇಳೆ ತಾಳ್ಮೆ ಕಳೆದುಕೊಂಡ ಹರ್ಷಲ್, ಪರಾಗ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದರಿಂದ ಬಿಸಿ ಬಿಸಿ ವಾತಾವರಣ ನಿರ್ಮಾಣವಾಯಿತು. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ರಾಜಸ್ಥಾನ್ ಆಟಗಾರ ಕರುಣ್ ನಾಯರ್, ಹರ್ಷಲ್ ಅವರನ್ನು ಸಮಾಧಾನಪಡಿಸಿದರು.

ಅಂತಿಮವಾಗಿ ಬೆಂಗಳೂರು ವಿರುದ್ಧ ರಾಜಸ್ಥಾನ್ 29 ರನ್ ಅಂತರದ ಗೆಲುವು ದಾಖಲಿಸಿತು. ಪಂದ್ಯದ ಬಳಿಕ ಆಟಗಾರರೆಲ್ಲ ಕೈ ಕುಲುಕುತ್ತಿರುವ ವೇಳೆ ಪರಾಗ್‌ಗೆ ಹಸ್ತಲಾಘವ ಮಾಡಲು ಹರ್ಷಲ್ ನಿರಾಕರಿಸಿದರು.

ಪಂದ್ಯದಲ್ಲಿ ನಾಲ್ಕು ಕ್ಯಾಚ್‌ ಪಡೆದ ಪರಾಗ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನೊಂದೆಡೆ ಹರ್ಷಲ್ ಪಟೇಲ್ ನಾಲ್ಕು ಓವರ್‌ನಲ್ಲಿ 33 ರನ್ ಬಿಟ್ಟುಕೊಟ್ಟು ಒಂದು ವಿಕೆಟ್ ಗಳಿಸಿ ದುಬಾರಿಯೆನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.