ADVERTISEMENT

IPL 2022: ತಾಳ್ಮೆ ಕಳೆದುಕೊಂಡ ಚಾಹಲ್, ಸಂಜು ಅಂಪೈರ್ ವಿರುದ್ಧ ಗರಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಏಪ್ರಿಲ್ 2022, 13:48 IST
Last Updated 11 ಏಪ್ರಿಲ್ 2022, 13:48 IST
ರಾಜಸ್ಥಾನ್ ರಾಯಲ್ಸ್
ರಾಜಸ್ಥಾನ್ ರಾಯಲ್ಸ್   

ಮುಂಬೈ: ಭಾನುವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದ ವೇಳೆ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಹಾಗೂ ರಿಸ್ಟ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ತಾಳ್ಮೆ ಕಳೆದುಕೊಂಡಿರುವ ಘಟನೆ ನಡೆದಿದೆ.

ಅಂಪೈರ್ ನಿರ್ಣಯದಿಂದ ಅಸಮಾಧಾನಗೊಂಡ ಚಾಹಲ್ ಹಾಗೂ ಸಂಜು ವಾಗ್ವಾದ ನಡೆಸುತ್ತಿರುವ ದೃಶ್ಯ ಕಂಡುಬಂತು.

ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ವೇಳೆ 18ನೇ ಓವರ್‌ನ ಐದನೇ ಎಸೆತವನ್ನು ಅಂಪೈರ್ 'ವೈಡ್' ಎಂದು ತೀರ್ಪು ನೀಡಿದರು. ಇದರಿಂದ ಚಾಹಲ್ ಹಾಗೂ ವಿಕೆಟ್ ಕೀಪರ್ ಸಂಜು ಕುಪಿತಗೊಂಡರು. ಅಲ್ಲದೆ ಅಸಮಾಧಾನವನ್ನು ತೋರ್ಪಡಿಸಿಕೊಂಡರು. ರಿಪ್ಲೇನಲ್ಲೂ ಇದು ವೈಡ್ ಆಗಿರಲಿಲ್ಲ ಎಂಬುದು ಸ್ಪಷ್ಟವಾಗಿತ್ತು.

ನಂತರದ ಎಸೆತದಲ್ಲಿ ದುಶ್ಮಂತ ಚಮೀರ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸುವಲ್ಲಿ ಚಾಹಲ್ ಯಶಸ್ವಿಯಾದರು. ಇಲ್ಲೂ ಅಂಪೈರ್ ನಾಟೌಟ್ ಎಂದು ಘೋಷಿಸಿದರೂ ಚಾಹಲ್ ಹಾಗೂ ಸ್ಯಾಮ್ಸನ್ ಡಿಆರ್‌ಎಸ್ ಮೊರೆ ಹೋಗಲು ನಿರ್ಧರಿಸಿದ್ದರು. ಬಳಿಕ ಥರ್ಡ್ ಅಂಪೈರ್ ಔಟ್ ಎಂದು ಘೋಷಿಸಿದರು.

ಒಟ್ಟಿನಲ್ಲಿ ಮೈದಾನದಲ್ಲಿ ಸದಾ ಶಾಂತಚಿತ್ತ ಹಾಗೂ ಹಸನ್ಮುಖರಾಗಿ ಕಾಣಿಸಿಕೊಳ್ಳುತ್ತಿರುವ ಚಾಹಲ್ ವರ್ತನೆಯು ಅಭಿಮಾನಿಗಳಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.

ಲಖನೌ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ್ ಮೂರು ರನ್ ಅಂತರದ ರೋಚಕ ಗೆಲುವು ದಾಖಲಿಸಿತ್ತು. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಪಂದ್ಯದಲ್ಲಿ ಚಾಹಲ್ ನಾಲ್ಕು ವಿಕೆಟ್ ಕಬಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.