ADVERTISEMENT

IPL 2022 | RCB ಟ್ರೋಫಿ ಗೆದ್ದರೆ ಮೊದಲು ಮನಸ್ಸಿನಲ್ಲಿ ಮೂಡುವುದು ಎಬಿಡಿ: ಕೊಹ್ಲಿ

ಪಿಟಿಐ
Published 29 ಮಾರ್ಚ್ 2022, 11:21 IST
Last Updated 29 ಮಾರ್ಚ್ 2022, 11:21 IST
ಎಬಿ ಡಿವಿಲಿಯರ್ಸ್‌ ಮತ್ತು ವಿರಾಟ್ ಕೊಹ್ಲಿ
ಎಬಿ ಡಿವಿಲಿಯರ್ಸ್‌ ಮತ್ತು ವಿರಾಟ್ ಕೊಹ್ಲಿ   

ಮುಂಬೈ: ಮುಂಬರುವ ಋತುಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದರೆ ಗೆಲುವಿನ ‘ಶ್ರೇಯ’ಎಬಿ ಡಿವಿಲಿಯರ್ಸ್‌ಗೆ ಸಲ್ಲುತ್ತದೆ ಎಂದು ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಆರ್‌ಸಿಬಿ ಬೋಲ್ಡ್‌ ಡೈರಿಸ್‌ನಲ್ಲಿ ಮಾತನಾಡಿರುವ ಕೊಹ್ಲಿ ‘ಮುಂಬರುವ ಋತುಗಳಲ್ಲಿ ನಾವು (ಆರ್‌ಸಿಬಿ) ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾದರೆ, ಆ ಶ್ರೇಯ ಡಿವಿಲಿಯರ್ಸ್‌ಗೂ ಸಲ್ಲುತ್ತದೆ. ಗೆಲುವಿನ ಬಳಿಕ ಮೊದಲು ಮನಸ್ಸಿನಲ್ಲಿ ಸುಳಿಯುವುದೂ ಅವರೇ..' ಎಂದು ಹೇಳಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದ ಕ್ರಿಕೆಟ್‌ ದಂತ ಕಥೆ ಡಿವಿಲಿಯರ್ಸ್ ಕಳೆದ ವರ್ಷ ನವೆಂಬರ್‌ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 2011ರಿಂದ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಲು ಆರಂಭಿಸಿದ್ದ ಅವರು, ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಇತರೆ ಆಟಗಾರರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ.

ಓದಿ... IPL 2022: ತಂಡದಲ್ಲಿ ಉಳಿಸಿಕೊಳ್ಳದ ‘ಆರ್‌ಸಿಬಿ’ ಬಗ್ಗೆ ಚಾಹಲ್‌ ಹೇಳಿದ್ದೇನು?

ADVERTISEMENT

ಡಿವಿಲಿಯರ್ಸ್ ಆರ್‌ಸಿಬಿ ಫ್ರಾಂಚೈಸಿ ಪರ ಕಳೆದ 10 ಆವೃತ್ತಿಗಳಲ್ಲಿ ಕಣಕ್ಕಿಳಿದಿದ್ದರು.

ಇಷ್ಟು ವರ್ಷಗಳ ಕಠಿಣ ಪರಿಶ್ರಮದ ನಂತರ ನಾನು ಆಟವನ್ನು ಅನುಭವಿಸುವುದರ ಜತೆಗೆ, ಡಿವಿಲಿಯರ್ಸ್ ಬಗ್ಗೆಯೂ ಯೋಚಿಸುತ್ತೇನೆ ಎಂದು ತಿಳಿಸಿದ್ದಾರೆ.

ಡಿವಿಲಿಯರ್ಸ್ ಮನೆಯಿಂದ ಐಪಿಎಲ್‌ ವೀಕ್ಷಿಸುತ್ತಿದ್ದರೂ ಸಹ ಅದು ಅವರಿಗೆ ಬಹಳಷ್ಟು ಅರ್ಥವನ್ನು ನೀಡುತ್ತದೆ. ಅವರು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ವಿಶೇಷ ವ್ಯಕ್ತಿಯಾಗಿದ್ದರು ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಡಿವಿಲಿಯರ್ಸ್ ನಿವೃತ್ತಿ ಬಗ್ಗೆ ಮುಂಚಿತವಾಗಿ ಸುಳಿವು ಸಿಕ್ಕಿತ್ತು. ಅವರ ಅನುಪಸ್ಥಿತಿ ತುಂಬಾ ವಿಚಿತ್ರವಾದ ಭಾವನೆಯನ್ನು ಮೂಡಿಸುತ್ತದೆ. ಅವರು ನನಗೆ ಕಳುಹಿಸಿದ್ದ ಧ್ವನಿ ಸಂದೇಶವನ್ನು ಕೇಳಿದಾಗ ನಾನು ತುಂಬಾ ಭಾವುಕನಾಗುತ್ತೇನೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ಕೊಹ್ಲಿ ಮತ್ತು ಡಿವಿಲಿಯರ್ಸ್‌ ಜೊತೆಯಾಟದಲ್ಲಿ ಹಲವಾರು ದಾಖಲೆಗಳನ್ನು ಮುರಿದಿದ್ದು, ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ನಾನು ಅವರೊಂದಿಗೆ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದೇನೆ. ಎಲ್ಲಾ ಸಮಯದಲ್ಲೂ ಅವರು ನನ್ನ ಪಕ್ಕದಲ್ಲಿಯೇ ಇದ್ದರು ಎಂದು ಕೊಹ್ಲಿ, ಡಿವಿಲಿಯರ್ಸ್ ಜತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.