ಅಹಮದಾಬಾದ್ : ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡವು ಮಂಗಳವಾರ ಇಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಆಡಲಿದೆ.
ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ತಂಡವು ಇದುವರೆಗೆ ಆರು ಪಂದ್ಯಗಳನ್ನು ಆಡಿದೆ. ಅದರಲ್ಲಿ ನಾಲ್ಕರಲ್ಲಿ ಜಯಿಸಿ, ಎರಡರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ತಂಡವು ತನ್ನ ಈಚೆಗಿನ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಜಯಿಸಿತ್ತು. ಸಾಧಾರಣ ಗುರಿ ನೀಡಿದ್ದ ಗುಜರಾತ್ ತಂಡವು ಕೆ.ಎಲ್. ರಾಹುಲ್ ಬಳಗವನ್ನು ಮಣಿಸಿತ್ತು.
ಗುಜರಾತ್ ತಂಡದ ಆರಂಭಿಕ ಜೋಡಿ ಶುಭಮನ್ ಗಿಲ್ ಹಾಗೂ ವೃದ್ಧಿಮಾನ್ ಸಹಾ ಲಯದಲ್ಲಿದ್ದಾರೆ. ಸಾಯಿ ಕಿಶೋರ್, ಸಾಯಿ ಸುದರ್ಶನ್ ಮತ್ತು ವಿಜಯಶಂಕರ್ ಕೂಡ ಮಧ್ಯಮಕ್ರಮಾಂಕದಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಅವರು ಮುಂಬೈ ಬೌಲರ್‌ಗಳಿಗೆ ಕಠಿಣ ಸವಾಲೊಡ್ಡುವ ನಿರೀಕ್ಷೆ ಇದೆ.
ಆದರೆ ಮುಂಬೈ ತಂಡವು ಟೂರ್ನಿಯ ಆರಂಭದಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋತಿತ್ತು. ನಂತರ ಮೂರು ಪಂದ್ಯಗಳಲ್ಲಿ ಜಯಿಸಿತ್ತು. ಆದರೆ ಆರನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ಸೋತಿತ್ತು. ಕೊನೆಯ ಹಂತದ ಓವರ್‌ಗಳ ಬೌಲಿಂಗ್‌ನಲ್ಲಿ ದುರ್ಬಲವಾಗಿತ್ತು. ಕೊನೆಯ ಐದು ಓವರ್‌ಗಳಲ್ಲಿಯೇ 96 ರನ್‌ಗಳನ್ನು ಬೌಲರ್‌ಗಳು ಬಿಟ್ಟುಕೊಟ್ಟಿದ್ದರು. ಎಡಗೈ ಮಧ್ಯಮವೇಗಿ ಅರ್ಜುನ್ ತೆಂಡೂಲ್ಕರ್ ಕೂಡ ದುಬಾರಿಯಾಗಿದ್ದರು.
ಗುಜರಾತ್ ತಂಡದ ಆನುಭವಿ ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ ಹಾಗೂ ಸ್ಪಿನ್ನರ್ ರಶೀದ್ ಖಾನ್ ಅವರು ಪ್ರಭಾವಿಯಾಗಿದ್ದಾರೆ. ಇದರಿಂದಾಗಿ ಮುಂಬೈ ಬ್ಯಾಟರ್‌ಗಳಾದ ರೋಹಿತ್ ಶರ್ಮಾ. ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾ ಅವರು ತಮ್ಮ ನೈಜ ಆಟಕ್ಕೆ ಮರಳುವುದು ಅನಿವಾರ್ಯ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ವಾಹಿನಿ, ಜಿಯೊ ಸಿನೆಮಾ ಆ್ಯಪ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.