ADVERTISEMENT

CSK vs PBKS Highlights:ಚಾಹಲ್ ಹ್ಯಾಟ್ರಿಕ್; 5 ಬಾರಿಯ ಚಾಂಪಿಯನ್ CSK ಹೊರಕ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಮೇ 2025, 2:25 IST
Last Updated 1 ಮೇ 2025, 2:25 IST
<div class="paragraphs"><p>ಶ್ರೇಯಸ್ ಅಯ್ಯರ್, ಯಜುವೇಂದ್ರ ಚಾಹಲ್</p></div>

ಶ್ರೇಯಸ್ ಅಯ್ಯರ್, ಯಜುವೇಂದ್ರ ಚಾಹಲ್

   

(ಪಿಟಿಐ ಚಿತ್ರ)

ಚೆನ್ನೈ: ಯಜುವೇಂದ್ರ ಚಾಹಲ್ ಹ್ಯಾಟ್ರಿಕ್ ಮತ್ತು ಶ್ರೇಯಸ್ ಅಯ್ಯರ್ ಅಮೋಘ ಅರ್ಧಶತಕದ ಬಲದಿಂದ ಪಂಜಾಬ್ ಕಿಂಗ್ಸ್ ತಂಡವು ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಐದು ಬಾರಿಯ ಚಾಂಪಿಯನ್ ಚೆನ್ನೈ, ಕೂಟದಿಂದಲೇ ನಿರ್ಗಮಿಸಿದೆ.

ADVERTISEMENT

ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಸ್ಯಾಮ್ ಕರನ್ ಅರ್ಧಶತಕದ (88) ಹೊರತಾಗಿಯೂ 19.2 ಓವರ್‌ಗಳಲ್ಲಿ 190 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. 32 ರನ್ ತೆತ್ತ ಚಾಹಲ್ ಹ್ಯಾಟ್ರಿಕ್ ಸೇರಿದಂತೆ ನಾಲ್ಕು ವಿಕೆಟ್ ಸಾಧನೆ ಮಾಡಿದರು.

ಈ ಗುರಿ ಬೆನ್ನಟ್ಟಿದ ಪಂಜಾಬ್, ಇನ್ನು ಎರಡು ಎಸೆತಗಳು ಬಾಕಿ ಉಳಿದಿರುವಂತೆಯೇ ಆರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ನಾಯಕ ಅಯ್ಯರ್ 41 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ಐದು ಬೌಂಡರಿಗಳ ನೆರವಿನಿಂದ 72 ರನ್ ಗಳಿಸಿ ಅಬ್ಬರಿಸಿದರು. ಪ್ರಭಸಿಮ್ರನ್ ಸಿಂಗ್ ಸಹ 54 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು.

ಚಾಹಲ್ ದಾಖಲೆ...

ಯಜುವೇಂದ್ರ ಚಾಹಲ್, ಐಪಿಎಲ್ ಇತಿಹಾಸದಲ್ಲೇ ಒಂದಕ್ಕಿಂತ ಹೆಚ್ಚು ಸಲ ಹ್ಯಾಟ್ರಿಕ್ ಸಾಧನೆ ಮಾಡಿದ ಮೂರನೇ ಬೌಲರ್ ಎನಿಸಿದ್ದಾರೆ. ಅಮಿತ್ ಮಿಶ್ರಾ ಮೂರು ಹಾಗೂ ಯುವರಾಜ್ ಸಿಂಗ್ ಎರಡು ಸಲ ಹ್ಯಾಟ್ರಿಕ್ ವಿಕೆಟ್ ಗಳಿಸಿದ್ದಾರೆ.

ಈ ಹಿಂದೆ 2022ರಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಚಾಹಲ್ ಹ್ಯಾಟ್ರಿಕ್ ವಿಕೆಟ್ ಗಳಿಸಿದ್ದರು. ಅಮಿತ್ ಮಿಶ್ರಾ 2008, 2011 ಹಾಗೂ 2013ರಲ್ಲಿ ಹ್ಯಾಟ್ರಿಕ್ ವಿಕೆಟ್ ಗಳಿಸಿದ್ದರು. ಯುವಿ 2009ರ ಆವೃತ್ತಿಯೊಂದರಲ್ಲೇ ಎರಡು ಸಲ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದರು.

ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್ ಸಾಧನೆ...

ಚಾಹಲ್ ಎರಡೇ ಸಲ ಓವರ್‌ವೊಂದರಲ್ಲಿ ನಾಲ್ಕು ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದ 19ನೇ ಓವರ್‌ನಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ, ದೀಪಕ್ ಹೂಡಾ, ಅನ್ಶುಲ್ ಕಾಂಬೋಜ್ ಹಾಗೂ ಮಾರ್ಕೊ ಯಾನ್ಸೆನ್‌ ವಿಕೆಟ್‌ಗಳನ್ನು ಪಡೆದರು.

ಆ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಇನ್ನಿಂಗ್ಸ್‌ವೊಂದರಲ್ಲಿ ನಾಲ್ಕು ಅಥವಾ ಅದಕ್ಕಿಂತಲೂ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಎಂಬ ದಾಖಲೆಗೆ ಭಾಜನರಾಗಿದ್ದಾರೆ. ಒಟ್ಟಾರೆಯಾಗಿ ಚಾಹಲ್ ಐಪಿಎಲ್‌ನಲ್ಲಿ 9ನೇ ಸಲ ನಾಲ್ಕು ವಿಕೆಟ್ ಸಾಧನೆ ಮಾಡಿದ್ದಾರೆ.

ಐಪಿಎಲ್‌ನಲ್ಲಿ ಚೆನ್ನೈ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಖ್ಯಾತಿಗೂ ಚಾಹಲ್ ಭಾಜನರಾಗಿದ್ದಾರೆ.

ಚೆಪಾಕ್‌ನಲ್ಲಿ 5ನೇ ಸೋಲು...

ಇದರೊಂದಿಗೆ ಪ್ರಸಕ್ತ ಸಾಲಿನಲ್ಲಿ ಚೆಪಾಕ್ ಮೈದಾನದಲ್ಲಿ ಚೆನ್ನೈ ಐದನೇ ಸೋಲು ಕಂಡಿದೆ. ಇದು ಆವೃತ್ತಿಯೊಂದರಲ್ಲಿ ತವರಿನ ಅಂಗಳದಲ್ಲಿ ಚೆನ್ನೈನ ಕಳಪೆ ಸಾಧನೆಯಾಗಿದೆ. ಅಲ್ಲದೆ ಐಪಿಎಲ್ 2025ರಲ್ಲಿ ತವರಿನ ಅಂಗಳದಲ್ಲಿ ಸತತ ಐದನೇ ಸೋಲಿನ ಮುಖಭಂಗಕ್ಕೊಳಗಾಗಿದೆ.

ಇನ್ನು ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಸತತ ಎರಡು ಪಂದ್ಯಗಳಲ್ಲಿ ಚೆನ್ನೈ ಆಲೌಟ್ ಆಗಿದೆ. ಇದಕ್ಕೂ ಮೊದಲು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲೂ 154 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ಚೆಪಾಕ್‌ನಲ್ಲಿ ಚೆನ್ನೈ ವಿರುದ್ಧ ಅತಿ ಹೆಚ್ಚು ಗೆಲುವು ದಾಖಲಿಸಿದ ತಂಡಗಳ ಪೈಕಿ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಪಂಜಾಬ್ ಕಿಂಗ್ಸ್ (5 ಸಲ) ಸರಿಗಟ್ಟಿದೆ.

11 ಎಸೆತಗಳ ಅಂತರದಲ್ಲಿ ಆರು ವಿಕೆಟ್ ಪತನ...

ಚೆನ್ನೈ ತಂಡವು ಕೊನೆಯ ಆರು ವಿಕೆಟ್‌ಗಳನ್ನು ಕೇವಲ 11 ಎಸೆತಗಳ ಅಂತರದಲ್ಲಿ ಕಲೆದುಕೊಂಡಿತು. ಇದು ಐಪಿಎಲ್ ಇನಿಂಗ್ಸ್‌ನಲ್ಲಿ ತಂಡವೊಂದರ ಕಳಪೆ ಸಾಧನೆಯಾಗಿದೆ.

ಚೆನ್ನೈ ಹೊರಕ್ಕೆ...

ಇದೇ ಮೊದಲ ಬಾರಿಗೆ ಸತತವಾಗಿ ಎರಡನೇ ವರ್ಷವೂ ಐಪಿಎಲ್ ಪ್ಲೇ-ಆಫ್ ಪ್ರವೇಶಿಸುವಲ್ಲಿ ಚೆನ್ನೈ ವಿಫಲವಾಗಿದೆ. ಒಟ್ಟಾರೆಯಾಗಿ ಐದು ಬಾರಿದ ಚಾಂಪಿಯನ್ ಚೆನ್ನೈ, ನಾಲ್ಕನೇ ಸಲ (2020, 2022, 2024, 2025) ಪ್ಲೇ-ಆಫ್‌ಗೆ ಲಗ್ಗೆ ಇಡುವಲ್ಲಿ ವೈಫಲ್ಯ ಕಂಡಿದೆ.

ಪ್ರಸಕ್ತ ಸಾಲಿನಲ್ಲಿ ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿರುವ ಮೊದಲ ತಂಡವೆಂಬ ಅಪಖ್ಯಾತಿಗೂ ಸಿಎಸ್‌ಕೆ ಒಳಗಾಗಿದೆ.

2ನೇ ಸ್ಥಾನಕ್ಕೆ ಪಂಜಾಬ್ ಲಗ್ಗೆ...

ಈ ಗೆಲುವಿನೊಂದಿಗೆ ಆಡಿರುವ 10 ಪಂದ್ಯಗಳಲ್ಲಿ ಆರನೇ ಗೆಲುವು ದಾಖಲಿಸಿರುವ ಶ್ರೇಯಸ್ ಅಯ್ಯರ್ ಬಳಗವು, ಒಟ್ಟು 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಪಂಜಾಬ್‌ನ ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.