ಸಂದೀಪ್ ಶರ್ಮಾ
ಪಿಟಿಐ ಚಿತ್ರ
ನವದೆಹಲಿ: ರಾಜಸ್ಥಾನ ರಾಯಲ್ಸ್ ತಂಡದ ಮಧ್ಯಮ ವೇಗದ ಬೌಲರ್ ಸಂದೀಪ್ ಶರ್ಮಾ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಜಂಟಿ ದೀರ್ಘ ಓವರ್ ಬೌಲಿಂಗ್ ಮಾಡಿದ ಆಟಗಾರ ಎನಿಸಿಕೊಂಡರು. ರಾಷ್ಟ್ರ ರಾಜಧಾನಿಯಲ್ಲಿರುವ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಅವರು ಈ ಅನಗತ್ಯ ದಾಖಲೆ ಬರೆದರು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 188 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ರಾಜಸ್ಥಾನ ಕೂಡ 4 ವಿಕೆಟ್‌ಗಳನ್ನು ಕಳೆದುಕೊಂಡು ಇಷ್ಟೇ ರನ್ ಗಳಿಸಿತು. ಪಂದ್ಯ ಟೈ ಆದಕಾರಣ ನಡೆದ ಸೂಪರ್ ಓವರ್‌ನಲ್ಲಿ ಗೆದ್ದ ಡೆಲ್ಲಿ ತಂಡ, ಆಡಿರುವ 6 ಪಂದ್ಯಗಳಲ್ಲಿ 5ನೇ ಜಯ ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಡೆಲ್ಲಿ ತಂಡದ ಬ್ಯಾಟಿಂಗ್ ವೇಳೆ ಇನಿಂಗ್ಸ್‌ನ 20ನೇ ಓವರ್ ಬೌಲಿಂಗ್ ಮಾಡಿದ ಸಂದೀಪ್ ಶರ್ಮಾ, ನಾಲ್ಕು ವೈಡ್ ಹಾಗೂ ಒಂದು ನೋಬಾಲ್ ಸಹಿತ ಒಟ್ಟು 11 ಎಸೆತಗಳನ್ನು ಎಸೆದರು. ಈ ಓವರ್‌ನಲ್ಲಿ ಒಟ್ಟು 19 ರನ್ ಚಚ್ಚಿಸಿಕೊಂಡ ಅವರು, ತಮ್ಮ ಕೋಟಾದ ನಾಲ್ಕು ಓವರ್‌ಗಳಲ್ಲಿ ಒಂದೂ ವಿಕೆಟ್ ಪಡೆಯದೆ 33 ರನ್ ಬಿಟ್ಟುಕೊಟ್ಟರು.
ಇದೇ ಆವೃತ್ತಿಯ 21ನೇ ಪಂದ್ಯದಲ್ಲಿ ಲಖನೌ ಸೂಪರ್‌ಜೈಂಟ್ಸ್ ತಂಡದ ಶಾರ್ದೂಲ್ ಠಾಕೂರ್ ಅವರು ಕೋಲ್ಕತ್ತ ನೈಟ್‌ರೈಡರ್ಸ್ ಎದುರು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೊಹಮ್ಮದ್ ಸಿರಾಜ್ ಅವರು 2023ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ತುಷಾರ್ ದೇಶಪಾಂಡೆ ಅವರು 2023ರಲ್ಲಿ ಲಖನೌ ಸೂಪರ್‌ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ಹನ್ನೊಂದು ಎಸೆತಗಳನ್ನು ಎಸೆದಿದ್ದರು.
ಡೆಲ್ಲಿ ಎದುರು ಸಂದೀಪ್ ಎಸೆದ 20ನೇ ಓವರ್ ಹೀಗಿತ್ತು.
19.1 – ವೈಡ್
19.1 – 0
19.2 – ವೈಡ್
19.2 – ವೈಡ್
19.2 – ವೈಡ್
19.2 – ನೋಬಾಲ್ + 1 ರನ್
19.2 – ಬೌಂಡರಿ
19.3 – ಸಿಕ್ಸ್
19.4 – 1 ರನ್
19.5 – 1 ರನ್
19.6 – 1 ರನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.