ADVERTISEMENT

IPL 2025 | ಪಂಜಾಬ್‌ಗೆ ಸೋಲು; ಜಯದೊಂದಿಗೆ ಅಭಿಯಾನ ಮುಗಿಸಿದ ಡೆಲ್ಲಿ

ಪಿಟಿಐ
Published 24 ಮೇ 2025, 18:02 IST
Last Updated 24 ಮೇ 2025, 18:02 IST
<div class="paragraphs"><p>ಸಮೀರ್ ರಿಜ್ವಿ ಬ್ಯಾಟಿಂಗ್‌ ವೈಖರಿ</p></div>

ಸಮೀರ್ ರಿಜ್ವಿ ಬ್ಯಾಟಿಂಗ್‌ ವೈಖರಿ

   

ಚಿತ್ರಕೃಪೆ: @IPL

ಜೈಪುರ: ಯುವ ಆಟಗಾರ ಸಮೀರ್ ರಿಝ್ವಿ ಅವರ ಬಿರುಸಿನ ಅರ್ಧಶತಕ (ಅಜೇಯ 58, 25ಎ) ಮತ್ತು ಇತರ ಅಗ್ರ ಬ್ಯಾಟರ್‌ಗಳ ಉಪಯುಕ್ತ ಆಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್ ತಂಡಕ್ಕೆ ಆರು ವಿಕೆಟ್‌ಗಳಿಂದ ಸೋಲುಣಿಸಿತು. ಇದರಿಂದ ಸತತ ಮೂರನೇ ದಿನ, ಪ್ಲೇಆಫ್‌ಗೆ ಅರ್ಹತೆ ಪಡೆದ ತಂಡವನ್ನು, ರೇಸ್‌ನಿಂದ ಹೊರಬಿದ್ದ ತಂಡವೊಂದು ಸೋಲಿಸಿದಂತೆ ಆಯಿತು.

ADVERTISEMENT

ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ಮಾಡಲು ಕಳಿಸಲ್ಪಟ್ಟ ಪಂಜಾಬ್ ಕಿಂಗ್ಸ್ 8 ವಿಕೆಟ್‌ಗೆ 206 ರನ್‌ಗಳ ಸವಾಲಿನ ಮೊತ್ತ ಗಳಿಸಿತು. ನಾಯಕ ಶ್ರೇಯಸ್ ಅಯ್ಯರ್ (53, 34ಎ, 4x5, 6x2) ಮತ್ತು ಸ್ಟೊಯಿನಿಸ್‌ (ಔಟಾಗದೇ 44, 16ಎ, 4x3, 6x4) ಅವರು ಪ್ರಮುಖ ಕೊಡುಗೆ ನೀಡಿದರು. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಮೂರು ಎಸೆತ ಗಳಿರುವಂತೆ 4 ವಿಕೆಟ್‌ಗೆ 208 ರನ್‌ಗಳಿಸಿ, ಗೆಲುವಿನೊಡನೆ ಲೀಗ್ ಅಭಿಯಾನ ಮುಗಿಸಿತು.

ಡೆಲ್ಲಿ ತಂಡಕ್ಕೆ ಕೆ.ಎಲ್‌.ರಾಹುಲ್ ಮತ್ತು ಫಾಫ್‌ ಡುಪ್ಲೆಸಿ 5.3 ಓವರುಗಳಲ್ಲಿ 55 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಭಾರತ ಟೆಸ್ಟ್  ತಂಡಕ್ಕೆ ಆಯ್ಕೆಯಾದ ಸಂಭ್ರಮದಲ್ಲಿ ರುವ ಕರುಣ್ ನಾಯರ್ 44 (27ಎ, 4x5, 6x2) ಕೂಡ ಉಪಯುಕ್ತ ಕೊಡುಗೆ ನೀಡಿದರು. ಅವರ ವಿಕೆಟ್‌ ಕಳೆದುಕೊಂಡಾಗ ಡೆಲ್ಲಿ ತಂಡಕ್ಕೆ (4 ವಿಕೆಟ್‌ಗೆ 155) ಐದು ಓವರುಗಳಲ್ಲಿ 52 ರನ್‌ಗಳು ಬೇಕಿದ್ದವು.

ಆದರೆ, 21 ವರ್ಷ ವಯಸ್ಸಿನ ಸಮೀರ್ ರಿಝ್ವಿ ಬಿರುಸಿನ ಆಟವಾಡಿದರು. ಟ್ರಿಸ್ಟನ್‌ ಸ್ಟಬ್ಸ್ ಜೊತೆಗೂಡಿ (ಔಟಾಗದೇ 18, 14ಎ) ಮುರಿಯದ ಐದನೇ ವಿಕೆಟ್‌ಗೆ 53 ರನ್ ಸೇರಿಸಿದರು. ಅವರ ಆಟದಲ್ಲಿ ಮೂರು ಬೌಂಡರಿ, ಐದು ಭರ್ಜರಿ ಸಿಕ್ಸರ್‌ಗಳಿದ್ದವು. ಸ್ಟೊಯಿನಿಸ್‌ ಮಾಡಿದ ಅಂತಿಮ ಓವರಿನ ಮೂರನೇ ಎಸೆತವನ್ನು ಸಿಕ್ಸರ್‌ಗೆತ್ತಿ ಗೆಲುವಿನ ರನ್ ಕೂಡ ಹೊಡೆದರು.

ಶ್ರೇಯಸ್‌, ಸ್ಟೊಯಿನಿಸ್ ಅಬ್ಬರ: ಇದಕ್ಕೆ ಮೊದಲು ನಾಯಕ ಶ್ರೇಯಸ್‌ ಅಯ್ಯರ್ ಅವರ ಸೊಗಸಾದ ಅರ್ಧ ಶತಕದ ಬಳಿಕ ಅಂತಿಮ ಹಂತದಲ್ಲಿ ಮಾರ್ಕಸ್ ಸ್ಟೊಯಿನಿಸ್‌  ತೋಳ್ಬಲ ಮೆರೆದಿದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್‌ ಸವಾಲಿನ ಮೊತ್ತ ಗಳಿಸಿತು. 

ಸಂಕ್ಷಿಪ್ತ ಸ್ಕೋರು

ಪಂಜಾಬ್ ಕಿಂಗ್ಸ್‌: 20 ಓವರುಗಳಲ್ಲಿ 8ಕ್ಕೆ 206 (ಪ್ರಭಸಿಮ್ರನ್ ಸಿಂಗ್ 28, ಜೋಶ್ ಇಂಗ್ಲಿಸ್‌ 32, ಶ್ರೇಯಸ್ ಅಯ್ಯರ್‌ 53, ಮಾರ್ಕಸ್‌ ಸ್ಟೊಯಿನಿಸ್‌ ಔಟಾಗದೇ 44; ಮುಸ್ತಫಿಝುರ್ ರೆಹಮಾನ್ 33ಕ್ಕೆ3, ವಿಪ್ರಜ್ ನಿಗಂ 38ಕ್ಕೆ2, ಕುಲದೀಪ್ ಯಾದವ್ 39ಕ್ಕೆ2)

ಡೆಲ್ಲಿ ಕ್ಯಾಪಿಟಲ್ಸ್: 19.3 ಓವರುಗಳಲ್ಲಿ 4 ವಿಕೆಟ್‌ಗೆ 208 (ಕೆ.ಎಲ್‌.ರಾಹುಲ್ 35, ಫಾಫ್ ಡುಪ್ಲೆಸಿ 23, ಕರುಣ್ ನಾಯರ್ 44, ಸೇದಿಕುಲ್ಲಾ ಅಟಲ್ 22, ಸಮೀರ್ ರಿಝ್ವಿ ಔಟಾಗದೇ 58, ಟ್ರಿಸ್ಟನ್ ಸ್ಟಬ್ಸ್‌ ಔಟಾಗದೇ 18; ಹರ್‌ಪ್ರೀತ್ ಬ್ರಾರ್ 41ಕ್ಕೆ2).

ಪಂದ್ಯದ ಆಟಗಾರ: ಸಮೀರ್‌ ರಿಝ್ವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.