ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೂಪರ್ ಓವರ್‌ನಲ್ಲಿ ಗೆಲುವು ತಂದುಕೊಟ್ಟ ಕೆ.ಎಲ್. ರಾಹುಲ್ ಮತ್ತು ಟಿಟ್ಸನ್ ಸ್ಟಬ್ಸ್
ಪಿಟಿಐ ಚಿತ್ರ
ನವದೆಹಲಿ: ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬುಧವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೂಪರ್ ಓವರ್‌ನಲ್ಲಿ ಗೆದ್ದು ಬೀಗಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ಪಡೆ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 188 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ರಾಜಸ್ಥಾನ ಕೂಡ 4 ವಿಕೆಟ್‌ಗಳನ್ನು ಕಳೆದುಕೊಂಡು ಇಷ್ಟೇ ರನ್ ಗಳಿಸಿತು. ಹೀಗಾಗಿ ಈ ಬಾರಿಯ ಐಪಿಎಲ್‌ನಲ್ಲಿ ಟೈ ಆದ ಮೊದಲ ಹಾಗೂ ಒಟ್ಟಾರೆ 15ನೇ ಪಂದ್ಯ ಇದಾಯಿತು.
ಫಲಿತಾಂಶ ನಿರ್ಣಯಕ್ಕೆ ಸೂಪರ್ ಓವರ್ ನಡೆಸಲಾಯಿತು.
ಹೀಗಿತ್ತು 'ಸೂಪರ್' ಫೈಟ್
ರಾಯಲ್ಸ್ ಪರ ಶಿಮ್ರೋನ್ ಹೆಟ್ಮೆಯರ್ ಹಾಗೂ ರಿಯಾನ್ ಪರಾಗ್ ಬ್ಯಾಟಿಂಗ್‌ಗೆ ಇಳಿದರೆ, ಡೆಲ್ಲಿ ಪರ ಮಿಚೇಲ್ ಸ್ಟಾರ್ಕ್ ಬೌಲಿಂಗ್ ಮಾಡಿದರು.
ನಿಖರ ಯಾರ್ಕರ್‌ಗಳ ಮೂಲಕ ಪರಿಣಾಮಕಾರಿ ಬೌಲಿಂಗ್ ಮಾಡಿದ ಸ್ಟಾರ್ಕ್, ರಾಯಲ್ಸ್ ಬ್ಯಾಟರ್‌ಗಳನ್ನು 11 ರನ್‌ಗೆ ತಡೆದರು.
ಸ್ಟ್ರೈಕ್‌ನಲ್ಲಿದ್ದ ಹೆಟ್ಮೆಯರ್ ಮೊದಲ ಎಸೆತದಲ್ಲಿ ರನ್ ಗಳಿಸಲು ವಿಫಲರಾದರು. ಎರಡನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಮೂರನೇ ಎಸೆತದಲ್ಲಿ 1 ರನ್ ಗಳಿಸಿದರು. ನಾಲ್ಕನೇ ಎಸೆತವನ್ನು ಪರಾಗ್ ಬೌಂಡರಿಗಟ್ಟಿದರು. ಆದರೆ, ಅದು ನೋ ಬಾಲ್ ಆಗಿತ್ತು. ಹೀಗಾಗಿ, ಸ್ಟಾರ್ಕ್ ಮತ್ತೊಂದು ಎಸೆತ ಎಸೆಯಬೇಕಾಯಿತು. ಆ ಎಸೆತದಲ್ಲಿ ಪರಾಗ್ ರನೌಟ್ ಆದರು. ಬಳಿಕ, ಯಶಸ್ವಿ ಜೈಸ್ವಾಲ್ ಕ್ರೀಸ್‌ಗೆ ಇಳಿದರು. 5ನೇ ಎಸೆತವನ್ನು ಡೀಪ್ ಮಿಡ್ ವಿಕೆಟ್‌ನತ್ತ ಅಟ್ಟಿದ ಹೆಟ್ಮೆಯರ್, ಎರಡು ರನ್‌ಗಾಗಿ ಓಡಿದರು. ಈ ವೇಳೆ ಜೈಸ್ವಾಲ್ ಔಟಾದ್ದರಿಂದ, ಐದೇ ಎಸೆತಗಳಲ್ಲಿ ರಾಯಲ್ಸ್ ಬ್ಯಾಟಿಂಗ್ ಮುಗಿಯಿತು.
12 ರನ್‌ಗಳ ಈ ಗುರಿಯನ್ನು ಡೆಲ್ಲಿ ನಾಲ್ಕೇ ಎಸೆತಗಳಲ್ಲಿ ಮುಟ್ಟಿತು.
ಡೆಲ್ಲಿ ಪರ ಅನುಭವಿ ಕೆ.ಎಲ್. ರಾಹುಲ್ ಮತ್ತು ಟಿಟ್ಸನ್ ಸ್ಟಬ್ಸ್ ಬ್ಯಾಟಿಂಗ್ ಮಾಡಿದರೆ, ಸಂದೀಪ್ ಶರ್ಮಾ ಅವರು ರಾಯಲ್ಸ್ ಬೌಲಿಂಗ್ ಹೊಣೆ ಹೊತ್ತರು.
ಮೊದಲ ಎಸೆತದಲ್ಲಿ ಎರಡು ರನ್ ಗಳಿಸಿದ ರಾಹುಲ್, ಮರು ಎಸೆತವನ್ನು ಬೌಂಡರಿಗೆ ಅಟ್ಟಿದರು. ಮೂರನೇ ಚೆಂಡಿನಲ್ಲಿ ಒಂಟಿ ರನ್ ಗಳಿಸಿದರು. ಸ್ಟಬ್ಸ್, ನಾಲ್ಕನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ತಮ್ಮ ತಂಡಕ್ಕೆ ಜಯ ತಂದುಕೊಟ್ಟರು.
ಇದು ಡೆಲ್ಲಿ ತಂಡಕ್ಕೆ ಸೂಪರ್ ಓವರ್ ಹೋರಾಟಗಳಲ್ಲಿ ದಕ್ಕಿದ 4ನೇ ಜಯ. ಇದರೊಂದಿಗೆ, ಹೆಚ್ಚು ಸಲ ಸೂಪರ್ ಓವರ್‌ನಲ್ಲಿ ಜಯ ಸಾಧಸಿದ ಖ್ಯಾತಿಯೂ ಈ ತಂಡದ್ದಾಯಿತು. ಈ ಹಿಂದೆ, 2019ರಲ್ಲಿ ಎರಡು ಸಲ, 2021ರಲ್ಲಿ ಒಮ್ಮೆ ಜಯ ಸಾಧಿಸಿತ್ತು.
ಐಪಿಎಲ್‌ನಲ್ಲಿ ಈವರೆಗೆ ನಡೆದ ಸೂಪರ್ ಓವರ್ ಫಲಿತಾಂಶಗಳ ಲಿಸ್ಟ್ ಇಲ್ಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.