ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ.
'ಮೈದಾನಕ್ಕಿಳಿದು ಪಂದ್ಯವನ್ನು ಆನಂದಿಸು ಎಂದು ನಾನು ವಿರಾಟ್‌ಗೆ ಹೇಳಲು ಇಚ್ಚಿಸುತ್ತೇನೆ. ನಗು ಮುಖದಿಂದಲೇ ಇರು. ನಿಮ್ಮ ಆಟವನ್ನು ನೋಡಲು ನಾನಲ್ಲಿ ಇರುತ್ತೇನೆ. ಕಪ್ ಗೆದ್ದು ಬನ್ನಿ. ಪ್ರತಿಯೊಂದು ಕ್ಷಣವನ್ನು ಆನಂದಿಸು' ಎಂದು ಗೆಳೆಯ ವಿರಾಟ್‌ಗೆ ವಿಲಿಯರ್ಸ್ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಆರ್‌ಸಿಬಿ ಅಭಿಮಾನಿಗಳಿಗೂ ಸಂದೇಶ ನೀಡಿರುವ ವಿಲಿಯರ್ಸ್, 'ತುದಿಗಾಲಲ್ಲಿ ಇರಿ. ಇದೊಂದು ಶ್ರೇಷ್ಠ ಫೈನಲ್ ಪಂದ್ಯ ಆಗಿರಲಿದೆ' ಎಂದು ಹೇಳಿದ್ದಾರೆ.
'ಇದು ನೆನಪಿನಾಳದಲ್ಲಿ ಉಳಿದುಕೊಳ್ಳಲಿರುವ ಫೈನಲ್ ಪಂದ್ಯ ಆಗಿರಲಿದೆ. ಕೊನೆಯ ಎಸೆತದವರೆಗೂ ನಮ್ಮ ಹುಡುಗರು ಅತ್ಯುತ್ತಮ ಪ್ರದರ್ಶನ ನೀಡುವ ನಂಬಿಕೆ ನನಗಿದೆ' ಎಂದು ಹೇಳಿದ್ದಾರೆ.
ಇಂದು (ಮಂಗಳವಾರ) ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ತಂಡದ ಸವಾಲನ್ನು ಎದುರಿಸಲಿದೆ. ಇತ್ತಂಡಗಳು ಐಪಿಎಲ್‌ನಲ್ಲಿ ಚೊಚ್ಚಲ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದ್ದು, ಯಾವ ತಂಡ ಗೆದ್ದರೂ ದಾಖಲೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.