ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್
ಪಿಟಿಐ ಚಿತ್ರ
ಅಹಮದಾಬಾದ್: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿರುವ ಪಂಜಾಬ್ ಕಿಂಗ್ಸ್, ಬರೋಬ್ಬರಿ 11 ವರ್ಷಗಳ ನಂತರ ಫೈನಲ್ ತಲುಪಿದೆ.
ಗುಜರಾತ್ ರಾಜಧಾನಿಯಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಎದುರಾಳಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಮಳೆಯಿಂದಾಗಿ ಎರಡು ತಾಸು ವಿಳಂಬವಾದರೂ, ಓವರ್ ಕಡಿತಗೊಳ್ಳದೆ ನಡೆದ ಪಂದ್ಯದಲ್ಲಿ ಮುಂಬೈ, 6 ವಿಕೆಟ್ ಕಳೆದುಕೊಂಡು 203 ರನ್ ಕಲೆಹಾಕಿತು.
ಈ ಗುರಿ ಎದುರು ಉತ್ತಮ ಪ್ರದರ್ಶನ ತೋರಿದ ಕಿಂಗ್ಸ್, 5 ವಿಕೆಟ್‌ಗಳನ್ನು ಕಳೆದುಕೊಂಡು 207 ರನ್ ಗಳಿಸಿ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಗೆದ್ದಿತು.
ಅಮೋಘ ಅರ್ಧಶತಕ ಬಾರಿಸಿದ ಅಯ್ಯರ್ (ಅಜೇಯ 87 ರನ್) ಪಂದ್ಯಶ್ರೇಷ್ಠ ಎನಿಸಿಕೊಂಡರು.
ನಾಳೆ ಇದೇ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಪ್ರಶಸ್ತಿಗಾಗಿ ಸೆಣಸಾಡಲಿವೆ.
ಕ್ವಾಲಿಫೈಯರ್–2 ಪಂದ್ಯದ ಹೈಲೈಟ್ಸ್ ಇಲ್ಲಿದೆ
ಮುಂಬೈ ಪರ ಗರಿಷ್ಠ ರನ್
ಟೂರ್ನಿಯಲ್ಲಿ ಬ್ಯಾಟಿಂಗ್ ಮಾಡಿದ 16 ಇನಿಂಗ್ಸ್‌ಗಳಲ್ಲಿಯೂ 25ಕ್ಕಿಂತ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿರುವ ಸೂರ್ಯಕುಮಾರ್ ಯಾದವ್, 5 ಅರ್ಧಶತಕ ಸಹಿತ ಒಟ್ಟು 717 ರನ್ ಗಳಿಸಿದ್ದಾರೆ. ಯಾವುದೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಬ್ಯಾಟರ್‌ವೊಬ್ಬರು ಗಳಿಸಿದ ಗರಿಷ್ಠ ಮೊತ್ತವಾಗಿದೆ. ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು 2009/10ರಲ್ಲಿ 618ರನ್ ಗಳಿಸಿದ್ದದ್ದು, ಈ ಆವೃತ್ತಿಗೂ ಮುನ್ನ ದಾಖಲೆಯಾಗಿತ್ತು.
ವಿಲಿಯರ್ಸ್ ದಾಖಲೆ ಮುರಿದ ಸೂರ್ಯ
ಈ ಬಾರಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಸೂರ್ಯ, ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್ ಹೆಸರಿನಲ್ಲಿರುವ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಆರಂಭಿಕನಲ್ಲದೆ, ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.
ವಿಲಿಯರ್ಸ್ ಅವರು 2016ರ ಆವೃತ್ತಿಯಲ್ಲಿ ಆಡಿದ 16 ಇನಿಂಗ್ಸ್‌ಗಳಲ್ಲಿ 1 ಶತಕ ಹಾಗೂ 6 ಅರ್ಧಶತಕ ಸಹಿತ 687 ಗಳಿಸಿದ್ದರು. 2018ರಲ್ಲಿ 684 ರನ್ ಗಳಿಸಿದ್ದ ರಿಷಭ್ ಪಂತ್, ಮೂರನೇ ಸ್ಥಾನದಲ್ಲಿದ್ದಾರೆ.
ಅಹಮದಾಬಾದ್‌ನಲ್ಲಿ 11ನೇ 'ಇನ್ನೂರು'
ಈ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ 200+ ರನ್ ಹರಿದು ಬಂದವು. ಇದರೊಂದಿಗೆ, ಈ ವರ್ಷ ಅಹಮದಾಬಾದ್‌ನಲ್ಲಿ ನಡೆದ ಪಂದ್ಯಗಳಲ್ಲಿ ಇನ್ನೂರಕ್ಕಿಂತ ಅಧಿಕ ರನ್ ದಾಖಲಾದ ಇನಿಂಗ್ಸ್‌ಗಳ ಸಂಖ್ಯೆ 11ಕ್ಕೇರಿತು.
ಟಿ20 ಟೂರ್ನಿಯೊಂದರ ವೇಳೆ ಒಂದೇ ಕ್ರೀಡಾಂಗಣದಲ್ಲಿ ಹೆಚ್ಚು ಬಾರಿ 200ಕ್ಕಿಂತ ಹೆಚ್ಚು ರನ್ ಗಳಿಕೆ ಕಂಡ ದಾಖಲೆ ಸದ್ಯ ಪಾಕಿಸ್ತಾನದ ರಾವಲ್ಪಿಂಡಿ ಮೈದಾನದ ಹೆಸರಲ್ಲಿದೆ. 2023ರ ಪಾಕಿಸ್ತಾನ ಪ್ರೀಮಿಯರ್ ಲೀಗ್ ವೇಳೆ 12 ಬಾರಿ ಇಷ್ಟು ರನ್ ದಾಖಲಾಗಿದ್ದವು.
ಸದ್ಯ ಐಪಿಎಲ್‌ನ ಫೈನಲ್ ಕೂಡ ಅಹಮದಾಬಾದ್‌ನಲ್ಲೇ ನಡೆಯಲಿರುವುದರಿಂದ, ರಾವಲ್ಪಿಂಡಿ ಎರಡನೇ ಸ್ಥಾನಕ್ಕೆ ಸರಿದರೂ ಅಚ್ಚರಿಯಿಲ್ಲ.
ಮುಂಬೈ ದಾಖಲೆ
ಐಪಿಎಲ್‌ನ ಪ್ಲೇ–ಆಫ್ ಹಂತದ ಪಂದ್ಯಗಳಲ್ಲಿ ಇನ್ನೂರಕ್ಕಿಂತ ಹೆಚ್ಚು ಮೊತ್ತ ಗಳಿಸಿದ ತಂಡದ ಪರ ಯಾವುದೇ ಆಟಗಾರ ಅರ್ಧಶತಕ ಗಳಿಸದಿರುವುದು ಇದೇ ಮೊದಲು.
ಉತ್ತಮ ಆಟವಾಡಿದ ಜಾನಿ ಬೆಸ್ಟೋ 38 ರನ್, ತಿಲಕ್ ವರ್ಮಾ 44 ರನ್, ಸೂರ್ಯಕುಮಾರ್ ಯಾದವ್ 44 ರನ್ ಹಾಗೂ ನಮನ್ ಧೀರ್ 37 ರನ್ ಗಳಿಸಿದರು.
'ಮೋದಿ' ಮೈದಾನದಲ್ಲಿ ಅಯ್ಯರ್ ಸಾಧನೆ: ಆರ್‌ಸಿಬಿಗೆ ಸವಾಲು
ಕಿಂಗ್ಸ್ ನಾಯಕ ಅಯ್ಯರ್, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈವರೆಗೆ 7 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಈ ಪೈಕಿ ನಾಲ್ಕರಲ್ಲಿ ಅರ್ಧಶತಕದ ಗಡಿ ದಾಟಿದ್ದಾರೆ. ಹೀಗಾಗಿ, ಫೈನಲ್ ಪಂದ್ಯದಲ್ಲಿ ಆರ್‌ಸಿಬಿಗೆ ದೊಡ್ಡ ಸವಾಲು ಎದುರಾಗುವ ಸಾಧ್ಯತೆ ಇದೆ.
ಈ ಆವೃತ್ತಿಯಲ್ಲಿ ಇಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಕ್ರಮವಾಗಿ ಗುಜರಾತ್ ಟೈಟನ್ಸ್ (ಅಜೇಯ 97 ರನ್) ಹಾಗೂ ಮುಂಬೈ ಇಂಡಿಯನ್ಸ್ (ಅಜೇಯ 87 ರನ್) ವಿರುದ್ಧ ಅರ್ಧಶತಕ ಬಾರಿಸಿದ್ದಾರೆ. 2021ರಲ್ಲಿ ಇಂಗ್ಲೆಂಡ್ ವಿರುದ್ಧ 67 ರನ್ ಗಳಿಸಿದ್ದ ಅವರು, 2024ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 58 ರನ್ ಕಲೆಹಾಕಿದ್ದರು.
ಉಳಿದ ಮೂರು ಇನಿಂಗ್ಸ್‌ಗಳಲ್ಲಿ ಅಜೇಯ 8 ರನ್, 9 ರನ್ ಹಾಗೂ 37 ರನ್ ಗಳಿಸಿದ್ದಾರೆ.
ಕಿಂಗ್ಸ್ ಪರ ಗರಿಷ್ಠ ಸಿಕ್ಸ್
ಈ ಪಂದ್ಯದಲ್ಲಿ ಕಿಂಗ್ಸ್ ಪರ ನಾಯಕನ ಆಟವಾಡಿ 41 ಎಸೆತಗಳಲ್ಲಿ 87 ರನ್ ಬಾರಿಸಿದ ಅಯ್ಯರ್ ಇನಿಂಗ್ಸ್‌ನಲ್ಲಿ 8 ಭರ್ಜರಿ ಸಿಕ್ಸರ್‌ಗಳಿದ್ದವು. ಇದರೊಂದಿಗೆ, ಈ ಆವೃತ್ತಿಯಲ್ಲಿ ಅವರು ಸಿಡಿಸಿದ ಸಿಕ್ಸರ್‌ಗಳ ಸಂಖ್ಯೆ 39ಕ್ಕೇರಿತು.
ಈ ಬಾರಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ ಎನಿಸಿಕೊಳ್ಳಲು ಅವರಿಗೆ ಇನ್ನೊಂದು ಸಿಕ್ಸರ್ ಬೇಕಿದೆ. ಲಖನೌ ಸೂಪರ್ ಜೈಂಟ್ಸ್ ತಂಡದ ನಿಕೋಲಸ್ ಪೂರನ್ 40 ಬಾರಿ ಚೆಂಡನ್ನು ಬೌಂಡರಿ ಗೆರೆಯಾಚೆಗೆ ಬಾರಿಸಿದ್ದಾರೆ.
ಒಟ್ಟಾರೆ, ಕಿಂಗ್ಸ್ ಪರ ಹೆಚ್ಚು ಸಿಕ್ಸ್ ಸಿಡಿಸಿದ ಶ್ರೇಯ ಅಯ್ಯರ್ ಅವರದ್ದು. ಗ್ಲೆನ್ ಮ್ಯಾಕ್ಸ್‌ವೆಲ್ ಅವರು 2014ರಲ್ಲಿ 36 ಸಿಕ್ಸ್ ಸಿಡಿಸಿದ್ದರು. 2019 ಕ್ರಿಸ್ ಗೇಲ್, 2022ರಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ತಲಾ 34 ಸಲ ಇಷ್ಟು ಸಿಕ್ಸ್ ಬಾರಿಸಿದ್ದರು.
ಬರಿಗೈಯಲ್ಲಿ ಹೊರಟ ಬೂಮ್ರಾ
ಮುಂಬೈ ವೇಗಿ ಜಸ್‌ಪ್ರೀತ್ ಬೂಮ್ರಾ ತಮ್ಮ ಮೊದಲ ಓವರ್‌ನಲ್ಲೇ 20 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಪಂಜಾಬ್ ಇನಿಂಗ್ಸ್‌ನ 5ನೇ ಓವರ್‌ನಲ್ಲಿ ಬೂಮ್ರಾ ಹಾಕಿದ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ಜೋಶ್ ಇಂಗ್ಲಿಸ್, 3ನೇ ಎಸೆತದಲ್ಲಿ ಸಿಕ್ಸ್ ಸಿಡಿಸಿದರು. 5 ಹಾಗೂ 6ನೇ ಎಸೆತಗಳಲ್ಲೂ ಅದನ್ನೇ ಪುನರಾವರ್ತಿಸಿದರು.
ಈ ಪಂದ್ಯದಲ್ಲಿ ಒಟ್ಟು 4 ಓವರ್ ಬೌಲಿಂಗ್ ಮಾಡಿದ ಅವರು, 40 ರನ್ ಚಚ್ಚಿಸಿಕೊಂಡರೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಬೂಮ್ರಾ ಅವರು ಈ ಆವೃತ್ತಿಯಲ್ಲಿ ವಿಕೆಟ್ ಇಲ್ಲದೆ ಇನಿಂಗ್ಸ್ ಮುಗಿಸಿದ್ದು ಇದು ಎರಡನೇ ಬಾರಿ.
ಆರ್‌ಸಿಬಿ ವಿರುದ್ಧದ ಲೀಗ್ ಹಂತದ ಮೊದಲ ಪಂದ್ಯದಲ್ಲಿಯೂ ಅವರಿಗೆ ವಿಕೆಟ್ ಸಿಕ್ಕಿರಲಿಲ್ಲ.
ಮುಂಬೈ ಓಟಕ್ಕೆ ಕಿಂಗ್ಸ್ ತಡೆ
ಐಪಿಎಲ್‌ನಲ್ಲಿ ಮುಂಬೈ ಪಡೆ ಮೊದಲು ಬ್ಯಾಟಿಂಗ್ ಮಾಡಿ ಇನ್ನೂರಕ್ಕಿಂತ ಹೆಚ್ಚು ರನ್ ಗಳಿಸಿದ ಪಂದ್ಯಗಳಲ್ಲಿ ಎದುರಾಳಿ ತಂಡಗಳಿಗೆ ಇದುವರೆಗೆ ಜಯ ದಕ್ಕಿರಲಿಲ್ಲ. ಆ ಸವಾಲನ್ನು ಕಿಂಗ್ಸ್ ಮೀರಿತು. ಜೊತೆಗೆ, ಪ್ಲೇಆಫ್ ಹಂತದಲ್ಲಿ ಗರಿಷ್ಠ ಮೊತ್ತ ಬೆನ್ನತ್ತಿ ಗೆದ್ದ ಸಾಧನೆಯನ್ನೂ ಮಾಡಿದೆ.
ಐಪಿಎಲ್‌ನಲ್ಲಿ ಕಿಂಗ್ಸ್ ಪಡೆ 200ಕ್ಕಿಂತ ಹೆಚ್ಚು ಮೊತ್ತ ಬೆನ್ನತ್ತಿ ಗೆದ್ದದ್ದು ಇದು 8ನೇ ಬಾರಿ.
ಇದೊಂದೇ ಆವೃತ್ತಿಯಲ್ಲಿ ಬೇರೆಬೇರೆ ತಂಡಗಳು 200ಕ್ಕಿಂತ ಹೆಚ್ಚಿನ ಗುರಿಯನ್ನು 9 ಬಾರಿ ಬೆನ್ನತ್ತಿ ಗೆಲುವು ಸಾಧಿಸಿವೆ.
ಅಹಮದಾಬಾದ್‌ನಲ್ಲಿ ಮುಂಬೈಗೆ ಸತತ ಸೋಲು
ಅಹಮದಾಬಾದ್ ಕ್ರೀಡಾಂಗಣದಲ್ಲಿ 2014ರಲ್ಲಿ ರಾಜಸ್ಥಾನ ರಾಯಲ್ಸ್ ಎದುರು ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಮುಂಬೈ ಇಂಡಿಯನ್ಸ್, ಆ ನಂತರ ಇಲ್ಲಿ ಆಡಿದ ಸತತ 6ನೇ ಸೋಲು ಕಂಡಿದೆ.
ನಾಯಕನಾಗಿ ಶ್ರೇಯಸ್ ದಾಖಲೆ
ಐಪಿಎಲ್‌ನಲ್ಲಿ ಮೂರು ತಂಡಗಳನ್ನು ಫೈನಲ್‌ಗೆ ಮುನ್ನಡೆಸಿದ ಏಕೈಕ ನಾಯಕ ಎಂಬ ಹೆಗ್ಗಳಿಕೆ ಶ್ರೇಯಸ್ ಅಯ್ಯರ್ ಅವರದ್ದಾಯಿತು. ಅವರು 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್, 2024ರಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಈ ಬಾರಿ ಪಂಜಾಬ್ ಕಿಂಗ್ಸ್ ಅನ್ನು ಅಂತಿಮ ಹಂತಕ್ಕೆ ಮುನ್ನಡೆಸುತ್ತಿದ್ದಾರೆ.
2024ರಲ್ಲಿ ಕೆಕೆಆರ್ ಚಾಂಪಿಯನ್ ಆಗಿತ್ತು. ಈ ಬಾರಿ ಕಿಂಗ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡರೆ, ಎರಡು ತಂಡಗಳಿಗೆ 'ಕಪ್' ಗೆದ್ದುಕೊಟ್ಟ ಏಕೈಕ ನಾಯಕ ಎನಿಸಿಕೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.