ಋತುರಾಜ್ ಗಾಯಕವಾಡ್ ಮತ್ತು ಎಂಎಸ್ ಧೋನಿ
ಚೆನ್ನೈ: ಆರಂಭದಲ್ಲೇ ಹಿನ್ನಡೆ ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಶನಿವಾರ ನಡೆಯುವ ಐಪಿಎಲ್ ಪಂದ್ಯದಲ್ಲಿ ಅಜೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಋತುರಾಜ್ ಗಾಯಕವಾಡ ಅವರು ಗಾಯಾಳಾಗಿರುವ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ಸಾರಥ್ಯವನ್ನು ಅನುಭವಿ ಎಂ.ಎಸ್.ಧೋನಿ ವಹಿಸಿಕೊಳ್ಳುವ ಸಾಧ್ಯತೆಯಿದೆ.
ಪ್ರತಿಭಾನ್ವಿತ ಎಡಗೈ ಸ್ಪಿನ್ನರ್‌ಗಳಾದ– ಚೆನ್ನೈನ ನೂರ್ ಅಹ್ಮದ್ ಅವರ ತಂತ್ರಗಾರಿಕೆ ಮತ್ತು ಡೆಲ್ಲಿ ತಂಡದ ಕುಲದೀಪ್ ಯಾದವ್ ಅವರ ಕಲಾತ್ಮಕತೆ ಈ ಪಂದ್ಯದಲ್ಲಿ ಮೇಳೈಸುವ ನಿರೀಕ್ಷೆಯಿದೆ.
ಗುವಾಹಟಿಯಲ್ಲಿ ಮಾ. 30ರಂದು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯ ದಲ್ಲಿ ಋತುರಾಜ್ ಅವರ ಮೊಣಕೈಗೆ ಗಾಯವಾಗಿತ್ತು. ಹೀಗಾಗಿ ಶನಿವಾರ ಪಂದ್ಯದಲ್ಲಿ ಅವರು ಆಡುವುದು ಅನುಮಾನವಾಗಿದೆ.
ಬೆವರಿಳಿಸುವ ಚೆನ್ನೈನ ಉರಿ ಸೆಕೆಯಲ್ಲೇ ಮಧ್ಯಾಹ್ನ ಈ ಪಂದ್ಯ ನಡೆಯಲಿದೆ. ಇಲ್ಲಿನ ಪಿಚ್ ಸಾಂಪ್ರದಾಯಿಕ ವಾಗಿ ಸ್ಪಿನ್ನರ್ ಸ್ನೇಹಿ. ಗುಣಮಟ್ಟದ ದಾಳಿಯಿಂದ ಎದುರಾಳಿ ಗಳನ್ನು ತಬ್ಬಿಬ್ಬುಗೊಳಿಸಬಲ್ಲ ಕುಲದೀಪ್ 5.25ರ ಇಕಾನಮಿ ಹೊಂದಿದ್ದು ಡೆಲ್ಲಿ ತಂಡದ ಯಶಸ್ಸಿನಲ್ಲಿ ಅವರ ಪಾತ್ರ ಪ್ರಮುಖವಾಗಲಿದೆ. ಅಫ್ಗಾನಿಸ್ತಾನದ ಸ್ಪಿನ್ನರ್ ನೂರ್ ಅಹ್ಮದ್ ಕಡಿಮೆಯೇನಿಲ್ಲ. 6.83ರ ಇಕಾನಮಿ ಹೊಂದಿದ್ದು ಈಗಾಗಲೇ 9 ವಿಕೆಟ್ ಪಡೆದಿರುವುದು ಅವರ ಪ್ರಭಾವ ತೋರಿಸುತ್ತದೆ. ಈ ರಿಸ್ಟ್ ಸ್ಪಿನ್ನರ್‌ಗಳ ಬೌಲಿಂಗ್ ಶೈಲಿಯೂ ಭಿನ್ನ ರೀತಿಯದ್ದು.
ಬ್ಯಾಟಿಂಗ್ ಬಲ ಗಮನಿಸಿದರೆ ಡೆಲ್ಲಿ ಸ್ವಲ್ಪ ಮೇಲುಗೈ ಹೊಂದಿರುವಂತೆ ಕಾಣುತ್ತಿದೆ. ಅಶುತೋಷ್ ಶರ್ಮಾ, ವಿಪ್ರಜ್ ನಿಗಂ, ಅನುಭವಿ ಕೆ.ಎಲ್.ರಾಹುಲ್ ಅವರಿಂದ ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ. ನಾಯಕತ್ವದ ಹೊಣೆ ಕಳಚಿರುವ ಕಾರಣ ರಾಹುಲ್ ಒತ್ತಡವಿಲ್ಲದೇ ಆಡುವ ಅವಕಾಶ ಹೊಂದಿದ್ದಾರೆ.
ಬೀಸಾಟವಾಡುವ ಶಿವಂ ದುಬೆ ಚೆನ್ನೈನ ಬ್ಯಾಟಿಂಗ್ ವಿಭಾಗದಲ್ಲಿ ಪ್ರಮುಖ ಪಾತ್ರ ಹೊಂದಿದ್ದಾರೆ. ಹಳೆ ಹುಲಿ– ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಮೊದಲಿನ ‘ಫಿನಿಷರ್’ ಆಗಿ ಕಾಣುತ್ತಿಲ್ಲ. ಆರಂಭ ಆಟಗಾರ ರಾಹುಲ್ ತ್ರಿಪಾಠಿ ಈ ಬಾರಿ ಸಪ್ಪೆಯಾಗಿದ್ದಾರೆ. ಚೆನ್ನೈನ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಈ ಬಾರಿ 10 ಓವರುಗಳಿಂದ 99 ರನ್ ನೀಡಿದ್ದು ನಿರೀಕ್ಷಿತ ಯಶಸ್ಸು ಕಂಡಿಲ್ಲ
ಪಂದ್ಯ ಆರಂಭ: ಮಧ್ಯಾಹ್ನ 3.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.