ಆರ್‌ಸಿಬಿ ತಂಡದ ಸ್ಪಿನ್ನರ್ ಕೃಣಾಲ್ ಪಾಂಡ್ಯ
–ಪಿಟಿಐ ಚಿತ್ರ
ಕೋಲ್ಕತ್ತ : ರಜತ್ ಪಾಟೀದಾರ್ ನಾಯಕತ್ವದಲ್ಲಿ ಮೊದಲ ಪಂದ್ಯವಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಈಡನ್ ಗಾರ್ಡನ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಬಳಗವು 7 ವಿಕೆಟ್‌ಗಳಿಂದ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಆಘಾತ ನೀಡಿತು.
175 ರನ್‌ಗಳ ಗುರಿ ಬೆನ್ನಟ್ಟಿದ್ದ ತಂಡವು ವಿರಾಟ್ ಕೊಹ್ಲಿ ಅಜೇಯ ಅರ್ಧಶತಕ ಮತ್ತು ಫಿಲ್ ಸಾಲ್ಟ್ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಆರ್‌ಸಿಬಿಗೆ ಜಯ ಸುಲಭವಾಗಿ ಒಲಿಯಿತು. ಪಂದ್ಯ ಮುಗಿದಾಗ ಇನಿಂಗ್ಸ್‌ನಲ್ಲಿ 22 ಎಸೆತಗಳು ಬಾಕಿ ಇದ್ದವು. ವಿರಾಟ್ (ಔಟಾಗದೇ 59; 36ಎ, 4X4, 6X3) ಮತ್ತು ಫಿಲ್ ಸಾಲ್ಟ್ (56; 31ಎ) ಮೊದಲ ವಿಕೆಟ್ ಜೊತೆಯಾಟದಲ್ಲಿ 95 (50ಎಸೆತ) ರನ್ ಸೇರಿಸಿದರು. ಸತತ 18ನೇ ಆವೃತ್ತಿಯ ಟೂರ್ನಿ ಆಡುತ್ತಿರುವ ವಿರಾಟ್ 56ನೇ ಅರ್ಧಶತಕ ದಾಖಲಿಸಿದರು.
ಈ ಬಾರಿ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗಿರುವ ಸಾಲ್ಟ್ ಅವರು ಉತ್ತಮ ಆರಂಭ ನೀಡಿದರು. ಕೆಕೆಆರ್ ತಂಡದ ‘ಟ್ರಂಪ್ ಕಾರ್ಡ್’ ವರುಣ್ ಚಕ್ರವರ್ತಿ ಸೇರಿದಂತೆ ಎಲ್ಲ ಬೌಲರ್‌ಗಳನ್ನೂ ದಂಡಿಸಿದರು. 9ನೇ ಓವರ್‌ನಲ್ಲಿ ಸಾಲ್ಟ್ ಅವರ ವಿಕೆಟ್ ಗಳಿಸುವಲ್ಲಿ ಚಕ್ರವರ್ತಿ ಯಶಸ್ವಿಯಾದರು. ಇಂಗ್ಲೆಂಡ್ ಆಟಗಾರ ಸಾಲ್ಟ್ 9 ಬೌಂಡರಿ ಮತ್ತು 2 ಸಿಕ್ಸರ್ ಹೊಡೆದರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ದೇವದತ್ತ ಪಡಿಕ್ಕಲ್ ಒಂದು ಬೌಂಡರಿಯೊಂದಿಗೆ 10 ರನ್ ಹೊಡೆದರು. ಆದರೆ ಸುನಿಲ್ ನಾರಾಯಣ್ ಎಸೆತದಲ್ಲಿ ಔಟಾದರು.
ಕ್ರೀಸ್‌ಗೆ ಬಂದ ನಾಯಕ ರಜತ್ ನಿರ್ಭೀತಿಯಿಂದ ಬ್ಯಾಟ್ ಬೀಸಿದರು. ಕೊಹ್ಲಿ ತಮ್ಮ ಆಟಕ್ಕೆ ಅಲ್ಪವಿರಾಮ ನೀಡಿ ರಜತ್ ಆಟಕ್ಕೆ ಅನುವು ಮಾಡಿಕೊಟ್ಟರು. ಹರ್ಷಿತ್ ರಾಣಾ ಅವರ ಒಂದೇ ಓವರ್‌ನಲ್ಲಿ 4 ಬೌಂಡರಿಗಳನ್ನು ಚಚ್ಚಿದ ರಜತ್ ತಂಡವನ್ನು ಗೆಲುವಿನ ಸನಿಹ ತಂದರು. ಅವರು ಔಟಾದ ನಂತರ ವಿರಾಟ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ (ಔಟಾಗದೇ 15; 5ಎಸೆತ, 4X2, 6X1) ತಂಡವನ್ನು ಜಯದ ದಡ ಸೇರಿಸಿದರು.
ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಈ ಬಾರಿ ಆರ್‌ಸಿಬಿ ತಂಡದಲ್ಲಿ ಸ್ಥಾನ ಪಡೆದಿರುವ ಎಡಗೈ ಸ್ಪಿನ್ನರ್ ಕೃಣಾಲ್ ಪಾಂಡ್ಯ (29ಕ್ಕೆ3) ಮಿಂಚಿದರು. ಅವರ ನಿಖರ ದಾಳಿಯಿಂದಾಗಿ ಕೋಲ್ಕತ್ತ ತಂಡಕ್ಕೆ ಬೃಹತ್ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 174 ರನ್ ಗಳಿಸಿತು. ಕೋಲ್ಕತ್ತ ತಂಡದ ನಾಯಕ ಅಜಿಂಕ್ಯ ರಹಾನೆ ಅರ್ಧಶತಕ (31 ಎಸೆತಗಳಲ್ಲಿ 56) ಗಳಿಸಿದರು. ಅವರು ಸುನಿಲ್ (26 ಎಸೆತಗಳಲ್ಲಿ 44 ರನ್) ಜೊತೆಗೂಡಿ 103 ರನ್ ಸೇರಿಸಿದರು. ಅಜಿಂಕ್ಯ ನಾಲ್ಕು ಭರ್ಜರಿ ಸಿಕ್ಸರ್ ಮತ್ತು ಅರ್ಧ ಡಜನ್ ಬೌಂಡರಿ ಗಳಿಸಿದರು.
ಅಜಿಂಕ್ಯ, ವೆಂಕಟೇಶ್ ಅಯ್ಯರ್ ಮತ್ತು ರಿಂಕು ಸಿಂಗ್ ಅವರ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡ ಕೃಣಾಲ್ ಕೋಲ್ಕತ್ತದ ಓಟಕ್ಕೆ ಕಡಿವಾಣ ಹಾಕಿದರು.
ಕೋಲ್ಕತ್ತ ನೈಟ್ ರೈಡರ್ಸ್: 20 ಓವರ್‌ಗಳಲ್ಲಿ 8ಕ್ಕೆ174 (ಸುನಿಲ್ ನಾರಾಯಣ್ 44, ಅಜಿಂಕ್ಯ ರಹಾನೆ 56, ಅಂಗಕ್ರಿಷ್ ರಘುವಂಶಿ 30, ರಿಂಕು ಸಿಂಗ್ 12, ಜೋಶ್ ಹ್ಯಾಜಲ್‌ವುಡ್ 22ಕ್ಕೆ2, ಕೃಣಾಲ್ ಪಾಂಡ್ಯ 29ಕ್ಕೆ3).
ರಾಯಲ್ ಚಾಲೆಂಜರ್ಸ್ ಬೆಂಗಳೂರು: 16.2 ಓವರ್‌ಗಳಲ್ಲಿ 3ಕ್ಕೆ177 (ಫಿಲಿಪ್ ಸಾಲ್ಟ್ 56, ವಿರಾಟ್ ಕೊಹ್ಲಿ ಔಟಾಗದೇ 59, ರಜತ್ ಪಾಟೀದಾರ್ 34, ಲಿಯಾಮ್ ಲಿವಿಂಗ್‌ಸ್ಟೋನ್ ಔಟಾಗದೇ 15, ವೈಭವ್ ಅರೋರಾ 41ಕ್ಕೆ1, ವರುಣ್ ಚಕ್ರವರ್ತಿ 43ಕ್ಕೆ1, ಸುನಿಲ್ ನಾರಾಯಣ್ 27ಕ್ಕೆ1)
ಫಲಿತಾಂಶ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 7 ವಿಕೆಟ್‌ಗಳ ಜಯ.
ಪಂದ್ಯದ ಆಟಗಾರ: ಕೃಣಾಲ್ ಪಾಂಡ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.