ಜಸ್‌ಪ್ರೀತ್ ಬೂಮ್ರಾ
(ಚಿತ್ರ ಕೃಪೆ: X@mipaltan)
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬಲಗೈ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ, ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ.
ಇದರೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲಿಂಗ್ ಪಡೆ ಇನ್ನಷ್ಟು ಬಲಿಷ್ಠಗೊಂಡಂತಾಗಿದೆ.
ಐಪಿಎಲ್‌ನಲ್ಲಿ ಆಡಲು ಬೂಮ್ರಾಗೆ ಹಸಿರು ನಿಶಾನೆ ದೊರಕಿದೆಯೇ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಒಂದು ವೇಳೆ ಎನ್‌ಸಿಎದಿಂದ ಫಿಟ್ನೆಸ್ ಸರ್ಟಿಫಿಕೇಟ್ ಗಳಿಸಿದ್ದಲ್ಲಿ ಮುಂಬರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಮುಂಬೈ ಹಾಗೂ ಬೆಂಗಳೂರು ನಡುವಣ ಪಂದ್ಯವು ಏಪ್ರಿಲ್ 7ರಂದು ವಾಂಖೆಡೆ ಮೈದಾನದಲ್ಲಿ ನಡೆಯಲಿದೆ.
ಜಸ್‌ಪ್ರೀಮ್ ಬೂಮ್ರಾ ತಂಡಕ್ಕೆ ಸೇರಿಕೊಂಡಿರುವ ವಿಚಾರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಮುಂಬೈ ಇಂಡಿಯನ್ಸ್ ಹಂಚಿಕೊಂಡಿದೆ.
ವರ್ಷಾರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಸಿಡ್ನಿಯಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಬೂಮ್ರಾ ಬೆನ್ನು ನೋವಿಗೆ ತುತ್ತಾಗಿದ್ದರು. ಬಳಿಕ ತವರಿನಲ್ಲಿ ನಡೆದ ಇಂಗ್ಲೆಂಡ್ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಿಂದ ಹೊರಗುಳಿದಿದ್ದರು.
ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಬೂಮ್ರಾ ಅನುಪಸ್ಥಿತಿಯು ಮುಂಬೈಗೆ ಕಾಡುತ್ತಿದೆ. ಈವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆಲುವು ದಾಖಲಿಸಿದ್ದು, ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.