ಜಿತೇಶ್ ಶರ್ಮಾ
(ಪಿಟಿಐ ಚಿತ್ರ)
ಲಖನೌ: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಕಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಉಸ್ತುವಾರಿ ನಾಯಕ ಜಿತೇಶ್ ಶರ್ಮಾ, ತಮ್ಮ ಭಾವನೆಗಳನ್ನು ಪದಗಳಲ್ಲಿ ವಿವರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಬುಧವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರು ವಿಕೆಟ್ ಅಂತರದ ಗೆಲುವು ಸಾಧಿಸಿದ ಆರ್‌ಸಿಬಿ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಖಚಿತಪಡಿಸಿತ್ತಲ್ಲದೆ ಮೊದಲನೇ ಕ್ವಾಲಿಫೈಯರ್‌ಗೆ ಅರ್ಹತೆ ಗಿಟ್ಟಿಸಿಕೊಂಡಿತು.
ಲಖನೌ ಒಡ್ಡಿದ 228 ರನ್‌ಗಳ ಗುರಿಯನ್ನು ಇನ್ನೂ ಎಂಟು ಎಸೆತಗಳು ಬಾಕಿ ಇರುವಂತೆಯೇ ನಾಲ್ಕು ವಿಕೆಟ್ ನಷ್ಟಕ್ಕೆ ಆರ್‌ಸಿಬಿ ಗುರಿ ತಲುಪಿತು.
ಕೊನೆಯಲ್ಲಿ ಅಮೋಘ ಇನಿಂಗ್ಸ್ ಕಟ್ಟಿದ ಜಿತೇಶ್ ಕೇವಲ 33 ಎಸೆತಗಳಲ್ಲಿ ಅಜೇಯ 85 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಜಿತೇಶ್ ಇನಿಂಗ್ಸ್‌ನಲ್ಲಿ ಆರು ಸಿಕ್ಸರ್ ಹಾಗೂ ಎಂಟು ಬೌಂಡರಿಗಳು ಸೇರಿದ್ದವು.
ಪಂದ್ಯದ ಬಳಿಕ ಪ್ರತಿಕ್ರಿಯಿಸಿದ 31 ವರ್ಷದ ಜಿತೇಶ್, ತಮ್ಮ ಮೇಲೆ ನಂಬಿಕೆ ಇರಿಸಿದ ತಂಡದ ಮ್ಯಾನೇಜ್‌ಮೆಂಟ್ ಹಾಗೂ ಮೆಂಟರ್ ದಿನೇಶ್ ಕಾರ್ತಿಕ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
'ನನ್ನ ಆಲೋಚನೆಗಳನ್ನು ವ್ಯಕ್ತಿಪಡಿಸಲು ಸಾಧ್ಯವಾಗುತ್ತಿಲ್ಲ. ನಾನು ವರ್ತಮಾನದಲ್ಲಿ ಇರಲು ಬಯಸುತ್ತೇನೆ. ವಿರಾಟ್ ಕೊಹ್ಲಿ ಔಟ್ ಆದಾಗ ಆಟವನ್ನು ಕೊನೆಯವರೆಗೂ ಕೊಂಡೊಯ್ಯುವುದು ನನ್ನ ಇರಾದೆಯಾಗಿತ್ತು' ಎಂದು ಹೇಳಿದ್ದಾರೆ.
'ನನ್ನಲ್ಲಿರುವ ಸಾಮರ್ಥ್ಯದ ಬಗೆ ಮೆಂಟರ್ ದಿನೇಶ್ ಕಾರ್ತಿಕ್ ಪದೇ ಪದೇ ಹುರಿದುಂಬಿಸುತ್ತಿದ್ದರು. ಯಾವುದೇ ಪರಿಸ್ಥಿತಿಯಲ್ಲೂ ಪಂದ್ಯವನ್ನು ಗೆಲ್ಲಿಸಿಕೊಡಲು ನನ್ನಿಂದ ಸಾಧ್ಯ ಎಂದು ಹೇಳುತ್ತಿದ್ದರು' ಎಂದು ಜಿತೇಶ್ ನೆನಪಿಸಿಕೊಂಡಿದ್ದಾರೆ.
'ಓರ್ವ ಫಿನಿಶರ್ ಆಗಿ ಒತ್ತಡದ ಸನ್ನಿವೇಶದಲ್ಲಿ ಆಡುವುದನ್ನು ನಾನು ಆನಂದಿಸುತ್ತಿದ್ದೇನೆ. ವಿರಾಟ್, ಕೃಣಾಲ್, ಭುವಿ ಅವರೊಂದಿಗೆ ಆಡಲು ಸಂತಸವಾಗುತ್ತಿದೆ. ಈ ಕ್ಷಣವನ್ನು ಆನಂದಿಸಲು ಬಯಸುತ್ತೇನೆ' ಎಂದಿದ್ದಾರೆ.
'ತಮ್ಮಲ್ಲಿ ನಂಬಿಕೆಯನ್ನಿಟ್ಟು ಜವಾಬ್ದಾರಿ ನೀಡಿದ ನಾಯಕ ರಜತ್ ಪಾಟೀದಾರ್ ಅವರಿಗೂ ಶ್ರೇಯ ಸಲ್ಲಬೇಕು' ಎಂದು ಜಿತೇಶ್ ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ ಮೊದಲನೇ ಕ್ವಾಲಿಫೈಯರ್‌ನಲ್ಲೂ ಇದೇ ಹುಮ್ಮಸ್ಸಿನೊಂದಿಗೆ ಆಡುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.