ಸುನಿಲ್ ನಾರಾಯಣ್
(ಪಿಟಿಐ ಚಿತ್ರ)
ಡೆಲ್ಲಿ: ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 14 ರನ್ ಅಂತರದ ಮಹತ್ವದ ಗೆಲುವು ದಾಖಲಿಸಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್, ಅಂಗಕ್ರಿಷ್ ರಘುವಂಶಿ (44), ರಿಂಕು ಸಿಂಗ್ (36), ಸುನಿಲ್ ನಾರಾಯಣ್ (27), ರೆಹಮಾನುಲ್ಲಾ ಗುರ್ಬಾಜ್, ನಾಯಕ ಅಜಿಂಕ್ಯ ಹಾಗೂ ಆ್ಯಂಡ್ರೆ ರಸೆಲ್ (17) ರಹಾನೆ ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಒಂಬತ್ತು ವಿಕೆಟ್ ನಷ್ಟಕ್ಕೆ 204 ರನ್‌ಗಳ ಸವಾಲಿನ ಮೊತ್ತ ಪೇರಿಸಿತು.
ಡೆಲ್ಲಿ ಪರ ಮಿಚೆಲ್ ಸ್ಟಾರ್ಕ್ ಮೂರು ಮತ್ತು ವಿಪ್‌ರಾಜ್ ನಿಗಂ ಹಾಗೂ ನಾಯಕ ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಗಳಿಸಿದರು.
ಈ ಗುರಿ ಬೆನ್ನಟ್ಟಿದ ಡೆಲ್ಲಿ, ಫಫ್ ಡುಪ್ಲೆಸಿ (62), ನಾಯಕ ಅಕ್ಷರ್ ಪಟೇಲ್ ಹಾಗೂ ವಿಪ್‌ರಾಜ್ ನಿಗಂ (38) ದಿಟ್ಟ ಹೋರಾಟದ ಹೊರತಾಗಿಯೂ ಒಂಬತ್ತು ವಿಕೆಟ್ ನಷ್ಟಕ್ಕೆ 190 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಕೆಕೆಆರ್ ಪರ ಆಲ್‌ರೌಂಡ್ ಪ್ರದರ್ಶನ ನೀಡಿದ ನಾರಾಯಣ್ ಬೌಲಿಂಗ್‌ನಲ್ಲೂ ಮೂರು ವಿಕೆಟ್ ಗಳಿಸಿ ಮಿಂಚಿದರು. ಅಲ್ಲದೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ವರುಣ್ ಚಕ್ರವರ್ತಿ ಎರಡು ವಿಕೆಟ್ ಗಳಿಸಿದರು.
ಅಂಕಪಟ್ಟಿಯಲ್ಲಿ 7ನೇ ಸ್ಥಾನ...
ಈ ಗೆಲುವಿನೊಂದಿಗೆ 10 ಪಂದ್ಯಗಳಲ್ಲಿ ನಾಲ್ಕನೇ ಗೆಲುವು ಸಾಧಿಸಿರುವ ಕೋಲ್ಕತ್ತ ನೈಟ್ ರೈಡರ್ಸ್ ಒಟ್ಟು 9 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಕೋಲ್ಕತ್ತದ ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.
ಮತ್ತೊಂದೆಡೆ ಪ್ಲೇ-ಆಫ್ ರೇಸ್‌ನಲ್ಲಿರುವ ಡೆಲ್ಲಿ ತಂಡ ನಿರ್ಣಾಯಕ ಎರಡು ಅಂಕಗಳನ್ನು ಕಳೆದುಕೊಂಡಿದೆ. ಆದರೂ 10 ಪಂದ್ಯಗಳಲ್ಲಿ ಆರು ಗೆಲುವು ದಾಖಲಿಸಿರುವ ಡೆಲ್ಲಿ 12 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ಚೊಚ್ಚಲ ಟ್ರೋಫಿಯ ಹುಡುಕಾಟದಲ್ಲಿರುವ ಡೆಲ್ಲಿಗೆ ಪ್ಲೇ-ಆಫ್‌ಗೆ ಪ್ರವೇಶಿಸುವ ನಿಟ್ಟಿನಲ್ಲಿ ಮುಂದಿನ ನಾಲ್ಕು ಪಂದ್ಯಗಳು ನಿರ್ಣಾಯಕವೆನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.