ನಾಲ್ಕು ವಿಕೆಟ್ ಪಡೆದು ಮಿಂಚಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಡಗೈ ಸ್ಪಿನ್ನರ್ ನೂರ್ ಅಹಮ್ಮದ್
ಕೋಲ್ಕತ್ತ: ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಬುಧವಾರ ಈಡನ್ ಗಾರ್ಡನ್‌ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರೋಚಕ ಜಯಸಾಧಿಸಿತು. ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಪ್ಲೇ ಆಫ್ ಹಾದಿಯಿಂದ ಬಹುತೇಕ ಹೊರನಡೆಯಿತು.
180 ರನ್‌ಗಳ ಗುರಿ ಬೆನ್ನಟ್ಟಿದ್ದ ಚೆನ್ನೈ ತಂಡವು ಡಿವಾಲ್ಡ್ ಬ್ರೆವಿಸ್ (52; 25ಎಸೆತ), ಶಿವಂ ದುಬೆ (45; 40ಎ) ಮತ್ತು ಧೋನಿ (ಔಟಾಗದೇ 17, 18ಎ) ಅವರ ಬ್ಯಾಟಿಂಗ್ ಬಲದಿಂದ 2 ವಿಕೆಟ್‌ಗಳಿಂದ ಜಯಿಸಿತು. ಚೆನ್ನೈ ತಂಡವು ಈಗಾಗಲೇ ಪ್ಲೇಆಫ್ ಹಾದಿಯಿಂದ ಹೊರಬಿದ್ದಿದ್ದು, ಇದು ಸಮಾಧಾನಕರ ಜಯವಾಗಿದೆ.
ಆದರೆ ಕೋಲ್ಕತ್ತ ತಂಡಕ್ಕೆ ಈ ಪಂದ್ಯದಲ್ಲಿ ಜಯಿಸುವುದು ಮುಖ್ಯವಾಗಿತ್ತು. ಟಾಸ್ ಗೆದ್ದ ಆತಿಥೇಯ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಎಡಗೈ ಸ್ಪಿನ್ನರ್ ನೂರ್ ಅಹ್ಮದ್ (31ಕ್ಕೆ4) ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಪಿನ್ನರ್‌ಗಳು ಕೋಲ್ಕತ್ತ ತಂಡವನ್ನು ಮಧ್ಯಮ ಹಂತದ ಓವರ್‌ಗಳಲ್ಲಿ ಕಟ್ಟಿಹಾಕಿದರು. ಇದರಿಂದಾಗಿ ತಂಡವು 6 ವಿಕೆಟ್‌ಗೆ 179 ರನ್‌ಗಳ ಸಾಧಾರಣ ಮೊತ್ತ ಗಳಿಸಲಷ್ಟೇ ಶಕ್ತವಾಯಿತು.
ಪವರ್ ಪ್ಲೇ ವೇಳೆ 1 ವಿಕೆಟ್‌ಗೆ 67 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಆತಿಥೇಯ ತಂಡ ನಂತರ ಹಳಿ ತಪ್ಪತೊಡಗಿತು. ಚೆಂಡಿಗೆ ತಿರುವು ನೀಡುತ್ತಿದ್ದ ಪಿಚ್‌ನ ಲಾಭ ಪಡೆದ ಅಫ್ಗನ್ ಬೌಲರ್ ನೂರ್, ಪವರ್ ಪ್ಲೇ ಮುಗಿದ ಮರುಕ್ಷಣವೇ ಎದುರಾಳಿಗಳಿಗೆ ಹೊಡೆತ ನೀಡಿದರು. ಒಂದೇ ಓವರಿನಲ್ಲಿ ಎರಡು ವಿಕೆಟ್ ಪಡೆದರು.
ಮೊದಲು ಸುನೀಲ್ ನಾರಾಯಣ್ (26, 17ಎ, 4x4, 6x1) ಅವರನ್ನು ಹೊಡೆತದ ಪ್ರಲೋಭನೆಗೆ ಒಡ್ಡಿದರು. ಎಡವಿದ ಸುನೀಲ್ ವಿಕೆಟ್ ಕೀಪರ್ ಧೋನಿ ಅವರಿಂದ ಮಿಂಚಿನ ಸ್ಟಂಪಿಂಗ್‌ಗೆ ಔಟಾದರು. ನಾಲ್ಕು ಎಸೆತಗಳ ತರುವಾಯ ಅಂಗ್‌ಕ್ರಿಶ್ ರಘುವಂಶಿ (1) ವಿಕೆಟ್ ಕೀಪರ್‌ಗೆ ಕ್ಯಾಚಿತ್ತರು. ಈ ಹಿಂದಿನ ಪಂದ್ಯದಲ್ಲಿ ಬಿರುಸಿನ ಅರ್ಧ ಶತಕ ಗಳಿಸಿದ್ದ ಆ್ಯಂಡ್ರೆ ರಸೆಲ್ ಈ ಬಾರಿಯೂ ಬೀಸಾಟಕ್ಕಿಳಿದ ಪರಿಣಾಮ ರನ್ ವೇಗ ಕೊಂಚ ಹೆಚ್ಚತೊಡಗಿತು. ಜಮೈಕಾದ ಈ ಬ್ಯಾಟರ್, ಜಡೇಜ ಅವರ ಒಂದೇ ಓವರಿನಲ್ಲಿ ಎರಡು ಬೌಂಡರಿ, ಒಂದು ಸಿಕ್ಸರ್ ಬಾರಿಸಿದರು. ನೂರ್ ಅವರ ಗೂಗ್ಲಿ ಎಸೆತವನ್ನು ಭರ್ಜರಿಯಾಗಿ ಸ್ಟ್ಯಾಂಡ್‌ಗಟ್ಟಿದರು. ಆದರೆ ಕೊನೆಗೆ ಇನ್ನೊಂದು ಗೂಗ್ಲಿ ಎಸೆತದಲ್ಲಿ ಅವರಿಗೇ ವಿಕೆಟ್ ತೆತ್ತರು. ನೂರ್ ತಮ್ಮ ಕೊನೆಯ ಓವರಿನಲ್ಲಿ ರಿಂಕು ಸಿಂಗ್ (9) ವಿಕೆಟ್ ಸಹ ಪಡೆದರು.
ಗುರಿ ಬೆನ್ನಟ್ಟಿದ ಚೆನ್ನೈ ಆರಂಭ ಉತ್ತಮವಾಗಿರಲಿಲ್ಲ. ಇಬ್ಬರೂ ಆರಂಭಿಕರು ಸೊನ್ನೆ ಸುತ್ತಿದರು. ಯುವ ಆಟಗಾರ ಊರ್ವಿಲ್ ಪಟೇಲ್ (31; 11ಎ, 4X1, 6X4) ಇನಿಂಗ್ಸ್‌ಗೆ ಚೇತರಿಕೆ ನೀಡಿದರು. ಆದರೆ ಅನುಭವಿ ಅಶ್ವಿನ್ (8 ರನ್) ಹೆಚ್ಚು ಹೊತ್ತು ಆಡಲಿಲ್ಲ. ಈ ಹಂತದಲ್ಲ ಜಡೇಜ (19; 10ಎ) ಕೂಡ ಬೇಗನೆ ನಿರ್ಗಮಿಸಿದರು.
ಆಗ ತಂಡಕ್ಕೆ ಆಸರೆ ತುಂಬಿದ್ದು ಡಿವಾಲ್ಡ್ 4 ಬೌಂಡರಿ ಮತ್ತು ಅಷ್ಟೇ ಸಂಖ್ಯೆಯ ಸಿಕ್ಸರ್‌ಗಳನ್ನು ಸಿಡಿಸಿದರು. ಅವರಿಗೆ ಶಿವಂ ದುಬೆ ಉತ್ತಮ ಜೊತೆ ನೀಡಿದರು.
ಆದರೆ ಕೋಲ್ಕತ್ತ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ ಬೌಲಿಂಗ್‌ನಲ್ಲಿ ಡಿವಾಲ್ಡ್ ಔಟಾದರು. ಜೊತೆಯಾಟ ಮುರಿಯಿತು. ಕ್ರೀಸ್‌ಗೆ ಬಂದ ಧೋನಿ ಬೀಸಾಟಕ್ಕಿಳಿಯದೇ ತಾಳ್ಮೆಯ ಆಟಕ್ಕೆ ಮೊರೆ ಹೋದರು. 19ನೇ ಓವರ್‌ನಲ್ಲಿ ದುಬೆ ಔಟಾದಾಗ ಧೋನಿ ಇನಿಂಗ್ಸ್ ಹೊಣೆ ಹೊತ್ತರು. ಕೊನೆಯ ಓವರ್‌ನಲ್ಲಿ ತಂಡದ ಗೆಲುವಿಗೆ 8 ರನ್‌ಗಳ ಅಗತ್ಯವಿತ್ತು. ಮೊದಲ ಎಸೆತವನ್ನು ಸಿಕ್ಸರ್‌ಗೆತ್ತಿದ ಧೋನಿ, 3ನೇ ಎಸೆತದಲ್ಲಿ ಒಂಟಿ ರನ್ ಪಡೆದರು. ಕ್ರೀಸ್‌ಗೆ ಬಂದ ಅನ್ಷುಲ್ ಕಾಂಭೋಜ್ ವಿಜಯದ ಬೌಂಡರಿ ಹೊಡೆದರು.
ಸಂಕ್ಷಿಪ್ತ ಸ್ಕೋರು: ಕೋಲ್ಕತ್ತ ನೈಟ್ ರೈಡರ್ಸ್: 20 ಓವರುಗಳಲ್ಲಿ 6 ವಿಕೆಟ್‌ಗೆ 179 (ಸುನೀಲ್ ನಾರಾಯಣ್ 26, ಅಜಿಂಕ್ಯ ರಹಾನೆ 48, ಮನೀಷ್ ಪಾಂಡೆ ಔಟಾಗದೇ 36, ಆ್ಯಂಡ್ರೆ ರಸೆಲ್ 38, ಅನ್ಶುಲ್ ಕಾಂಭೋಜ್ 38ಕ್ಕೆ1, ನೂರ್ ಅಹ್ಮದ್ 31ಕ್ಕೆ4, ರವೀಂದ್ರ ಜಡೇಜ 34ಕ್ಕೆ1) ಚೆನ್ನೈ ಸೂಪರ್ ಕಿಂಗ್ಸ್: 19.4 ಓವರ್‌ಗಳಲ್ಲಿ 8ಕ್ಕೆ183 (ಡಿವಾಲ್ಡ್ ಬ್ರೆವಿಸ್ 52, ಶಿವಂ ದುಬೆ 45, ವೈಭವ್ ಅರೋರಾ 48ಕ್ಕೆ3, ವರುಣ್ ಚಕ್ರವರ್ತಿ 18ಕ್ಕೆ2) ಫಲಿತಾಂಶ: ಚೆನ್ನೈ ಸೂಪರ್ ಕಿಂಗ್ಸ್‌ಗೆ 2 ವಿಕಟ್ ಗಳ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.