ಕೋಲ್ಕತ್ತ ನೈಟ್ ರೈಡರ್ಸ್ ಆಟಗಾರರ ಸಂಭ್ರಮ
(ಪಿಟಿಐ ಚಿತ್ರ)
ರಸೆಲ್ ಅರ್ಧಶತಕ: ಹರ್ಷಿತ್, ವರುಣ್ ಅಮೋಘ ಬೌಲಿಂಗ್; ಶತಕದ ಸನಿಹ ಎಡವಿದ ರಿಯಾನ್
ಕೋಲ್ಕತ್ತ: ರಿಯಾನ್ ಪರಾಗ್ ಅವರ ಅಬ್ಬರಕ್ಕೆ ತಡೆಯೊಡ್ಡಿದ ಹರ್ಷಿತ್ ರಾಣಾ ಅಮೋಘ ಬೌಲಿಂಗ್ ಬಲದಿಂದ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ರಾಜಸ್ಥಾನ ರಾಯಲ್ಸ್ ಎದುರು 1 ರನ್ ಅಂತರದ ರೋಚಕ ಜಯ ಸಾಧಿಸಿತು.
ಈಡನ್ ಗಾರ್ಡನ್‌ನಲ್ಲಿ ಭಾನುವಾರ ನಡೆದ ಪಂದ್ಯವು ಕೋಲ್ಕತ್ತ ತಂಡಕ್ಕೆ ಮಹತ್ವದ್ದಾಗಿತ್ತು. ಈ ಪಂದ್ಯದಲ್ಲಿ ಸೋತಿದ್ದರೆ ತಂಡಕ್ಕೆ ಪ್ಲೇ ಆಫ್ ಹಾದಿಯು ಕಡುಕಠಿಣವಾಗುವ ಸಾಧ್ಯತೆ ಇತ್ತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತ ತಂಡವು ಆ್ಯಂಡ್ರೆ ರಸೆಲ್ (ಔಟಾಗದೇ 57; 25ಎಸೆತ) ಅವರ ಮಿಂಚಿನ ಅರ್ಧಶತಕದ ಬಲದಿಂದ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 206 ರನ್ ಗಳಿಸಿತು. ಅದಕ್ಕುತ್ತರವಾಗಿ ರಾಜಸ್ಥಾನ ರಾಯಲ್ಸ್ ತಂಡವು ವಿರೋಚಿತ ಹೋರಾಟವನ್ನೇ ಮಾಡಿತು. ತಂಡದ ನಾಯಕ ರಿಯಾನ್ ಪರಾಗ್ (95; 45ಎ) ಅವರ ಆಟದಿಂದಾಗಿ ಗೆಲುವಿನ ಸನಿಹಕ್ಕೆ ಬಂದಿತ್ತು. ಆದರೆ 18ನೇ ಓವರ್ ಬೌಲಿಂಗ್ ಮಾಡಿದ ಹರ್ಷಿತ್ ರಾಣಾ ಅವರು ರಿಯಾನ್ ಆಟಕ್ಕೆ ತಡೆಯೊಡ್ಡಿದರು. ರಾಣಾ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಪರಾಗ್, ವೈಭವ್ ಅರೋರಾಗೆ ಕ್ಯಾಚ್ ಕೊಟ್ಟರು. 16ನೇ ಓವರ್‌ನಲ್ಲಿ ಹರ್ಷಿತ್ ಅವರು ಶಿಮ್ರಾನ್ ಹೆಟ್ಮೆಯರ್ (29. 23ಎ) ವಿಕೆಟ್ ಕೂಡ ಗಳಿಸಿದ್ದರು.
ಇಷ್ಟಾದರೂ ಇಂಪ್ಯಾಕ್ಟ್ ಪ್ಲೇಯರ್ ಶುಭಂ ದುಬೆ (ಔಟಾಗದೇ 25) ಮತ್ತು ಜೋಫ್ರಾ ಆರ್ಚರ್ (12 ರನ್) ಅವರು ಹೋರಾಟವನ್ನು ಜೀವಂತವಾಗಿಟ್ಟರು. ವೈಭವ್ ಹಾಕಿದ ಕೊನೆಯ ಓವರ್‌ನಲ್ಲಿ ತಂಡದ ಗೆಲುವಿಗೆ 22 ರನ್ ಅಗತ್ಯವಿದ್ದಾಗ ಇವರಿಬ್ಬರೂ ಬೀಸಾಟವಾಡಿದರು. ಆದರೆ ಕೊನೆ ಎಸೆತದಲ್ಲಿ ಜೋಫ್ರಾ ಅವರನ್ನು ರನ್ ಔಟ್ ಮಾಡುವಲ್ಲಿ ರಿಂಕು ಸಿಂಗ್ ಮತ್ತು ಅರೋರಾ ಯಶಸ್ವಿಯಾದರು. ರಾಜಸ್ಥಾನ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 205 ರನ್ ಗಳಿಸಿತು.
ಒಂದೇ ಓವರ್‌ನಲ್ಲಿ ಪರಾಗ್ 5 ಸಿಕ್ಸರ್
ಟೂರ್ನಿಯುದ್ದಕ್ಕೂ ಅಸ್ಥಿರ ಲಯದಲ್ಲಿದ್ದ ರಿಯಾನ್ ಪರಾಗ್ ಈ ಪಂದ್ಯದಲ್ಲಿ ಮಿಂಚಿದರು. ಅನುಭವಿ ಸ್ಪಿನ್ನರ್ ಮೋಯಿನ್ ಅಲಿ ಹಾಕಿದ 13ನೇ ಓವರ್‌ನಲ್ಲಿ ಐದು ಸಿಕ್ಸರ್‌ಗಳನ್ನು ಹೊಡೆದರು. ಈ ಓವರ್‌ನ ಮೊದಲ ಎಸೆತದಲ್ಲಿ ಹೆಟ್ಮೆಯರ್ 1 ರನ್ ಗಳಿಸಿದರು. ಕ್ರೀಸ್‌ಗೆ ಬಂದ ಪರಾಗ್ ಉಳಿದ ಐದು ಎಸೆತಗಳಲ್ಲಿಯೂ ಸಿಕ್ಸರ್ ಬಾರಿಸಿದರು. ಈ ಓವರ್‌ನಲ್ಲಿ ಒಂದು ವೈಡ್ ಸೇರಿದಂತೆ ಒಟ್ಟು 32 ರನ್‌ಗಳು ಸೇರಿದವು.
ವರುಣ್ ಚಕ್ರವರ್ತಿ ಹಾಕಿದ 14ನೇ ಓವರ್‌ನಲ್ಲಿ ಮೊದಲ ಎಸೆತದಲ್ಲಿ ಹೆಟ್ಮೆಯರ್ ಒಂದು ರನ್ ಪಡೆದರು. ನಂತರದ ಎಸೆತದಲ್ಲಿ ಕ್ರೀಸ್‌ಗೆ ಬಂದ ರಿಯಾನ್ ಸಿಕ್ಸರ್‌ಗೆತ್ತಿದರು.
ಈ ಹಿಂದೆ ಐಪಿಎಲ್‌ನಲ್ಲಿ ಒಂದೇ ಓವರ್‌ನಲ್ಲಿ ಐದು ಸಿಕ್ಸರ್ ಹೊಡೆದ ಸಾಧನೆಯನ್ನು ಕ್ರಿಸ್ ಗೇಲ್, ರಾಹುಲ್ ತೆವಾಟಿಯಾ, ರವೀಂದ್ರ ಜಡೇಜ ಹಾಗೂ ರಿಂಕು ಸಿಂಗ್ ಮಾಡಿದ್ದರು.
ರಸೆಲ್ ಅಬ್ಬರ
ಬ್ಯಾಟಿಂಗ್ ಆರಂಭಿಸಿದ ಕೋಲ್ಕತ್ತ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಎರಡನೇ ಓವರ್‌ನಲ್ಲಿಯೇ ಸುನಿಲ್ ನಾರಾಯಣ್ ಅವರನ್ನು ಕ್ಲೀನ್‌ಬೌಲ್ಡ್ ಮಾಡುವಲ್ಲಿ ಯುಧವೀರ್ ಸಿಂಗ್ ಸಫಲರಾದರು. ಇನ್ನೊಬ್ಬ ಆರಂಭಿಕ ಬ್ಯಾಟರ್ ಗುರ್ಬಾಜ್ (35ರನ್) ಅವರ ವಿಕೆಟ್ ಗಳಿಸಿದ ಸ್ಪಿನ್ನರ್ ತೀಕ್ಷಣ ಪೆಟ್ಟು ಕೊಟ್ಟರು. ಈ ಹಂತದಲ್ಲಿ ಅಜಿಂಕ್ಯ ರಹಾನೆ ಮತ್ತು ಅಂಗಕ್ರಿಷ್ ರಘುವಂಶಿ ಅವರು ಇನಿಂಗ್ಸ್‌ಗೆ ಚೇತರಿಕೆ ನೀಡಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 42 ರನ್ ಸೇರಿಸಿದರು. ಆದರೆ ಅಜಿಂಕ್ಯ ಅವರ ವಿಕೆಟ್ ಗಳಿಸಿದ ರಿಯಾನ್ ಪರಾಗ್ ರನ್ ಗಳಿಕೆಯ ವೇಗಕ್ಕೆ ಅಡ್ಡಿಯಾದರು.
ಕ್ರೀಸ್‌ಗೆ ಬಂದ ಆ್ಯಂಡ್ರೆ ರಸೆಲ್ ತಮ್ಮ ಹಳೆಯ ವೈಭವವನ್ನು ಪ್ರದರ್ಶಿಸಿದರು. ಅರ್ಧಡಜನ್ ಸಿಕ್ಸರ್ ಸಿಡಿಸಿದರು. 4 ಬೌಂಡರಿ ಬಾರಿಸಿದರು. ಅವರೊಂದಿಗೆ ರಿಂಕು ಸಿಂಗ್ 6 ಎಸೆತಗಳಲ್ಲಿ 19 ರನ್ ಗಳಿಸಿದರು. ಇದರಿಂದಾಗಿ ತಂಡವು ದ್ವಿಶತಕದ ಗಡಿ ದಾಟಿತು.
ಆರನೇ ಸ್ಥಾನಕ್ಕೆ ಕೆಕೆಆರ್...
ಈ ಗೆಲುವಿನೊಂದಿಗೆ 11 ಪಂದ್ಯಗಳಲ್ಲಿ ಐದನೇ ಗೆಲುವು ದಾಖಲಿಸಿರುವ ಕೆಕೆಆರ್ 11 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಈಗಾಗಲೇ ಪ್ಲೇ-ಆಫ್ ರೇಸ್‌ನಿಂದ ನಿರ್ಗಮಿಸಿರುವ ರಾಜಸ್ಥಾನ 12 ಪಂದ್ಯಗಳಲ್ಲಿ ಮೂರು ಗೆಲುವಿನೊಂದಿಗೆ ಆರು ಅಂಕ ಮಾತ್ರ ಹೊಂದಿದ್ದು, ಏಳನೇ ಸ್ಥಾನಲ್ಲಿದೆ.
22 ಎಸತೆಗಳಲ್ಲಿ ರಸೆಲ್ ಅರ್ಧಶತಕ; ರಾಜಸ್ಥಾನಕ್ಕೆ 207 ರನ್‌ಗಳ ಗುರಿ ಒಡ್ಡಿದ ಕೋಲ್ಕತ್ತ
ಆ್ಯಂಡ್ರೆ ರಸೆಲ್
ಆ್ಯಂಡ್ರೆ ರಸೆಲ್ (57*) ಹಾಗೂ ಅಂಗ್‌ಕ್ರಿಷ್ ರಘುವಂಶಿ (44*) ಬಿರುಸಿನ ಆಟದ ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಇಂದು ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 206 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ಆರಂಭ ಉತ್ತಮವಾಗಿರಲಿಲ್ಲ. ಆರಂಭದಲ್ಲೇ ಸುನಿಲ್ ನಾರಾಯಣ್ (11) ವಿಕೆಟ್ ನಷ್ಟವಾಯಿತು. ಬಳಿಕ ನಾಯಕ ಅಜಿಂಕ್ಯ ರಹಾನೆ ಜೊತೆಗೂಡಿದ ರಹಮಾನುಲ್ಲಾ ಗುರ್ಬಾಜ್ ದ್ವಿತೀಯ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ಕಟ್ಟಿದರು.
ಗುರ್ಬಾಜ್ 35 ಹಾಗೂ ರಹಾನೆ 30 ರನ್‌ಗಳ ಕೊಡುಗೆ ನೀಡಿದರು.
ಬಳಿಕ ಕ್ರೀಸಿಗಿಳಿದ ಅಂಗ್‌ಕ್ರಿಷ್ ರಘುವಂಶಿ ಹಾಗೂ ಆ್ಯಂಡ್ರೆ ರಸೆಲ್ ಆಕ್ರಮಣಕಾರಿಯಾಗಿ ಆಡುವ ಮೂಲಕ ಬೃಹತ್ ಮೊತ್ತ ಪೇರಿಸಲು ನೆರವಾದರು. ರಘುವಂಶಿ 31 ಎಸೆತಗಳಲ್ಲಿ 44 ರನ್ (5 ಬೌಂಡರಿ) ಗಳಿಸಿದರು.
ಅತ್ತ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ರಸೆಲ್ ಕೇವಲ 22 ಎಸೆತಗಳಲ್ಲಿ ಅರ್ಧಶತಕದ ಸಾಧನೆ ಮಾಡಿದರು. ಕೊನೆಯ ಹಂತದಲ್ಲಿ ರಿಂಕು ಸಿಂಗ್ ಅವರಿಂದಲೂ ಉತ್ತಮ ಸಾಥ್ ದೊರಕಿತು. ರಿಂಕು 6 ಎಸೆತಗಳಲ್ಲಿ 19 ರನ್ ಗಳಿಸಿ (2 ಸಿಕ್ಸರ್, 1 ಬೌಂಡರಿ) ಔಟಾಗದೆ ಉಳಿದರು.
ಮತ್ತೊಂದೆಡೆ ಆರು ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಬಾರಿಸಿ ಅಬ್ಬರಿಸಿದ ರಸೆಲ್, 57 ರನ್ ಗಳಿಸಿ (25 ಎಸೆತ) ಅಜೇಯರಾಗುಳಿದರು.
ರಾಜಸ್ಥಾನ ವಿರುದ್ಧ ಟಾಸ್ ಗೆದ್ದ ಕೋಲ್ಕತ್ತ ಬ್ಯಾಟಿಂಗ್
2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಇಂದು ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ರಾಜಸ್ಥಾನ ರಾಯಲ್ಸ್ ಸವಾಲನ್ನು ಎದುರಿಸುತ್ತಿದೆ.
ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನದಲ್ಲಿ ಈ ಪಂದ್ಯವು ನಡೆಯುತ್ತಿದೆ.
ಟಾಸ್ ಗೆದ್ದಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಗಾಯದಿಂದ ಚೇತರಿಸಿಕೊಂಡಿರುವ ರಹಾನೆ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಗೆಲುವಿನ ಒತ್ತಡದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್...
ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಈ ಬಾರಿಯ ಐಪಿಎಲ್‌ನಲ್ಲಿ ಪ್ಲೇ ಆಫ್ ಪ್ರವೇಶಕ್ಕೆ ಇನ್ನೂ ಅವಕಾಶ ಇದೆ. ಆದರೆ ಈಗಾಗಲೇ ನಾಕೌಟ್ ಹಾದಿಯಿಂದ ಹೊರಬಿದ್ದಿರುವ ರಾಜಸ್ಥಾನ ರಾಯಲ್ಸ್ ತಂಡವು ಕೋಲ್ಕತ್ತದ ದಾರಿಗೆ ಅಡ್ಡಗಾಲು ಹಾಕಲು ಸಿದ್ಧವಾಗಿದೆ.
ಈಡನ್ ಗಾರ್ಡನ್‌ನಲ್ಲಿ ಭಾನುವಾರ ನಡೆಯಲಿರುವ ಪಂದ್ಯವು ಕೋಲ್ಕತ್ತಕ್ಕೆ ಬಹಳ ಮಹತ್ವದ್ದಾಗಿದೆ. ಅಜಿಂಕ್ಯ ರಹಾನೆ ಪಡೆಯು ತನ್ನ ಪಾಲಿಗೆ ಉಳಿದಿರುವ ಎಲ್ಲ ನಾಲ್ಕು ಪಂದ್ಯಗಳನ್ನು ಗೆದ್ದರೆ ಪ್ಲೇಆಫ್ ಪ್ರವೇಶಿಸಲು ಸಾಧ್ಯವಾಗಲಿದೆ. ಸದ್ಯ 9 ಅಂಕ ಗಳಿಸಿರುವ ಕೋಲ್ಕತ್ತ ತಂಡದ ಈ ಪರಿಸ್ಥಿತಿಗೆ ಪ್ರಮುಖ ಆಟಗಾರರ ಅಸ್ಥಿರ ಪ್ರದರ್ಶನವೇ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.