ಭಾನುವಾರ ವಾಖೆಂಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಒಂಬತ್ತು ವಿಕೆಟ್‌ಗಳ ಜಯ ಸಾಧಿಸಿತು.
ರೋಹಿತ್ ಶರ್ಮಾ ಅವರ ಅಜೇಯ 76 ರನ್, ಸೂರ್ಯಕುಮಾರ್ ಅವರ ಅಜೇಯ 68 ರನ್ ತಂಡದ ಗೆಲುವಿಗೆ ಸಹಕಾರವಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ 176 ರನ್ ಗಳಿಸಿತ್ತು. 177 ರನ್ ಗುರಿ ಬೆನ್ನಟ್ಟಿದ ಮುಂಬೈ ತಂಡವು 26 ಎಸೆತಗಳು ಇರುವಂತೆ ಒಂದು ವಿಕೆಟ್‌ಗೆ 177 ರನ್ ಹೊಡೆದು, ಹ್ಯಾಟ್ರಿಕ್ ಗೆಲುವನ್ನು ದಾಖಲಿಸಿತು.
17ರ ಪೋರನ್ ಚೆಂದದ ಆಟ
ಸಿಎಸ್‌ಕೆ ಪರ ಆಟವಾಡಿದ 17 ವರ್ಷದ ಆಯುಷ್ ಮ್ಹಾತ್ರೆ ಚೊಚ್ಚಲ ಪಂದ್ಯದಲ್ಲೇ ಗಮನ ಸೆಳೆದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಮ್ಹಾತ್ರೆ 2 ಸಿಕ್ಸ್ ಮತ್ತು 4 ಬೌಂಡರಿ ಸಿಡಿಸಿ ಆಕ್ರಮಣಕಾರಿ ಆಟದಿಂದ 15 ಬಾಲ್‌ಗೆ 32 ರನ್ ಸಿಡಿಸಿದರು.
ಉಳಿದಂತೆ ರವೀಂದ್ರ ಜಡೇಜ ಔಟಾಗದೇ 53, ಶಿವಂ ದುಬೆ 50; ಜಸ್‌ಪ್ರೀತ್ ಬೂಮ್ರಾ 25ಕ್ಕೆ 2, ಮಿಚೆಲ್ ಸ್ಯಾಂಟನರ್ 14ಕ್ಕೆ1 ರನ್ ಗಳಿಸಿದರು.
ರೋಹಿತ್- ಸೂರ್ಯ ಅರ್ಧಶತಕ
ಇಂಪ್ಯಾಕ್ಟ್ ಪ್ಲೇಯರ್ ರೋಹಿತ್ ಶರ್ಮಾ 33 ಬಾಲ್‌ಗಳಿಗೆ ಅಕೇಯ 76 ರನ್ ಸಿಡಿಸಿ 2025ರ ಐಪಿಎಲ್‌ನಲ್ಲಿ ಮೊದಲ ಅರ್ಧಶತಕ ಸಿಡಿಸಿ ಲಯಕ್ಕೆ ಮರಳಿದರು.
ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರ ನೆರವು ತಂಡಕ್ಕೆ ಬಲ ನೀಡಿತು. 30 ಬಾಲ್‌ಗಳಿಗೆ 5 ಸಿಕ್ಸ್, 6 ಬೌಂಡರಿಗಳನ್ನು ಸಿಡಿಸಿ 68 ರನ್ ತಂದುಕೊಟ್ಟರು. 26ನೇ ಬಾಲ್‌ಗೆ 50 ರನ್‌ಗಳಿಸಿ ರೋಹಿತ್ ಶರ್ಮಾರಂತೆ ಈ ಬಾರಿಯ ಐಪಿಎಲ್‌ನಲ್ಲಿ ಮೊದಲ ಅರ್ಧಶತಕ ಸಿಡಿಸಿದರು.
ಪಂದ್ಯ ಶ್ರೇಷ್ಠ ಪ್ರಶಸ್ತಿ: ಕೊಹ್ಲಿ ಹಿಂದಿಕ್ಕಿದ ರೋಹಿತ್
ಭಾನುವಾರ ನಡೆದ ಮುಂಬೈ–ಸಿಎಸ್‌ಕೆ ಪಂದ್ಯದಲ್ಲಿ ರೋಹಿತ್ ಶರ್ಮಾ ಪಂದ್ಯ ಶ್ರೇಷ್ಠ ಪಡೆದುಕೊಂಡರು. ಇವರು ಈವರೆಗೆ 20 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಈ ಮೂಲಕ ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದವರ ಸಾಲಿನಲ್ಲಿ ರೋಹಿತ್ ಮೂರನೇ ಸ್ಥಾನ ಪಡೆದು ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.
ಮೊದಲನೇ ಸ್ಥಾನದಲ್ಲಿ ಎಬಿ ಡಿ ವಿಲ್ಲಿಯರ್ಸ್ (25), ಎರಡನೇ ಸ್ಥಾನದಲ್ಲಿ ಕ್ರಿಸ್ ಗೇಲ್ (22) ಹಾಗೂ ನಾಲ್ಕನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ (19), ಐದನೇ ಸ್ಥಾನದಲ್ಲಿ ಡೇವಿಡ್ ವಾರ್ನರ್ ಹಾಗೂ ಎಂ.ಎಸ್. ಧೋನಿ (18) ಇದ್ದಾರೆ.
ಅತಿ ಹೆಚ್ಚು ಗೆಲುವು ಸಾಧಿಸಿದ ತಂಡ
ಚೆನ್ನೈ ಮತ್ತು ಮುಂಬೈ ಈವರೆಗೆ 39 ಸಲ ಮುಖಾಮುಖಿಯಾಗಿದ್ದು, ಭಾನುವಾರದ ಗೆಲುವು ಸೇರಿ ಮುಂಬೈ ಈವರೆಗೆ 21 ಸಲ ಜಯ ಸಾಧಿಸಿದೆ.
ಸಿಎಸ್‌ಕೆ ಮತ್ತು ಆರ್‌ಸಿಬಿ 34 ಪಂದ್ಯಗಳಲ್ಲಿ ಮುಖಾಮುಖಿಯಾಗಿ 21 ಸಲ ಸಿಎಸ್‌ಕೆ ಜಯ ಸಾಧಿಸಿದೆ.
ಮುಂಬೈ ಮತ್ತು ಕೋಲ್ಕತ್ತ ತಂಡ 35 ಸಲ ಎದುರುಬದುರಾಗಿದ್ದು ಮುಂಬೈ 24 ಸಲ ಜಯ ಸಾಧಿಸಿದೆ
ಕೋಲ್ಕತ್ತ ಮತ್ತು ಪಂಜಾಬ್ ಎದುರಾದ 34 ಪಂದ್ಯಗಳಲ್ಲಿ ಕೋಲ್ಕತ್ತ 21 ಸಲ ಗೆದ್ದಿದೆ.
2ನೇ ಸ್ಥಾನಕ್ಕೆ ರೋಹಿತ್
ರೋಹಿತ್ ಶರ್ಮಾ 6,786 ರನ್ ಕಲೆ ಹಾಕಿ ಶಿಖರ್ ಧವನ್ (6769) ಅವರನ್ನು ಹಿಂದಿಕ್ಕಿ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡರು. ಮೊದಲನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ (8,326) ಇದ್ದಾರೆ.
ಸಿಎಸ್‌ಕೆಗೆ ಅತಿ ಹೆಚ್ಚು ವಿಕೆಟ್‌ಗಳ ಸೋಲು
ಈ ಸೋಲು, ಐಪಿಎಲ್‌ನಲ್ಲಿ ಸಿಎಸ್‌ಕೆಗೆ ವಿಕೆಟ್ ಅಂತರದಲ್ಲಿ ಎದುರಾದ ಮೂರನೇ ಅತಿದೊಡ್ಡ ಮುಖಭಂಗವಾಗಿದೆ.
2020ರಲ್ಲಿ 10 ವಿಕೆಟ್‌ಗಳ ಸೋಲು ಕಂಡಿದ್ದ ಚೆನ್ನೈ, 2008ರಲ್ಲಿ 9 ವಿಕೆಟ್‌ಗಳಿಂದ ಮುಗ್ಗರಿಸಿತ್ತು. ಈ ಮೂರೂ ಸೋಲು ಮುಂಬೈ ವಿರುದ್ಧವೇ ಆಗಿರುವುದು ವಿಶೇಷ.
8 ಪಂದ್ಯಗಳಲ್ಲಿ ಎರಡನೇ ಜಯ
ಸಿಎಸ್‌ಕೆ ಎದುರು ಸತತ ನಾಲ್ಕು ಸೋಲು ಕಂಡಿದ್ದ ಮುಂಬೈ, ಜಯದ ಹಾದಿಗೆ ಮರಳಿತು. ಇದು, ಚೆನ್ನೈ ವಿರುದ್ಧದ ಕಳೆದ ಎಂಟು ಪಂದ್ಯಗಳಲ್ಲಿ ಬಂದ ಎರಡನೇ ಗೆಲುವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.