ADVERTISEMENT

IPL 2025: ಗುಜರಾತ್ ವಿರುದ್ಧ ಮುಗ್ಗರಿಸಿದ ಮುಂಬೈ, ಸತತ 2ನೇ ಸೋಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮಾರ್ಚ್ 2025, 18:06 IST
Last Updated 29 ಮಾರ್ಚ್ 2025, 18:06 IST
   

ಅಹಮದಾಬಾದ್: ಆರಂಭ ಆಟಗಾರ ಸಾಯಿ ಸುದರ್ಶನ್ (63, 41ಎ, 4x2, 6x2) ಅವರ ಅರ್ಧಶತಕದ ಬಳಿಕ ಕನ್ನಡಿಗ ಪ್ರಸಿದ್ಧ ಕೃಷ್ಣ (18ಕ್ಕೆ 2) ಅವರ ಪರಿಣಾಮಕಾರಿ ದಾಳಿಯ ನೆರವಿನಿಂದ ಗುಜರಾತ್‌ ಟೈಟನ್ಸ್‌ ತಂಡವು ಐಪಿಎಲ್‌ನಲ್ಲಿ ಮೊದಲ ಜಯ ದಾಖಲಿಸಿತು.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟೈಟನ್ಸ್‌ 36 ರನ್‌ಗಳಿಂದ ಮುಂಬೈ ಇಂಡಿಯನ್ಸ್‌ ತಂಡವನ್ನು ಮಣಿಸಿತು. ಐದು ಬಾರಿಯ ಚಾಂಪಿಯನ್‌ ಮುಂಬೈ ತಂಡಕ್ಕೆ ಇದು ಸತತ ಎರಡನೇ ಸೋಲು. ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ 11 ರನ್‌ಗಳಿಂದ ಸೋತಿದ್ದ ಶುಭಮನ್‌ ಗಿಲ್‌ ಬಳಗ ಈ ಗೆಲುವಿನೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆಯಿತು.

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಗುಜರಾತ್‌ 8 ವಿಕೆಟ್‌ಗೆ 196 ರನ್‌ಗಳ ಸವಾಲಿನ ಮೊತ್ತ ಗಳಿಸಿತ್ತು. ಗುರಿಯನ್ನು ಬೆನ್ನತ್ತಿದ ಮುಂಬೈ ತಂಡವು 6 ವಿಕೆಟ್‌ಗೆ 160 ರನ್‌ ಗಳಿಸಿ ನಿರೀಕ್ಷಿತ ಮಟ್ಟದಲ್ಲಿ ಹೋರಾಟ ನಡೆಸಲಾಗದೆ ಸವಾಲನ್ನು ಮುಗಿಸಿತು.

ADVERTISEMENT

ಮುಂಬೈ ತಂಡವು 35 ರನ್‌ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರರಾದ ರೋಹಿತ್‌ ಶರ್ಮಾ (8) ಮತ್ತು ರಯಾನ್ ರಿಕಲ್ಟನ್ (6) ಅವರಿಗೆ ಮೊಹಮ್ಮದ್‌ ಸಿರಾಜ್‌ ಪೆವಿಲಿಯನ್‌ ದಾರಿ ತೋರಿಸಿದರು. ತಿಲಕ್‌ ವರ್ಮಾ (39; 36ಎ, 4x3, 6x1) ಮತ್ತು ಸೂರ್ಯಕುಮಾರ್‌ ಯಾದವ್‌ (48; 28ಎ, 4x1, 6x4) ಅವರು ಮೂರನೇ ವಿಕೆಟ್‌ ಜೊತೆಯಾಟದಲ್ಲಿ 62 ರನ್‌ ಸೇರಿಸಿ ಗೆಲುವಿನ ಆಸೆ ಚಿಗುರಿಸಿದರು.  ಆದರೆ, ಇನಿಂಗ್ಸ್‌ನ ಮಧ್ಯಮ ಹಂತದಲ್ಲಿ ದಾಳಿಗಿಳಿದ ಪ್ರಸಿದ್ಧ ಕೃಷ್ಣ ಅವರು ಈ ಅಪಾಯಕಾರಿ ಬ್ಯಾಟರ್‌ಗಳ ವಿಕೆಟ್‌ ಪಡೆದು ಗುಜರಾತ್‌ ತಂಡಕ್ಕೆ ಮೇಲುಗೈ ಒದಗಿಸಿದರು. 

ನಂತರ ಬಂದ ಇಂಪ್ಯಾಕ್ಟ್‌ ಆಟಗಾರ ರಾಬಿನ್ ಮಿಂಜ್ (3), ನಾಯಕ ಹಾರ್ದಿಕ್‌ ಪಾಂಡ್ಯ (11) ನಿರಾಸೆ ಮೂಡಿಸಿದರು. ಕೊನೆಯಲ್ಲಿ ನಮನ್‌ ಧೀರ್‌ (ಔಟಾಗದೇ 18) ಮತ್ತು ಮಿಚೆಲ್‌ ಸ್ಯಾಂಟನರ್‌ (ಔಟಾಗದೇ 18) ಹೋರಾಟ ತೋರಿದರೂ ಗೆಲುವಿನ ಗುರಿ ತುಂಬಾ ದೂರವಿತ್ತು.

ಸಾಯಿ ಅರ್ಧಶತಕ:

ಇದಕ್ಕೂ ಮೊದಲು ಟೈಟನ್ಸ್ ತಂಡಕ್ಕೆ ಆರಂಭಿಕ ಆಟಗಾರರಾದ ಸಾಯಿ ಸುದರ್ಶನ್ ಮತ್ತು ಶುಭಮನ್‌ ಗಿಲ್ (38;27ಎ, 4x4, 6x1) ಅವರು 8.2 ಓವರುಗಳಲ್ಲಿ 78 ರನ್ ಸೇರಿಸಿ ಉತ್ತಮ ಬುನಾದಿ ಹಾಕಿಕೊಟ್ಟರು.  ಸುದರ್ಶನ್‌, ಗಿಲ್ ಮತ್ತು ಜೋಸ್‌ ಬಟ್ಲರ್ (39;24ಎ, 4x5, 6x1) ಅವರ ಬಿರುಸಿನ ಆಟದಿಂದ ಒಂದು ಹಂತದಲ್ಲಿ 14 ಓವರುಗಳಲ್ಲಿ 2 ವಿಕೆಟ್‌ಗೆ 129 ರನ್ ಗಳಿಸಿದ್ದ ಟೈಟನ್ಸ್‌ ನಾಗಾಲೋಟಕ್ಕೆ ಮುಂಬೈ ಬೌಲರ್‌ಗಳು ನಂತರದಲ್ಲಿ ಕಡಿವಾಣ ಹಾಕಿದರು.

ಕೊನೆಯ 13 ಎಸೆತಗಳ ಅಂತರದಲ್ಲಿ ಸಾಯಿ ಸುದರ್ಶನ್ ಅವರನ್ನೂ ಒಳಗೊಂಡಂತೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಅಂತರದಲ್ಲಿ ಬಂದಿದ್ದು 17 ರನ್‌ಗಳು ಮಾತ್ರ. ಶಾರೂಕ್‌ ಖಾನ್‌, ರಾಹುಲ್ ತೆವಾಟಿಯಾ, ರಶೀದ್‌ ಖಾನ್ ಉಪಯುಕ್ತ ಆಟವಾಡಲಿಲ್ಲ. ಕೊನೆಯಲ್ಲಿ ರುದರ್‌ಫೋರ್ಡ್‌ (18, 11ಎ, 6x2) ಅವರ ಆಟದಿಂದ ತಂಡ 200ರ ಸಮೀಪ ತಲುಪಿತು. ಪಾಂಡ್ಯ ಎರಡು ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರು:

ಗುಜರಾತ್‌ ಟೈಟನ್ಸ್‌ 20 ಓವರುಗಳಲ್ಲಿ 8 ವಿಕೆಟ್‌ಗೆ 196 (ಸಾಯಿ ಸುದರ್ಶನ್ 63, ಶುಭಮನ್ ಗಿಲ್ 38, ಜೋಸ್ ಬಟ್ಲರ್‌ 39, ಹಾರ್ದಿಕ್ ಪಾಂಡ್ಯ 29ಕ್ಕೆ2).

ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 6ಕ್ಕೆ 160 (ತಿಲಕ್ ವರ್ಮಾ 39, ಸೂರ್ಯಕುಮಾರ್ ಯಾದವ್‌ 48; ಮೊಹಮ್ಮದ್‌ ಸಿರಾಜ್‌ 34ಕ್ಕೆ 2, ಪ್ರಸಿದ್ಧ ಕೃಷ್ಣ 18ಕ್ಕೆ 2).

ಫಲಿತಾಂಶ: ಗುಜರಾತ್‌ ಟೈಟನ್ಸ್‌ಗೆ 36 ರನ್‌ಗಳ ಜಯ. ಪಂದ್ಯದ ಆಟಗಾರ: ಪ್ರಸಿದ್ಧ ಕೃಷ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.