ಎಂ.ಎಸ್.ಧೋನಿ ಹಾಗೂ ಅವರ ತಂದೆ ಪಾನ್ ಸಿಂಗ್ ಹಾಗೂ ತಾಯಿ ದೇವಕಿ ದೇವಿ
ಪಿಟಿಐ ಚಿತ್ರಗಳು
ಚೆನ್ಣೈ: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇಂದು (ಶನಿವಾರ) ಚೆನ್ನೈನ ಎಂ.ಎ. ಚಿದಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ಮುಖಾಮುಖಿಯಾದವು. ದಿಗ್ಗಜ ಕ್ರಿಕೆಟಿಗ ಎಂ.ಎಸ್. ಧೋನಿ ಅವರ ಪೋಷಕರು ಈ ಪಂದ್ಯವನ್ನು ಕ್ರೀಡಾಂಗಣಕ್ಕೆ ಬಂದು ವೀಕ್ಷಿಸಿದ್ದಾರೆ.
ವಿಶೇಷವೆಂದರೆ, 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ, ಧೋನಿ ಅವರ ತಂದೆ–ತಾಯಿ ಕ್ರೀಡಾಂಗಣಕ್ಕೆ ಬಂದಿರುವುದು ಇದೇ ಮೊದಲು.
43 ವರ್ಷದ ಧೋನಿ ಅವರ ತಂದೆ ಪಾನ್ ಸಿಂಗ್ ಹಾಗೂ ತಾಯಿ ದೇವಕಿ ದೇವಿ ಅವರೊಂದಿಗೆ, ಪತ್ನಿ ಸಾಕ್ಷಿ, ಪುತ್ರಿ ಜೀವಾ ಅವರೂ ಕ್ರೀಡಾಂಗಣದಲ್ಲಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ತಂಡ ಗೆಲ್ಲಲು ಅಗತ್ಯ ರನ್‌ರೇಟ್ ಹೆಚ್ಚಾಗುತ್ತಿದ್ದರೂ ಅವರು ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು.
ಅದಾದ ಬಳಿಕ ಪ್ರತಿಕ್ರಿಯೆ ನೀಡಿದ್ದ ಸಿಎಸ್‌ಕೆ ಕೋಚ್ ಫ್ಲೆಮಿಂಗ್, ಧೋನಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಹೆಚ್ಚು ಒತ್ತು ಬ್ಯಾಟಿಂಗ್ ನಡೆಸಲಾರರು ಎಂದು ಹೇಳಿದ್ದರು.
ಹೀಗಾಗಿ, ಧೋನಿ ನಿವೃತ್ತಿ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಅವರ ಪಾಲಿಗೆ ಇದೇ ಕೊನೇ ಆವೃತ್ತಿಯಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಇದೀಗ, ಅವರ ಪೋಷಕರು ಇದೇ ಮೊದಲ ಬಾರಿಗೆ ಐಪಿಎಲ್ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿರುವುದರಿಂದ ಊಹಾಪೋಹಗಳಿಗೆ ರೆಕ್ಕೆ–ಪುಕ್ಕ ಬಂದಂತಾಗಿದೆ.
ಡೆಲ್ಲಿ 'ಅಜೇಯ': ಚೆನ್ನೈಗೆ ಹ್ಯಾಟ್ರಿಕ್ ಸೋಲು
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 183 ರನ್ ಕಲೆಹಾಕಿತು.
ಈ ಗುರಿ ಬೆನ್ನತ್ತಿದ ಚೆನ್ನೈ, ನಿಗದಿತ ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 158 ರನ್ ಗಳಿಸಲಷ್ಟೇ ಶಕ್ತವಾಯಿತು. 7ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು 26 ಎಸೆತಗಳನ್ನು ಎದುರಿಸಿದ ಧೋನಿ, 30 ರನ್ ಗಳಿಸಿ ಔಟಾಗದೆ ಉಳಿದರು.
ಟೂರ್ನಿಯಲ್ಲಿ ನಾಲ್ಕು ಪಂದ್ಯಗಳನ್ನು ಆಡಿರುವ ಚೆನ್ನೈ, ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆದ್ದಿತ್ತು. ನಂತರ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಎರಡು ಮತ್ತು ಮೂರನೇ ಪಂದ್ಯಗಳಲ್ಲಿ ಕ್ರಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ ರಾಯಲ್ಸ್ ಎದುರು ಮುಗ್ಗರಿಸಿತ್ತು.
ಇತ್ತ 25 ರನ್ ಅಂತರದಿಂದ ಗೆದ್ದ ಡೆಲ್ಲಿ ತಂಡ ಅಜೇಯ ಓಟ ಮುಂದುವರಿಸಿದೆ. ಆಡಿರುವ ಮೂರೂ ಪಂದ್ಯಗಳನ್ನು ಜಯಿಸಿ, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.