ಮಹೇಂದ್ರ ಸಿಂಗ್ ಧೋನಿ
(ಚಿತ್ರ ಕೃಪೆ: X/@ChennaiIPL)
ಚೆನ್ನೈ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ಮಾರ್ಚ್ 22ರಂದು ಚಾಲನೆ ದೊರಕಲಿದೆ.
ಇದರೊಂದಿಗೆ ಟೀಮ್ ಇಂಡಿಯಾದ ಮಾಜಿ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ, ಆಟವನ್ನು ನೋಡಲು ಅಭಿಮಾನಿಗಳು ಕಾತರದಲ್ಲಿದ್ದಾರೆ.
ಈ ಸಂಬಂಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಧೋನಿ ಅಭ್ಯಾಸ ಮಾಡುವ ವಿಡಿಯೊವನ್ನು ಬಿಡುಗಡೆ ಮಾಡಿದೆ.
ಅಭ್ಯಾಸದ ವೇಳೆ ಶ್ರೀಲಂಕಾದ ವೇಗದ ಬೌಲರ್ ಮತೀಶ ಪಥಿರಾಣ ಎಸೆತದಲ್ಲಿ ಧೋನಿ ತಮ್ಮ ವಿಶಿಷ್ಟ ಹೆಲಿಕಾಪ್ಟರ್ ಹೊಡೆತದ ಮೂಲಕ ಗಮನ ಸೆಳೆದಿದ್ದಾರೆ.
ಪ್ರಸ್ತುತ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಚೆನ್ನೈ ಸೂಪರ್ ಕಿಂಗ್ಸ್, ಮಾರ್ಚ್ 23ರಂದು ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸವಾಲನ್ನು ಎದುರಿಸಲಿದೆ. ಎಂ.ಚಿದಂಬರಂ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಧೋನಿ ಮತ್ತೆ ಕಣಕ್ಕಿಳಿಯಲಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ 43 ವರ್ಷದ ಧೋನಿ, ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಚೆನ್ನೈ ತಂಡದ ನಾಯಕತ್ವವನ್ನು ಋತುರಾಜ್ ಗಾಯಕವಾಡ್ ಅವರಿಗೆ ಹಸ್ತಾಂತರಿಸಿರುವ ಧೋನಿ, ವಿಕೆಟ್ ಕೀಪರ್ ಬ್ಯಾಟರ್ ಆಗಿ ತಂಡದಲ್ಲಿ ಮುಂದುವರಿದಿದ್ದಾರೆ.
ಈ ಬಾರಿಯ ಮೆಗಾ ಹರಾಜಿನಲ್ಲಿ 'ಅನ್‌ಕ್ಯಾಪ್ಡ್' ಪ್ಲೇಯರ್ ಆಗಿ (₹4 ಕೋಟಿ) ಧೋನಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಬಳಿಯೇ ಉಳಿಸಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.