ಶಿವಂ ದುಬೆ, ರವೀಂದ್ರ ಜಡೇಜ
(ಚಿತ್ರ ಕೃಪೆ: X@IPL)
ಮುಂಬೈ: ರೋಹಿತ್ ಶರ್ಮಾ ಅಜೇಯ 76 ರನ್ ಗಳಿಸಿ ಹಾಲಿ ಐಪಿಎಲ್‌ನಲ್ಲಿ ಕೊನೆಗೂ ರನ್ ಬರದಿಂದ ಹೊರಬಂದರು. ಜೊತೆಗೆ ಸೂರ್ಯಕುಮಾರ್ ಯಾದವ್ ಕೂಡ ಮಿಂಚಿದರು. ಮುಂಬೈ ಇಂಡಿಯನ್ಸ್ ತಂಡ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಒಂಬತ್ತು ವಿಕೆಟ್‌ಗಳ ಜಯಕ್ಕೆ ಇವರಿಬ್ಬರ ಶತಕದ ಜೊತೆಯಾಟ ಕಾರಣವಾಯಿತು.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಗೆಲುವಿಗೆ 177 ರನ್ ಗುರಿ ಬೆನ್ನಟ್ಟಿದ ಮುಂಬೈ ತಂಡವು 26 ಎಸೆತಗಳು ಇರುವಂತೆ ಒಂದು ವಿಕೆಟ್‌ಗೆ 177 ರನ್ ಹೊಡೆದು, ಹ್ಯಾಟ್ರಿಕ್ ಗೆಲುವನ್ನು ದಾಖಲಿಸಿತು. ಶರ್ಮಾ ಮತ್ತು ಸೂರ್ಯ ಮುರಿಯದ ಎರಡನೇ ವಿಕೆಟ್‌ಗೆ 114 (54ಎ) ರನ್ ಸೇರಿಸಿ ಗೆಲುವನ್ನು ತ್ವರಿತಗೊಳಿಸಿದರು.
ಈ ಮೊದಲಿನ ಆರು ಇನ್ನಿಂಗ್ಸ್‌ಗಳಲ್ಲಿ ಕೇವಲ 82 ರನ್ ಗಳಿಸಿದ್ದ ಶರ್ಮಾ ತವರಿನಲ್ಲಿ ಅಭಿಮಾನಿಗಳ ಎದುರು ಅಬ್ಬರಿಸಿದರು. 45 ಎಸೆತಗಳ ಅವರ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ಅರ್ಧ ಡಜನ್ ಸಿಕ್ಸರ್ ಇದ್ದವು. ಸೂರ್ಯಕುಮಾರ್ 30 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿದರು. ಅವರು ಆರು ಬೌಂಡರಿ ಮತ್ತು ಐದು ಸಿಕ್ಸರ್ ಸಿಡಿಸಿದರು. ಶರ್ಮಾ ಮತ್ತು ರೆಯಾನ್ ರಿಕಲ್ಟನ್ (24;19ಎ) ಮೊದಲ ವಿಕೆಟ್ ಜೊತೆಯಾಟದಲ್ಲಿ 63 ರನ್ ಸೇರಿಸಿದ್ದರು.
ಇದಕ್ಕೂ ಮೊದಲು ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ದುಕೊಂಡಿತು. ಶಿವಂ ದುಬೆ (50, 32ಎ, 4x2, 6x4) ಮತ್ತು ರವೀಂದ್ರ ಜಡೇಜ (ಔಟಾಗದೇ 53, 35ಎ, 4x4, 6x2) ಅವರ ಉಪಯುಕ್ತ ಅರ್ಧಶತಕಗಳ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ವಿಕೆಟ್‌ಗೆ 176 ರನ್ ಗಳಿಸಿತು.
ಹದಿಹರೆಯದ ಆಟಗಾರ ಆಯುಷ್ ಮ್ಹಾತ್ರೆ (32, 15ಎ) ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ನಿರಾಸೆ ಮೂಡಿಸಲಿಲ್ಲ. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ 17 ವರ್ಷ ವಯಸ್ಸಿನ ಈ ಆಟಗಾರ ಚೊಚ್ಚಲ ಪ್ರಯತ್ನದಲ್ಲೇ ಆಕ್ರಮಣಕಾರಿ ಆಟದಿಂದ ಗಮನ ಸೆಳೆದರು. ಫ್ಲಿಕ್, ಪುಲ್ ಹೊಡೆತಗಳನ್ನು ಪ್ರದರ್ಶಿಸಿದ ಅವರ ಆಟದಲ್ಲಿ ಎರಡು ಸಿಕ್ಸರ್, ನಾಲ್ಕು ಬೌಂಡರಿಗಳಿದ್ದವು. ಸತತವಾಗಿ ವಿಫಲರಾದ ರಾಹುಲ್ ತ್ರಿಪಾಠಿ ಅವರನ್ನು ಸಿಎಸ್‌ಕೆ ಕೈಬಿಟ್ಟಿತ್ತು.
ನಾಲ್ಕನೇ ಕ್ರಮಾಂಕಕ್ಕೆ ಬಡ್ತಿ ಪಡೆದ ಜಡೇಜ ಅವರಿಗೆ ಇದು ಈ ಬಾರಿಯ ಐಪಿಎಲ್‌ನಲ್ಲಿ ಮೊದಲ ಅರ್ಧಶತಕ. ದುಬೆ ಅವರೂ ಈ ಬಾರಿ ಮೊದಲ ಅರ್ಧಶತಕ ದಾಖಲಿಸಿದರು. ಇವರಿಬ್ಬರು ಕ್ರೀಸಿಗೆ ಬರುವ ಮೊದಲು ಚೆನ್ನೈ ಕುಸಿಯುವ ಆತಂಕದಲ್ಲಿತ್ತು. ತಂಡದ ಮೊತ್ತ 3 ವಿಕೆಟ್‌ಗೆ 63 ರನ್‌ಗಳಾಗಿದ್ದಾಗ ಜೊತೆಗೂಡಿದ ಇವರಿಬ್ಬರು 79 ರನ್ ಜೊತೆಯಾಟವಾಡಿದರು.
ಸಂಕ್ಷಿಪ್ತ ಸ್ಕೋರು: ಚೆನ್ನೈ ಸೂಪರ್ ಕಿಂಗ್ಸ್: 20 ಓವರ್‌ಗಳಲ್ಲಿ 5ಕ್ಕೆ 176 (ಆಯುಷ್ ಮ್ಹಾತ್ರೆ 32, ರವೀಂದ್ರ ಜಡೇಜ ಔಟಾಗದೇ 53, ಶಿವಂ ದುಬೆ 50; ಜಸ್‌ಪ್ರೀತ್ ಬೂಮ್ರಾ 25ಕ್ಕೆ 2, ಮಿಚೆಲ್ ಸ್ಯಾಂಟನರ್ 14ಕ್ಕೆ1).
ಮುಂಬೈ ಇಂಡಿಯನ್ಸ್: 15.4 ಓವರ್‌ಗಳಲ್ಲಿ 1ಕ್ಕೆ 177 (ರೆಯಾನ್ ರಿಕಲ್ಟನ್ 24, ರೋಹಿತ್ ಶರ್ಮಾ ಔಟಾಗದೇ 76, ಸೂರ್ಯಕುಮಾರ್ ಯಾದವ್ ಔಟಾಗದೇ 68; ರವೀಂದ್ರ ಜಡೇಜ 28ಕ್ಕೆ 1). ಪಂದ್ಯದ ಆಟಗಾರ: ರೋಹಿತ್ ಶರ್ಮಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.