ADVERTISEMENT

IPL 2025 | PBKS vs CSK: ಚಾಹಲ್ ಹ್ಯಾಟ್ರಿಕ್; ಸ್ಯಾಮ್‌ ಬ್ಯಾಟಿಂಗ್ ಅಬ್ಬರ

ಪಿಟಿಐ
Published 30 ಏಪ್ರಿಲ್ 2025, 13:57 IST
Last Updated 30 ಏಪ್ರಿಲ್ 2025, 13:57 IST
<div class="paragraphs"><p>ಚೆನ್ನೈನ ಚಪಾಕ್ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿರುವ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಹ್ಯಾಟ್ರಿಕ್ ಸಾಧನೆ ಮಾಡಿದ ಯಜುವೇಂದ್ರ ಚಾಹಲ್ ಸಂಭ್ರಮ</p></div>

ಚೆನ್ನೈನ ಚಪಾಕ್ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿರುವ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಹ್ಯಾಟ್ರಿಕ್ ಸಾಧನೆ ಮಾಡಿದ ಯಜುವೇಂದ್ರ ಚಾಹಲ್ ಸಂಭ್ರಮ

   

ಪಿಟಿಐ ಚಿತ್ರ

ಚೆನ್ನೈ: ಆಲ್‌ರೌಂಡರ್‌ ಸ್ಯಾಮ್‌ ಕರನ್‌ ಒತ್ತಡದ ಸ್ಥಿತಿಯಲ್ಲಿ ಬಿರುಸಿನ 88 ರನ್ (47 ಎಸೆತ) ಬಾರಿಸಿದರು. ಆದರೆ ಕೊನೆಗಳಿಗೆಯಲ್ಲಿ ಪಂಜಾಬ್‌ ಕಿಂಗ್ಸ್‌ನ ಸ್ಪಿನ್ನರ್ ಯಜುವೇಂದ್ರ ಚಾಹಲ್‌ ಹ್ಯಾಟ್ರಿಕ್‌ ಸೇರಿದಂತೆ ನಾಲ್ಕು ವಿಕೆಟ್‌ಗಳನ್ನು ಪಡೆದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ದೊಡ್ಡ ಮೊತ್ತ ಗಳಿಸದಂತೆ ತಡೆದರು.

ADVERTISEMENT

ಬುಧವಾರ ಚೆಪಾಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ತಂಡ ನಾಲ್ಕು ಎಸೆತಗಳು ಉಳಿದಿರುವಂತೆ 190 ರನ್ನಿಗೆ ಆಲೌಟ್‌ ಆಯಿತು.

‍ಪವರ್‌ಪ್ಲೇ ಆಟದಲ್ಲಿ 48 ರನ್ನಿಗೆ 3 ವಿಕೆಟ್‌ ಕಳೆದುಕೊಂಡ ಚೆನ್ನೈ ತಂಡಕ್ಕೆ ಕರನ್ ಆಧಾರವಾದರು. ಅವರು ಎಚ್ಚರಿಕೆಯ ಜೊತೆಗೆ ಆಕ್ರಮಣದ ಆಟವನ್ನು ಬೆರೆಸಿದರು. ಡೆವಾಲ್ಡ್‌ ಬ್ರೆವಿಸ್‌ (32, 26 ಎಸೆತ) ಜೊತೆ ನಾಲ್ಕನೇ ವಿಕೆಟ್‌ಗೆ 78 ರನ್ ಸೇರಿಸಿ ಕುಸಿತ ತಪ್ಪಿಸಿದರು.

16ನೇ ಓವರ್‌ಗಳವರೆಗೆ ಚೆನ್ನೈ ಓವರೊಂದಕ್ಕೆ 9 ರನ್‌ ಗಳಿಸುತ್ತ ಸಾಗಿತ್ತು. ಈ ವೇಳೆ ಕರನ್ ಅಬ್ಬರಿಸಿದರು. ಮಧ್ಯಮ ವೇಗಿ ಸೂರ್ಯಾಂಶ್‌ ಶೆಡ್ಗೆ ಬೌಲಿಂಗ್‌ನ ಮೊದಲ ಎರಡು ಎಸೆತಗಳಲ್ಲಿ  ಕ್ರಮವಾಗಿ ಲಾಂಗ್‌ ಆಫ್‌ ಮತ್ತು ಸ್ಕ್ವೇರ್‌ಲೆಗ್‌ಗೆ ಸಿಕ್ಸರ್‌ ಎತ್ತಿದರು. ಮೂರನೇ ಸಿಕ್ಸರ್‌ ಯತ್ನವನ್ನು ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಡೈವ್‌ ಮಾಡಿ ತಡೆದರು. ಆದರೆ ಕರನ್ ಮುಂದಿನ ಎರಡು ಎಸೆತಗಳಲ್ಲಿ ಬೌಂಡರಿಗಳನ್ನು ಅಟ್ಟಿದರು. ಆ ಓವರಿನಲ್ಲಿ 26 ರನ್‌ಗಳು ಹರಿದುಬಂದವು.

ಕರನ್ 18ನೇ ಓವರಿನಲ್ಲಿ ಮಾರ್ಕೊ ಯಾನ್ಸೆನ್‌ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಅವರ ಆಟದಲ್ಲಿ 9 ಬೌಂಡರಿ, 4 ಸಿಕ್ಸರ್‌ಗಳಿದ್ದವು.

ವಿಕೆಟ್‌ ಗಳಿಸುವಲ್ಲಿ ವಿಫಲರಾಗಿದ್ದ ಚಾಹಲ್ 19ನೇ ಓವರಿನಲ್ಲಿ ದಾಳಿಗಿಳಿದರು. ಮೊದಲ ಎಸೆತವನ್ನು ಧೋನಿ ಸಿಕ್ಸರ್‌ಗಟ್ಟಿದರು. ಎರಡನೇ ಎಸೆತದಲ್ಲೂ ದೊಡ್ಡ ಹೊಡೆತಕ್ಕೆ ಯತ್ನಿಸಿದಾಗ ಅವರು ಲಾಂಗ್‌ ಆಫ್‌ನಲ್ಲಿ ಹಿಡಿದ ಕ್ಯಾಚಿಗೆ ನಿರ್ಗಮಿಸಬೇಕಾಯಿತು. ಚಾಹಲ್‌ ಅವರ ನಾಲ್ಕನೇ ಎಸೆತದಲ್ಲಿ ದೀಪಕ್‌ ಹೂಡ (2) ಬ್ಯಾಕ್‌ವರ್ಡ್‌ ಪಾಯಿಂಟ್‌ಲ್ಲಿ ಕ್ಯಾಚಿತ್ತರು. ಇಂಪ್ಯಾಕ್ಟ್ ಸಬ್‌ ಅನ್ಶುಲ್ ಕಾಂಬೋಜ್ ನಂತರದ ಎಸೆತ ಅರ್ಥೈಸದೇ ಬೌಲ್ಡ್‌ ಆದರು. ನೂರ್‌ ಅಹ್ಮದ್ ದೊಡ್ಡ ಹೊಡೆತಕ್ಕೆ ಯತ್ನಿಸಿ ಮಾರ್ಕೊ ಯಾನ್ಸೆನ್‌ ಲಾಂಗ್‌ ಆನ್‌ನಲ್ಲಿ ಕ್ಯಾಚ್‌ ಹಿಡಿದಾಗ ಚಾಹಲ್ ಹ್ಯಾಟ್ರಿಕ್‌ ಪೂರೈಸಿ ಸಂಭ್ರಮಿಸಿದರು.

ಇದಕ್ಕೆ ಮೊದಲು ಚೆನ್ನೈ ಆರಂಭ ನಿರಾಶಾದಾಯಕವಾಗಿತ್ತು. ಶೇಖ್ ರಶೀದ್‌ (11) ಮತ್ತು ಆಯುಷ್‌ ಮ್ಹಾತ್ರೆ (7) ಬೇಗನೇ ನಿರ್ಗಮಿಸಿದರು. ರವೀಂದ್ರ ಜಡೇಜ (17, 12ಎ) ಮತ್ತೊಮ್ಮೆ ವಿಫಲರಾದರು.

ಸಂಕ್ಷಿಪ್ತ ಸ್ಕೋರು: ಚೆನ್ನೈ ಸೂಪರ್‌ ಕಿಂಗ್ಸ್: 19.2 ಓವರುಗಳಲ್ಲಿ 190 (ಸ್ಯಾಮ್ ಕರನ್ 88, ಡೆವಾಲ್ಡ್‌ ಬ್ರೆವಿಸ್‌ 32, ರವೀಂದ್ರ ಜಡೇಜ 17; ಅರ್ಷದೀಪ್ ಸಿಂಗ್ 25ಕ್ಕೆ2, ಮಾರ್ಕೊ ಯಾನ್ಸೆನ್‌ 30ಕ್ಕೆ2, ಯಜುವೇಂದ್ರ ಚಾಹಲ್ 32ಕ್ಕೆ4) ವಿರುದ್ಧ ಪಂಜಾಬ್ ಕಿಂಗ್ಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.