ಪಂಜಾಬ್ ಕಿಂಗ್ಸ್ ತಂಡ
ಚಿತ್ರಕೃಪೆ: X/cricbuzz
ಚೆನ್ನೈ: ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗಾಯದ ಮೇಲೆ ಪಂಜಾಬ್ ಕಿಂಗ್ಸ್ ಉಪ್ಪು ಸವರಿತು.
ಚೆಪಾಕ್‌ನಲ್ಲಿ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಯಜುವೇಂದ್ರ ಚಾಹಲ್ ಹ್ಯಾಟ್ರಿಕ್ ಮತ್ತು ಶ್ರೇಯಸ್ ಅಯ್ಯರ್ ಚೆಂದದ ಬ್ಯಾಟಿಂಗ್ ಬಲದಿಂದ ಕಿಂಗ್ಸ್ 4 ವಿಕೆಟ್ ಗಳಿಂದ ಚೆನ್ನೈ ತಂಡವನ್ನು ಸೋಲಿಸಿತು. ಇದರೊಂದಿಗೆ ಚೆನ್ನೈ ತಂಡವು ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ತಂಡ ನಾಲ್ಕು ಎಸೆತಗಳು ಉಳಿದಿರುವಂತೆ 190 ರನ್ನಿಗೆ ಆಲೌಟ್ ಆಯಿತು.ಆಲ್‌ರೌಂಡರ್ ಸ್ಯಾಮ್ ಕರನ್ ಒತ್ತಡದ ಸ್ಥಿತಿಯಲ್ಲಿ ಬಿರುಸಿನ 88 ರನ್ (47 ಎಸೆತ) ಬಾರಿಸಿದರು. ಅದಕ್ಕುತ್ತರವಾಗಿ ಪಂಜಾಬ್ 19.4 ಓವರುಗಳ ಲ್ಲಿ 6ಕ್ಕೆ ,194 ರನ್ ಗಳಿಸಿತ್ತು.
ಕರನ್ ಆಸರೆ: ಪವರ್‌ಪ್ಲೇ ಆಟದಲ್ಲಿ 48 ರನ್ನಿಗೆ 3 ವಿಕೆಟ್ ಕಳೆದುಕೊಂಡ ಚೆನ್ನೈ ತಂಡಕ್ಕೆ ಕರನ್ ಆಧಾರವಾದರು. ಅವರು ಎಚ್ಚರಿಕೆಯ ಜೊತೆಗೆ ಆಕ್ರಮಣದ ಆಟವನ್ನು ಬೆರೆಸಿದರು. ಡೆವಾಲ್ಡ್ ಬ್ರೆವಿಸ್ (32, 26 ಎಸೆತ) ಜೊತೆ ನಾಲ್ಕನೇ ವಿಕೆಟ್‌ಗೆ 78 ರನ್ ಸೇರಿಸಿ ಕುಸಿತ ತಪ್ಪಿಸಿದರು.
16ನೇ ಓವರ್‌ಗಳವರೆಗೆ ಚೆನ್ನೈ ಓವರೊಂದಕ್ಕೆ 9 ರನ್ ಗಳಿಸುತ್ತ ಸಾಗಿತ್ತು. ಈ ವೇಳೆ ಕರನ್ ಅಬ್ಬರಿಸಿದರು. ಮಧ್ಯಮ ವೇಗಿ ಸೂರ್ಯಾಂಶ್ ಶೆಡ್ಗೆ ಬೌಲಿಂಗ್‌ನ ಮೊದಲ ಎರಡು ಎಸೆತಗಳಲ್ಲಿ ಕ್ರಮವಾಗಿ ಲಾಂಗ್ ಆಫ್ ಮತ್ತು ಸ್ಕ್ವೇರ್‌ಲೆಗ್‌ಗೆ ಸಿಕ್ಸರ್ ಎತ್ತಿದರು. ಮೂರನೇ ಸಿಕ್ಸರ್ ಯತ್ನವನ್ನು ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಡೈವ್ ಮಾಡಿ ತಡೆದರು. ಆದರೆ ಕರನ್ ಮುಂದಿನ ಎರಡು ಎಸೆತಗಳಲ್ಲಿ ಬೌಂಡರಿಗಳನ್ನು ಅಟ್ಟಿದರು. ಆ ಓವರಿನಲ್ಲಿ 26 ರನ್‌ಗಳು ಹರಿದುಬಂದವು.
ಕರನ್ 18ನೇ ಓವರಿನಲ್ಲಿ ಮಾರ್ಕೊ ಯಾನ್ಸೆನ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಅವರ ಆಟದಲ್ಲಿ 9 ಬೌಂಡರಿ, 4 ಸಿಕ್ಸರ್‌ಗಳಿದ್ದವು.
ಚಾಹಲ್ ಹ್ಯಾಟ್ರಿಕ್:
ವಿಕೆಟ್ ಗಳಿಸುವಲ್ಲಿ ವಿಫಲರಾಗಿದ್ದ ಚಾಹಲ್ 19ನೇ ಓವರಿನಲ್ಲಿ ದಾಳಿಗಿಳಿದರು. ಮೊದಲ ಎಸೆತವನ್ನು ಧೋನಿ ಸಿಕ್ಸರ್‌ಗಟ್ಟಿದರು. ಎರಡನೇ ಎಸೆತದಲ್ಲೂ ದೊಡ್ಡ ಹೊಡೆತಕ್ಕೆ ಯತ್ನಿಸಿದಾಗ ಅವರು ಲಾಂಗ್ ಆಫ್‌ನಲ್ಲಿ ಹಿಡಿದ ಕ್ಯಾಚಿಗೆ ನಿರ್ಗಮಿಸಬೇಕಾಯಿತು. ಚಾಹಲ್ ಅವರ ನಾಲ್ಕನೇ ಎಸೆತದಲ್ಲಿ ದೀಪಕ್ ಹೂಡ (2) ಬ್ಯಾಕ್‌ವರ್ಡ್ ಪಾಯಿಂಟ್‌ಲ್ಲಿ ಕ್ಯಾಚಿತ್ತರು. ಇಂಪ್ಯಾಕ್ಟ್ ಸಬ್ ಅನ್ಶುಲ್ ಕಾಂಬೋಜ್ ನಂತರದ ಎಸೆತ ಅರ್ಥೈಸದೇ ಬೌಲ್ಡ್ ಆದರು. ನೂರ್ ಅಹ್ಮದ್ ದೊಡ್ಡ ಹೊಡೆತಕ್ಕೆ ಯತ್ನಿಸಿ ಮಾರ್ಕೊ ಯಾನ್ಸೆನ್ ಲಾಂಗ್ ಆನ್‌ನಲ್ಲಿ ಕ್ಯಾಚ್ ಹಿಡಿದಾಗ ಚಾಹಲ್ ಹ್ಯಾಟ್ರಿಕ್ ಪೂರೈಸಿ ಸಂಭ್ರಮಿಸಿದರು.
ಇದಕ್ಕೆ ಮೊದಲು ಚೆನ್ನೈ ಆರಂಭ ನಿರಾಶಾದಾಯಕವಾಗಿತ್ತು. ಶೇಖ್ ರಶೀದ್ (11) ಮತ್ತು ಆಯುಷ್ ಮ್ಹಾತ್ರೆ (7) ಬೇಗನೇ ನಿರ್ಗಮಿಸಿದರು. ರವೀಂದ್ರ ಜಡೇಜ (17, 12ಎ) ಮತ್ತೊಮ್ಮೆ ವಿಫಲರಾದರು. ಚೆನ್ನೈ ತಂಡ ಕೊನೆಯ ಐದು ವಿಕೆಟ್‌ಗಳನ್ನು ಕೇವಲ ಆರು ರನ್‌ಗಳ (ಏಳು ಎಸೆತಗಳ) ಅಂತರದಲ್ಲಿ ಕಳೆದುಕೊಂಡಿತು.
ಸಂಕ್ಷಿಪ್ತ ಸ್ಕೋರು:
ಚೆನ್ನೈ ಸೂಪರ್ ಕಿಂಗ್ಸ್: 19.2 ಓವರುಗಳಲ್ಲಿ 190 (ಸ್ಯಾಮ್ ಕರನ್ 88, ಡೆವಾಲ್ಡ್ ಬ್ರೆವಿಸ್ 32, ರವೀಂದ್ರ ಜಡೇಜ 17; ಅರ್ಷದೀಪ್ ಸಿಂಗ್ 25ಕ್ಕೆ2, ಮಾರ್ಕೊ ಯಾನ್ಸೆನ್ 30ಕ್ಕೆ2, ಯಜುವೇಂದ್ರ ಚಾಹಲ್ 32ಕ್ಕೆ4) ಪಂಜಾಬ್ ಕಿಂಗ್ಸ್: 19.4 ಓವರ್ ಗಳಲ್ಲಿ 6 ವಿಕೆಟ್ ಗಳಿಗೆ 194 ( ಪ್ರಿಯಾಂಶ್ ಆರ್ಯ 23, ಪ್ರಭಸಿಮ್ರನ್ ಸಿಂಗ್54, ಶ್ರೇಯಸ್ ಅಯ್ಯರ್ 72, ಖಲೀಲ್ ಅಹಮದ್ 28ಕ್ಕೆ 2, ಮಥೀಷ ಪಥಿರಾಣ 45ಕ್ಕೆ2) ಫಲಿತಾಂಶ: ಪಂಜಾಬ್ ಕಿಂಗ್ಸ್ ತಂಡಕ್ಕೆ 4 ವಿಕೆಟ್ ಜಯ. ಪಂದ್ಯದ ಆಟಗಾರ: ಶ್ರೇಯಸ್ ಅಯ್ಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.