ಎಂ.ಎಸ್. ಧೋನಿ ವಿಕೆಟ್ ಪಡೆದ ಸಂಭ್ರಮದಲ್ಲಿ ಸಂದೀಪ್ ಶರ್ಮಾ
ಚಿತ್ರ: X / @rajasthanroyals
ಗುವಾಹಟಿ: ರಾಜಸ್ಥಾನ ರಾಯಲ್ಸ್ (ಆರ್‌ಆರ್) ತಂಡವು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧದ ಪಂದ್ಯದಲ್ಲಿ 6 ರನ್ ಅಂತರದ ಜಯ ಸಾಧಿಸಿತು. ಆ ಮೂಲಕ, ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಜಯದ ಖಾತೆ ತೆರೆಯಿತು.
183 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಚೆನ್ನೈಗೆ ಉತ್ತಮ ಆರಂಭ ಸಿಗಲಿಲ್ಲ. ಎಡಗೈ ಬ್ಯಾಟರ್ ರಚಿನ್ ರವೀಂದ್ರ ಮೊದಲ ಓವರ್‌ನಲ್ಲೇ ಔಟಾದರು. ನಂತರ ರಾಹುಲ್ ತ್ರಿಪಾಠಿ 23 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಶಿವಂ ದುಬೆ ಆಟ ಕೇವಲ 18 ರನ್‌ಗೆ ಕೊನೆಯಾಯಿತು. ಬಳಿಕ ಬಂದ ವಿಜಯ್ ಶಂಕರ್ (8 ರನ್) ಹೆಚ್ಚು ಹೊತ್ತು ನಿಲ್ಲಲಿಲ್ಲ.
ಒಂದೆಡೆ ವಿಕೆಟ್ ಬೀಳುತ್ತಿದ್ದರೂ, ನೆಲಕಚ್ಚಿ ಆಡಿದ ನಾಯಕ ಋತುರಾಜ್ ಗಾಯಕವಾಡ್ 44 ಎಸೆತಗಳಲ್ಲಿ 63 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ರವೀಂದ್ರ ಜಡೇಜ (22 ಎಸೆತ, ಅಜೇಯ 32 ರನ್) ಹಾಗೂ ಎಂ.ಎಸ್. ಧೋನಿ (11 ಎಸೆತ, 16 ರನ್) ಬೀಸಾಟವಾಡಿದರೂ, ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ಗೆ 176 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಕೊನೇ ಓವರ್‌ನಲ್ಲಿ 20 ರನ್ ಬೇಕಿತ್ತು. ಧೋನಿ ಹಾಗೂ ಜಡೇಜ ಕ್ರೀಸ್‌ನಲ್ಲಿದ್ದರು. ಈ ಓವರ್ ಬೌಲಿಂಗ್ ಮಾಡಿದ ಸಂದೀಪ್ ಶರ್ಮಾ, ಮೊದಲ ಎಸೆತವನ್ನು ವೈಡ್ ಎಸೆದರು. ನಂತರದ ಎಸೆತದಲ್ಲಿ ಧೋನಿ ವಿಕೆಟ್ ಪಡೆದರು. ಬಳಿಕ ಐದು ಎಸೆತಗಳಲ್ಲಿ ಒಂದು ಸಿಕ್ಸರ್ ಸಹಿತ 13 ರನ್ ಬಿಟ್ಟುಕೊಟ್ಟರೂ, ಸಿಎಸ್‌ಕೆ ಗೆಲುವಿನ ರನ್ ಗಳಿಸಲು ಅವಕಾಶ ನೀಡಲಿಲ್ಲ.
ರಾಯಲ್ಸ್ ಪರ ವನಿಂದು ಹಸರಂಗ ನಾಲ್ಕು ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್ ಮತ್ತು ಸಂದೀಪ್ ಶರ್ಮಾ ಒಂದೊಂದು ವಿಕೆಟ್ ಪಡೆದರು.
ರಾಣಾ ಅರ್ಧಶತಕ
ಇದಕ್ಕೂ ಮುನ್ನ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್‌ಆರ್ ನಿಗದಿತ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 182 ರನ್‌ಗಳಿಸಿತು.
ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (4 ರನ್), ಮೊದಲ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಜೊತೆಯಾದ ಸಂಜು ಸ್ಯಾಮ್ಸನ್ ಮತ್ತು ನಿತೀಶ್ ರಾಣಾ, ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ 82 ರನ್ ಸೇರಿಸಿದರು. ಇದರಲ್ಲಿ ಸಂಜು ಗಳಿಸಿದ್ದು 20 ರನ್ ಮಾತ್ರ. ಉಳಿದ ರನ್‌ಗಳು ರಾಣಾ ಬ್ಯಾಟ್‌ನಿಂದ ಬಂದವು.
36 ಎಸೆತಗಳನ್ನು ಎದುರಿಸಿದ ರಾಣಾ, 10 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 81 ರನ್ ಚಚ್ಚಿದರು.
11.3 ಓವರ್‌ಗಳಲ್ಲಿ ತಂಡದ ಮೊತ್ತ 124 ರನ್ ಆಗಿದ್ದಾಗ ರಾಣಾ ವಿಕೆಟ್ ಒಪ್ಪಿಸಿದರು. ಅದಾದ ನಂತರ ರಾಯಲ್ಸ್ ರನ್ ಗತಿ ಕುಸಿಯಿತು. ನಾಯಕ ರಿಯಾನ್ ಪರಾಗ್, 28 ಎಸೆತಗಳಲ್ಲಿ 37 ರನ್ ಗಳಿಸಿದ್ದು ಬಿಟ್ಟರೆ, ಉಳಿದ ಆಟಗಾರರು ವೈಫಲ್ಯ ಅನುಭವಿಸಿದರು.
ಹೀಗಾಗಿ, ರಾಜಸ್ಥಾನ ತಂಡ 200ರ ಗಡಿ ದಾಟುವ ಅವಕಾಶ ಕೈಚೆಲ್ಲಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.