ADVERTISEMENT

IPL 2025: ಬೆಂಗಳೂರು ಜಯದ ಓಟಕ್ಕೆ ತಡೆಯೊಡ್ಡುವತ್ತ ಚೆನ್ನೈ ಚಿತ್ತ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್–ಧೋನಿ ಮುಖಾಮುಖಿ: ಪ್ಲೇ ಆಫ್‌ ಮೇಲೆ ರಜತ್ ಪಡೆಯ ಕಣ್ಣು

ಗಿರೀಶ ದೊಡ್ಡಮನಿ
Published 3 ಮೇ 2025, 0:25 IST
Last Updated 3 ಮೇ 2025, 0:25 IST
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಆರ್‌ಸಿಬಿ ತಂಡದ ಆಟಗಾರ ವಿರಾಟ್‌ ಕೊಹ್ಲಿ ಅಭ್ಯಾಸದಲ್ಲಿ ತೊಡಗಿದ್ದರು ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಆರ್‌ಸಿಬಿ ತಂಡದ ಆಟಗಾರ ವಿರಾಟ್‌ ಕೊಹ್ಲಿ ಅಭ್ಯಾಸದಲ್ಲಿ ತೊಡಗಿದ್ದರು ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್.   

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ 18 ವರ್ಷಗಳ ಪಯಣದಲ್ಲಿ ಹಲವು ಸೋಲು, ಗೆಲುವುಗಳಿಗೆ ಕ್ರಿಕೆಟ್‌ಪ್ರಿಯರು ಸಾಕ್ಷಿಯಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐದು ಸಲ ಪ್ರಶಸ್ತಿ ಗೆದ್ದ ವೈಭವವನ್ನೂ ಕಣ್ತುಂಬಿಕೊಂಡಿದ್ದಾರೆ. ವಿಶ್ವಪ್ರಸಿದ್ಧ ತಾರೆಗಳ ಬಲವಿದ್ದರೂ ಒಂದು ಬಾರಿಯೂ ಚಾಂಪಿಯನ್‌ ಆಗದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗಾಗಿಯೂ ಅಭಿಮಾನಿಗಳ ಹೃದಯ ಮಿಡಿದಿದೆ.  

ಉಭಯ ತಂಡಗಳಿಗೂ ಅಪಾರ ಸಂಖ್ಯೆಯ ಅಭಿಮಾನಿಗಳ ಬಳಗವಿದೆ. ಅದರಲ್ಲೂ ‘ರೆಡ್‌ ಆರ್ಮಿ’ಯ ತಂಡನಿಷ್ಠೆಗೆ ಸಾಟಿಯೇ ಇಲ್ಲ. ಅದರಿಂದಾಗಿಯೇ ಪ್ರತಿ ಸಲ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಆರ್‌ಸಿಬಿ ತಂಡಗಳು ಮುಖಾಮುಖಿಯಾಗುವಾಗ ಪೈಪೋಟಿ ಕಾವೇರುತ್ತದೆ. ‘ದಕ್ಷಿಣ ಡರ್ಬಿ’ ಎಂದೇ ಈ ಹಣಾಹಣಿಯು,  ಇಬ್ಬರು ದಿಗ್ಗಜರಾದ ಮಹೇಂದ್ರಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರ ನಡುವಣ ಜಿದ್ದಾಜಿದ್ದಿಯಾಗಿಯೂ ಮಾರ್ಪಡುತ್ತದೆ. 

ಆದರೆ ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಚೆನ್ನೈ ಮತ್ತು ಬೆಂಗಳೂರು ನಡುವಿನ ಪಂದ್ಯ ಹಳೆಯ ರೀತಿಯಂತೆ ಇಲ್ಲ. ಉಭಯ ತಂಡಗಳು ಬೆಂಗಳೂರಿನಲ್ಲಿ ಮುಖಾಮುಖಿಯಾಗುವಾಗ ರೋಚಕತೆ ಮುಗಿಲು ಮುಟ್ಟುತ್ತಿತ್ತು.  ಹೋದ ವರ್ಷದ ಪಂದ್ಯವೇ ಈ ಮಾತಿಗೆ ತಕ್ಕ ಉದಾಹರಣೆ. ಅಪಾರ ರೋಚಕತೆ ಮೂಡಿಸಿದ್ದ ಆ ಪಂದ್ಯದಲ್ಲಿ ಆರ್‌ಸಿಬಿ ಗೆದ್ದು ಪ್ಲೇಅಫ್‌ಗೆ ಸಾಗಿತ್ತು. ಆದರೆ ಚೆನ್ನೈ ಹೊರಬಿದ್ದಿತ್ತು. ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿತ್ತು. 

ADVERTISEMENT

ಈ ಸಲ ಚೆನ್ನೈ ಇನ್ನೂ ನಾಲ್ಕು ಪಂದ್ಯಗಳು ಬಾಕಿ ಇರುವಾಗಲೇ ಪ್ಲೇ ಆಫ್‌ ಹಾದಿಯಿಂದ ಹೊರಬಿದ್ದಿದೆ. ತಂಡವು ಇದುವರೆಗೆ ಆಡಿರುವ ಹತ್ತು ಪಂದ್ಯಗಳಲ್ಲಿ ಎಂಟರಲ್ಲಿ ಸೋತು, ಎರಡರಲ್ಲಿ ಜಯಿಸಿದೆ. ತಂಡವು ಈಗ ಉಳಿದಿರುವ ಪಂದ್ಯಗಳಲ್ಲಿ ಯುವ ಆಟಗಾರರಿಗೆ ಅವಕಾಶ ಕೊಟ್ಟು ನೋಡುವ ಮತ್ತು ಅಂಕಪಟ್ಟಿಯಲ್ಲಿ ಒಂದಿಷ್ಟು ಸ್ಥಾನ ಮೇಲಕ್ಕೇರುವ ಪ್ರಯತ್ನದಲ್ಲಿದೆ. ಈ ನಿಟ್ಟಿನಲ್ಲಿ ಆರ್‌ಸಿಬಿಗೆ ಸೋಲಿನ ರುಚಿ ತೋರಿಸುವ ಪ್ರಯತ್ನವನ್ನಂತೂ ಧೋನಿ ಬಳಗ ಮಾಡುವುದು ಖಚಿತ. ಹೋದ ವರ್ಷ ಬೆಂಗಳೂರಿನಲ್ಲಿ ಹಾಗೂ ಈ ಬಾರಿಯ ಟೂರ್ನಿಯ ಮೊದಲ ಸುತ್ತಿನಲ್ಲಿ ಚೆನ್ನೈನಲ್ಲಿ ಆರ್‌ಸಿಬಿಯಿಂದ ಸೋಲುಂಡಿದ್ದ ಸೂಪರ್ ಕಿಂಗ್ಸ್ ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿದೆ.  ಟೂರ್ನಿಯ ಮಧ್ಯದಲ್ಲಿ ಋತುರಾಜ್ ಗಾಯಕವಾಡ ಗಾಯಗೊಂಡು ಹೊರನಡೆದ ಕಾರಣ ನಾಯಕತ್ವವನ್ನು ಧೋನಿ ನಿಭಾಯಿಸುತ್ತಿದ್ದಾರೆ. ಉಳಿದ ಆಟಗಾರರ ಅಸ್ಥಿರ ಪ್ರದರ್ಶನ ತಂಡಕ್ಕೆ ದುಬಾರಿಯಾಗುತ್ತಿದೆ. ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು 190 ರನ್‌ಗಳ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ಚೆನ್ನೈ ಬೌಲಿಂಗ್ ಪಡೆ ವಿಫಲವಾಗಿತ್ತು. 

ಆದರೆ ಈಗ ಆರ್‌ಸಿಬಿಯು ಮೇಲ್ನೋಟಕ್ಕೆ ಚೆನ್ನೈಗಿಂತ ಬಲಾಢ್ಯವಾಗಿದೆ. ಗುರುವಾರ ಮುಂಬೈ ಇಂಡಿಯನ್ಸ್ ತಂಡವು ಅಗ್ರಸ್ಥಾನಕ್ಕೇರಿದ್ದರಿಂದ ಆರ್‌ಸಿಬಿ ಎರಡನೇ ಸ್ಥಾನಕ್ಕೆ ಬಂದಿದೆ. ತಂಡದ ಅನುಭವಿ ಬ್ಯಾಟರ್ ವಿರಾಟ್, ದೇವದತ್ತ ಪಡಿಕ್ಕಲ್, ಫಿಲ್ ಸಾಲ್ಟ್, ಟಿಮ್ ಡೇವಿಡ್, ಜಿತೇಶ್ ಶರ್ಮಾ ಅವರು ಅಮೋಘ ಲಯದಲ್ಲಿದ್ದಾರೆ. ವಿರಾಟ್  ಅರ್ಧಡಜನ್ ಅರ್ಧಶತಕಗಳನ್ನು ಗಳಿಸಿದ್ದಾರೆ. ನಾಯಕ ರಜತ್ ಪಾಟೀದಾರ್ ಅವರು ಆರಂಭದ ಕೆಲ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದರು. ಕೆಲವು ಪಂದ್ಯಗಳಲ್ಲಿ ಎಡವಿದ್ದಾರೆ. ಅವರು ಮತ್ತೆ ಲಯಕ್ಕೆ ಮರಳಿದರೆ ಮಧ್ಯಮಕ್ರಮಾಂಕ ಮತ್ತಷ್ಟು ಬಲಿಷ್ಠವಾಗಲಿದೆ. 

ಆಲ್‌ರೌಂಡರ್ ಕೃಣಾಲ್ ಪಾಂಡ್ಯ, ವೇಗಿ ಜೋಶ್ ಹೇಜಲ್‌ವುಡ್ ಹಾಗೂ ಭುವನೇಶ್ವರ್ ಕುಮಾರ್ ಅವರು ಈಗಾಗಲೇ ಗೆಲುವಿನ ಕಾಣಿಕೆ ನೀಡಿದ್ದಾರೆ. ಈ ಸಲ ಆರ್‌ಸಿಬಿ ತಂಡವು ತವರಿನಾಚೆ ಆಡಿರುವ ಎಲ್ಲ ಪಂದ್ಯಗಳನ್ನೂ ಗೆದ್ದಿದೆ. ತವರಿನಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದಿರುವ ರಜತ್ ಬಳಗವು ಎರಡನೇ ಜಯದ ನಿರೀಕ್ಷೆಯಲ್ಲಿದೆ. 

ಮಳೆಯ ಆಟವೇ? 

ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಮಳೆಯ ಆರ್ಭಟ ಜೋರಾಗಿದೆ. ಶನಿವಾರ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ. 

ಒಂದೊಮ್ಮೆ ಮಳೆ ಬಂದು ಪಂದ್ಯ ರದ್ದಾದರೆ ಅಥವಾ ಅರ್ಧದಲ್ಲಿಯೇ ಸ್ಥಗಿತವಾದರೆ ಉಭಯ ತಂಡಗಳಿಗೆ ತಲಾ ಒಂದು ಅಂಕ ಲಭಿಸಲಿದೆ. ಆದರೆ ಇದರಿಂದ ಉಭಯ ತಂಡಗಳಿಗೂ ಹೆಚ್ಚಿನ ನಷ್ಟವೇನಿಲ್ಲ. ಆರ್‌ಸಿಬಿ ಪ್ಲೇ ಆಫ್‌ನತ್ತ ಮತ್ತೊಂದು ಹೆಜ್ಜೆ ಇಡುವುದು ಖಚಿತ. 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್‌ ಏರ್ ವ್ಯವಸ್ಥೆ ಇರುವುದರಿಂದ ಕೆಲವೇ ಓವರ್‌ಗಳ ಪಂದ್ಯವಾದರೂ ನಡೆಯಬಹುದು ಎಂಬ ಭರವಸೆ ಅಭಿಮಾನಿಗಳ ವಲಯದಲ್ಲಿದೆ. 15 ದಿನಗಳ ಹಿಂದೆ ಇಲ್ಲಿಯೇ ನಡೆದಿದ್ದ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಣ ಪಂದ್ಯದ ಸಂದರ್ಭದಲ್ಲಿಯೂ ಮಳೆಯಾಗಿತ್ತು. ಅದ್ದರಿಂದ 14 ಓವರ್‌ಗಳಿಗೆ (‍ಪ್ರತಿ ಇನಿಂಗ್ಸ್‌ಗೆ) ನಿಗದಿಪಡಿಸಲಾಗಿತ್ತು. ಬಿರುಮಳೆಯಲ್ಲಿಯೂ ಪ್ರೇಕ್ಷಕರ ಗ್ಯಾಲರಿಯಲ್ಲಿ ಜನರ ಸಂಖ್ಯೆ ಕಡಿಮೆಯೇನೂ ಆಗಿರಲಿಲ್ಲ ಎಂಬುದು ವಿಶೇಷ.

ಸ್ಟ್ರೈಕ್‌ರೇಟ್ ಗುಟ್ಟು ಬಿಚ್ಚಿಟ್ಟ ಪಡಿಕ್ಕಲ್

ಬೆಂಗಳೂರು: ಟಿ20 ಕ್ರಿಕೆಟ್ ಮಾದರಿಗೆ ತಕ್ಕಂತೆ ಮನೋಬಲವನ್ನು ರೂಪಿಸಿಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ತಮ್ಮ ಪ್ರಯತ್ನ ಫಲಿಸಿದೆ. ಜೊತೆಗೆ ಹೊಡೆತಗಳ ಆಯ್ಕೆ ಮತ್ತು ಪ್ರಯೋಗದಲ್ಲಿ ನಿಖರತೆ ಸಾಧಿಸಿದ್ದು ಸ್ಟ್ರೈಕ್‌ರೇಟ್ ಹೆಚ್ಚಿಸಿಕೊಳ್ಳಲು ಸಾಧ್ಯವಾಗಿದೆ ಎಂದು  ಆರ್‌ಸಿಬಿ ಎಡಗೈ ಬ್ಯಾಟರ್‌ ದೇವದತ್ತ ಪಡಿಕ್ಕಲ್ ಹೇಳಿದ್ದಾರೆ. 

ಈ ಸಲದ ಟೂರ್ನಿಯಲ್ಲಿ ಪಡಿಕ್ಕಲ್ ಅವರು 14.36 ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಪೇರಿಸಿದ್ದಾರೆ. ಆದರೆ ಕಳೆದ ಆವೃತ್ತಿಗಳಲ್ಲಿ ಅವರು 71 (2024) 130 (2023) 122 (2022) 125 (2021) ಮತ್ತು 124 (2020) ಸ್ಟ್ರೈಕ್‌ರೇಟ್ ಹೊಂದಿದ್ದರು. 

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ತಂಡದಲ್ಲಿ ನಮ್ಮ ಪಾತ್ರದ ಕುರಿತು ಸ್ಪಷ್ಟತೆ ಇದ್ದಾಗ  ಉಳಿದೆಲ್ಲವೂ ಸರಾಗವಾಗುತ್ತದೆ. ಆ ಪಾತ್ರಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಂಡು ಪಂದ್ಯದಲ್ಲಿ ಅದನ್ನು ಕಾರ್ಯರೂಪಕ್ಕೆ ತರುವುದು ಮುಖ್ಯ. ಆಗಲೇ ಯಶಸ್ಸು ಒಲಿಯುತ್ತದೆ‘ ಎಂದರು. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಹಾಟ್‌ಸ್ಟಾರ್ ಆ್ಯಪ್

ರಚಿನ್ ರವೀಂದ್ರ ಅಭ್ಯಾಸ   –ಪ್ರಜಾವಾಣಿ ಚಿತ್ರ/ ಎಸ್‌.ಕೆ. ದಿನೇಶ್ 
ಆರ್‌ಸಿಬಿಯ ದೇವದತ್ತ ಪಡಿಕ್ಕಲ್  –ಪ್ರಜಾವಾಣಿ ಚಿತ್ರ/ ಎಸ್‌.ಕೆ. ದಿನೇಶ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.