ಕೋಲ್ಕತ್ತ: ಈ ವರ್ಷದ ಐಪಿಎಲ್ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಕೃಣಾಲ್ ಪಾಂಡ್ಯ ಅವರ ಆಯ್ಕೆಯು ಸ್ಮಾರ್ಟ್ ಪಿಕ್ ಎಂದು ಆಸ್ಟ್ರೇಲಿಯಾದ ದಿಗ್ಗಜ ಮ್ಯಾಥ್ಯೂ ಹೇಡನ್ ಶ್ಲಾಘಿಸಿದ್ದಾರೆ. ಈ ವರ್ಷ ಈ ಆರ್‌ಸಿಬಿ ಘಟಕದಲ್ಲಿ ಏನೋ ವಿಶೇಷತೆ ಇದೆ ಎಂದು ಅವರು ಹೇಳಿದ್ದಾರೆ.
ಶನಿವಾರ ನಡೆದ ಐಪಿಎಲ್ ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿ ಕೋಲ್ಕತ್ತ ನೈಟ್ ರೈಡರ್ಸ್‌ನ ತಂಡವನ್ನು ಕಟ್ಟಿಹಾಕಿ, ಆರ್‌ಸಿಬಿ ಗಮನಾರ್ಹ ಪುನರಾಗಮನದ ಮೂಲಕ ಏಳು ವಿಕೆಟ್‌ಗಳ ಜಯ ಸಾಧಿಸಿತು.
175 ರನ್‌ಗಳ ಗುರಿಯನ್ನು 22 ಎಸೆತಗಳು ಬಾಕಿ ಇರುವಂತೆ 3 ವಿಕೆಟ್ ಕಳೆದುಕೊಂಡು ಮುಟ್ಟಿತು..
ಈ ಪಂದ್ಯದಲ್ಲಿ 4 ಓವರ್‌ಗಳಲ್ಲಿ 29 ರನ್ ನೀಡಿ 3 ವಿಕೆಟ್ ಉರುಳಿಸಿದ ಕೃಣಾಲ್ ಪಾಂಡ್ಯ, ಕೋಲ್ಕತ್ತ ರನ್ ವೇಗಕ್ಕೆ ಕಡಿವಾಣ ಹಾಕುವ ಮೂಲಕ ತಂಡದ ಗೆಲುವಿಗೆ ನೆರವಾಗಿದ್ದರು.
ಫಿಲ್ ಸಾಲ್ಟ್ (56), ವಿರಾಟ್ ಕೊಹ್ಲಿ (59) ಮತ್ತು ರಜತ್ ಪಾಟಿದಾರ್ (34) ಉತ್ತಮ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾದರು.
ನೂತನ ನಾಯಕ ರಜತ್ ಪಾಟಿದಾರ್ ಅವರಿಗೆ ಇದು ಒಂದು ದೃಢವಾದ ಮತ್ತು ಮಹತ್ವದ ಗೆಲುವು. ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿರುವುದು ಖಂಡಿತವಾಗಿಯೂ ಸಹಾಯವಾಗುತ್ತದೆ ಎಂದು ಹೇಡನ್ ಹೇಳಿದ್ದಾರೆ.
'ಆರ್‌ಸಿಬಿ ತಂಡ ಉತ್ತಮವಾಗಿದ್ದು, ಕೃಣಾಲ್ ಪಾಂಡ್ಯ ಆರ್‌ಸಿಬಿಯ ಆಸ್ತಿಯಾಗಿದ್ದಾರೆ. ಜೋಶ್ ಹ್ಯಾಜಲ್‌ವುಡ್ ಅವರು ಅತ್ಯುತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಬಹಳ ಸಮಯದ ನಂತರ ಆರ್‌ಸಿಬಿಯ ಉತ್ತಮ ಬೌಲಿಂಗ್ ಪಡೆಯನ್ನು ನೋಡುತ್ತಿದ್ದೇನೆ. ಈ ವರ್ಷ ತಂಡದಲ್ಲಿ ಏನೋ ವಿಶೇಷತೆ ಇದೆ’ ಎಂದಿದ್ದಾರೆ.
ಎಡಗೈ ಸ್ಪಿನ್ನರ್ ಪಾಂಡ್ಯ ಅವರ ಚೆಂಡಿನ ವೇಗ ಬದಲಿಸುವ ಮತ್ತು ಸ್ಟಂಪ್‌ಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಕೆಲಸ ಮಾಡಿದೆ ಎಂದು ಹೇಡನ್ ಹೇಳಿದ್ದಾರೆ.
ಒತ್ತಡದ ಸಂದರ್ಭಗಳಲ್ಲಿ ಅನುಭವ ಕೆಲಸಕ್ಕೆ ಬರುತ್ತದೆ. ಕೃಣಾಲ್ ಗಂಭೀರ ನಿರ್ವಹಣೆ ತೋರಿಸಿದರು. ಒಂದು ಹಂತದಲ್ಲಿ ಆರ್‌ಸಿಬಿ ತೀವ್ರ ತೊಂದರೆಯಲ್ಲಿದ್ದಂತೆ ತೋರುತ್ತಿತ್ತು, ಬಳಿಕ ಆರ್‌ಸಿಬಿ ಕಮ್‌ಬ್ಯಾಕ್ ಅದ್ಭುತವಾಗಿತ್ತು’ ಎಂದಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಕೆಕೆಆರ್ ವಿರುದ್ಧ 1,000 ರನ್ ಗಡಿ ದಾಟಿದ ಕೊಹ್ಲಿ ಅರ್ಧಶತಕ(59) ಗಳಿಸುವ ಮೂಲಕ ತಂಡದ ಗೆಲುವಿಗೆ ನೆರವಾಗಿದ್ದರು. ಕೊಹ್ಲಿ ಆಟವನ್ನೂ ಹೇಡನ್ ಶ್ಲಾಘಿಸಿದ್ದಾರೆ.
ಇದು ವಿರಾಟ್ ಕೊಹ್ಲಿಗೆ ಚೇಸ್ ಮಾಡಲು ಉತ್ತಮ ಮೊತ್ತವಾಗಿತ್ತು. ಇಂತಹ ಪಿಚ್‌ಗಳಲ್ಲಿ ಸರಾಸರಿಗಿಂತ ಕಡಿಮೆ ರನ್‌ಗಳಿಗೆ ಕಟ್ಟಿಹಾಕಿದರೆ ಚೇಸಿಂಗ್ ಸುಲಭ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.