ವಿರಾಟ್ ಕೊಹ್ಲಿ, ಕೃಣಾಲ್ ಪಾಂಡ್ಯ
ನವದೆಹಲಿ: ಮೊದಲು ಬೌಲರ್‌ಗಳ ಸಾಂಘಿಕ ಪ್ರದರ್ಶನ ಬಳಿಕ ವಿರಾಟ್ ಕೊಹ್ಲಿ (51) ಹಾಗೂ ಕೃಣಾಲ್ ಪಾಂಡ್ಯ (73*) ಅಮೋಘ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಆರು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಎಂಟು ವಿಕೆಟ್ ನಷ್ಟಕ್ಕೆ 162 ರನ್ ಗಳಿಸಲಷ್ಟೇ ಸಾಧ್ಯವಯಿತು. ಕೆ.ಎಲ್. ರಾಹುಲ್ 41, ಟ್ರಿಸ್ಟನ್ ಸ್ಟಬ್ಸ್ 34, ಅಭಿಷೇಕ್ ಪೊರೆಲ್ 28 ಹಾಗೂ ಫಫ್ ಡುಪ್ಲೆಸಿ 22 ರನ್ ಗಳಿಸಿದರು.
ಆರ್‌ಸಿಬಿ ಪರ ನಿಖರ ದಾಳಿ ಸಂಘಟಿಸಿದ ಭುವನೇಶ್ವರ್ ಕುಮಾರ್ ಮೂರು ಹಾಗೂ ಜೋಶ್ ಹ್ಯಾಜಲ್‌ವುಡ್ ಎರಡು ವಿಕೆಟ್ ಗಳಿಸಿ ಮಿಂಚಿದರು.
ಈ ಗುರಿ ಬೆನ್ನಟ್ಟಿದ ಆರ್‌ಸಿಬಿ 18.3 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಕೃಣಾಲ್ 47 ಎಸೆತಗಲ್ಲಿ 73 ರನ್ (4 ಸಿಕ್ಸರ್, 5 ಬೌಂಡರಿ) ಗಳಿಸಿ ಔಟಾಗದೆ ಉಳಿದರು. ಅಲ್ಲದೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ವಿರಾಟ್ 51 ರನ್ ಗಳಿಸಿ (47 ಎಸೆತ, 4 ಬೌಂಡರಿ) ಮಗದೊಮ್ಮೆ ಮಿಂಚಿದರು.
ತವರಿನಾಚೆ ಸತತ 6ನೇ ಗೆಲುವು, ಅಂಕಪಟ್ಟಿಯಲ್ಲಿ ಅಗ್ರ...
ಇದರೊಂದಿಗೆ ತವರಿನಾಚೆ ಅಂಗಳದಲ್ಲಿ ಆರ್‌ಸಿಬಿ ಸತತ ಆರನೇ ಗೆಲುವು ದಾಖಲಿಸಿದೆ. ಈ ಸಾಧನೆ ಮಾಡಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಭಾಜನವಾಗಿದೆ.
ಈ ಹಿಂದೆ 2015ನೇ ಆವೃತ್ತಿಯಲ್ಲಿ ಆರ್‌ಸಿಬಿ ತವರಿನಾಚೆ ಆರು ಗೆಲುವುಗಳನ್ನು ಸಾಧಿಸಿತ್ತು. ಆದರೆ ಇದೇ ಮೊದಲ ಬಾರಿಗೆ ತಂಡವೊಂದು ತವರಿನಾಚೆ ಅಂಗಳದಲ್ಲಿ ಸತತ ಆರು ಗೆಲುವುಗಳನ್ನು ದಾಖಲಿಸಿದೆ.
ಅಲ್ಲದೆ ಈವರೆಗೆ ಆಡಿರುವ 10 ಪಂದ್ಯಗಳಲ್ಲಿ ಏಳನೇ ಗೆಲುವು ಸಾಧಿಸಿರುವ ಆರ್‌ಸಿಬಿ, ಒಟ್ಟು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆ ಮೂಲಕ ಚೊಚ್ಚಲ ಟ್ರೋಫಿಯತ್ತ ಕಣ್ಣಾಯಿಸಿರುವ ಆರ್‌ಸಿಬಿ, ಪ್ಲೇ-ಆಫ್‌ನತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.
ರನ್ ಬೇಟೆಯಲ್ಲಿ ವಿರಾಟ್ ಅಗ್ರ, 6ನೇ ಅರ್ಧಶತಕ ಸಾಧನೆ...
ಪ್ರಸಕ್ತ ಸಾಲಿನ ರನ್ ಬೇಟೆಯಲ್ಲಿ ಕಿಂಗ್ ಕೊಹ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಈವರೆಗೆ ಆಡಿರುವ 10 ಪಂದ್ಯಗಳಲ್ಲಿ ಆರನೇ ಅರ್ಧಶತಕದ ಸಾಧನೆ ಮಾಡಿರುವ ಕೊಹ್ಲಿ, 63.29ರ ಸರಾಸರಿಯಲ್ಲಿ ಒಟ್ಟು 443 ರನ್ ಗಳಿಸಿದ್ದಾರೆ. ಆ ಮೂಲಕ ಮುಂಬೈ ಇಂಡಿಯನ್ಸ್‌ನ ಸೂರ್ಯಕುಮಾರ್ ಯಾದವ್ ಹಿಂದಿಕ್ಕಿರುವ ವಿರಾಟ್ ಕೊಹ್ಲಿ 'ಆರೆಂಜ್ ಕ್ಯಾಪ್' ತಮ್ಮದಾಗಿಸಿದ್ದಾರೆ.
ಒಟ್ಟಾರೆಯಾಗಿ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 61ನೇ ಅರ್ಧಶತಕದ ಸಾಧನೆ ಮಾಡಿದ್ದಾರೆ. ಆ ಮೂಲಕ ಅಗ್ರಸ್ಥಾನದಲ್ಲಿರುವ ಡೇವಿಡ್ ವಾರ್ನರ್ (62) ಸನಿಹದಲ್ಲಿದ್ದಾರೆ.
ಬೌಲರ್‌ಗಳ ಪಟ್ಟಿಯಲ್ಲಿ ಹ್ಯಾಜಲ್‌ವುಡ್ ಅಗ್ರ...
ಇನ್ನೊಂದೆಡೆ ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ (ಪರ್ಪಲ್ ಕ್ಯಾಪ್) ಆರ್‌ಸಿಬಿ ಬೌಲರ್ ಜೋಶ್ ಹ್ಯಾಜಲ್‌ವುಡ್ ಅಗ್ರಸ್ಥಾನದಲ್ಲಿದ್ದಾರೆ. ಅವರು 10 ಪಂದ್ಯಗಳಲ್ಲಿ ಒಟ್ಟು 18 ವಿಕೆಟ್‌ಗಳನ್ನು ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಗುಜರಾತ್ ಟೈಟನ್ಸ್ ತಂಡದ ಪ್ರಸಿದ್ಧ ಕೃಷ್ಣ (16 ವಿಕೆಟ್) ಇದ್ದಾರೆ.
ಕೃಣಾಲ್ ಪಾಂಡ್ಯ, ವಿರಾಟ್ ಕೊಹ್ಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.