ಅಭಿಷೇಕ್ ಶರ್ಮಾ
(ಪಿಟಿಐ ಚಿತ್ರ)
ಹೈದರಾಬಾದ್: ಎಡಗೈ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ (141) ಸಿಡಿಲಬ್ಬರದ ಶತಕದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಶನಿವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್, ನಾಯಕ ಶ್ರೇಯಸ್ ಅಯ್ಯರ್ (82) ಆಕ್ರಮಣಕಾರಿ ಆಟದ ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 245 ರನ್ ಪೇರಿಸಿತು.
ಈ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಇನ್ನು ಒಂಬತ್ತು ಎಸೆತಗಳು ಬಾಕಿ ಇರುವಂತೆಯೇ 18.3 ಓವರ್‌ಗಳಲ್ಲಿ ಗುರಿ ತಲುಪಿತು.
55 ಎಸೆತಗಳನ್ನು ಎದುರಿಸಿದ ಅಭಿಷೇಕ್, 10 ಸಿಕ್ಸರ್ ಹಾಗೂ 14 ಬೌಂಡರಿಗಳ ನೆರವಿನಿಂದ 141 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಈ ಪಂದ್ಯದಲ್ಲಿ ಅಭಿಷೇಕ್ ಹಾಗೂ ಸನ್‌ರೈಸರ್ಸ್ ತಂಡವು ಹಲವು ದಾಖಲೆಗಳನ್ನು ಬರೆದಿವೆ. ಈ ಕುರಿತು ಮಾಹಿತಿ ಇಲ್ಲಿದೆ.
246 ರನ್ ಗುರಿ ಬೆನ್ನಟ್ಟಿದ ಹೈದರಾಬಾದ್...
ಪಂಜಾಬ್‌ಗೆ ತಕ್ಕ ಉತ್ತರ ನೀಡಿದ ಹೈದರಾಬಾದ್, 246 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿತು. ಆ ಮೂಲಕ ಐಪಿಎಲ್ ಇತಿಹಾಸದಲ್ಲೇ ಎರಡನೇ ಅತ್ಯಧಿಕ ಮೊತ್ತ ಬೆನ್ನಟ್ಟಿ ಗೆದ್ದ ತಂಡವೆಂಬ ಹೆಗ್ಗಳಿಕೆಗೆ ಸನ್‌ರೈಸರ್ಸ್ ಭಾಜನವಾಯಿತು.
ಕಳೆದ ವರ್ಷ (2024) ಕಿಂಗ್ಸ್ ಇಲೆವೆನ್ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ 262 ರನ್ ಚೇಸ್ ಮಾಡಿರುವುದು ಈವರೆಗಿನ ದಾಖಲೆಯಾಗಿದೆ.
ತವರು ಮೈದಾನದಲ್ಲಿ ಪಂಜಾಬ್ ವಿರುದ್ಧ ಸತತ 8ನೇ ಗೆಲುವು...
ಇದರೊಂದಿಗೆ ಹೈದರಾಬಾದ್‌ನ ರಾಜೀವಗಾಂಧಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಎಸ್‌ಆರ್‌ಎಚ್ ತಂಡವು ಸತತ ಎಂಟನೇ ಗೆಲುವು ದಾಖಲಿಸಿದೆ. 2015ರ ಬಳಿಕ ಈ ಮೈದಾನದಲ್ಲಿ ಹೈದಾರಾಬಾದ್ ಸೋತಿಲ್ಲ. ಚೆನ್ನೈನ ಚೆಪಾಕ್ ಮೈದಾನದಲ್ಲಿ ಆರ್‌ಸಿಬಿ ವಿರುದ್ಧ ಸಿಎಸ್‌ಕೆ ಸತತ 8 ಪಂದ್ಯಗಳಲ್ಲಿ ಜಯ ಗಳಿಸಿತ್ತು. ಈ ಜಯದ ಓಟಕ್ಕೆ ಪ್ರಸಕ್ತ ಸಾಲಿನಲ್ಲಿ ಆರ್‌ಸಿಬಿ ಬ್ರೇಕ್ ಹಾಕಿತ್ತು.
141 - ಮೂರನೇ ವೈಯಕ್ತಿಕ ಗರಿಷ್ಠ ಮೊತ್ತ...
141 ರನ್ ಗಳಿಸುವ ಮೂಲಕ ಅಭಿಷೇಕ್ ಶರ್ಮಾ, ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ ಹಾಗೂ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್ ಅವರೊಂದಿಗೆ ಎಲೈಟ್ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಇದು ಐಪಿಎಲ್ ಇತಿಹಾಸದಲ್ಲೇ ದಾಖಲಾದ ಮೂರನೇ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಹಾಗೆಯೇ ಐಪಿಎಲ್‌ನಲ್ಲಿ ಗರಿಷ್ಠ ವೈಯಕ್ತಿಕ ಮೊತ್ತ ಗಳಿಸಿದ ಭಾರತೀಯ ಆಟಗಾರ ಎನಿಸಿದ್ದಾರೆ. ಇನ್ನು ಎಸ್‌ಆರ್‌ಎಚ್ ಪರ ಗರಿಷ್ಠ ಮೊತ್ತ ಗಳಿಸಿದ ಬ್ಯಾಟರ್ ಎನಿಸಿದ್ದಾರೆ.
2013ರಲ್ಲಿ ಕ್ರಿಸ್ ಗೇಲ್ ಅಜೇಯ 175 ಹಾಗೂ 2008ರ ಚೊಚ್ಚಲ ಐಪಿಎಲ್‌ಲ್ಲಿ ಮೆಕಲಮ್ ಅಜೇಯ 158 ರನ್ ಗಳಿಸಿದ್ದರು. ಭಾರತೀಯ ಬ್ಯಾಟರ್‌ಗಳ ಪೈಕಿ ಕೆ.ಎಲ್. ರಾಹುಲ್ 2020ರಲ್ಲಿ ಅಜೇಯ 132 ರನ್ ಗಳಿಸಿದ್ದರು.
ಚೇಸ್ ವೇಳೆ ವೈಯಕ್ತಿಕ ಗರಿಷ್ಠ ಮೊತ್ತ ಗಳಿಸಿದ ಬ್ಯಾಟರ್ ದಾಖಲೆಯು ಅಭಿಷೇಕ್‌ಗೆ ಸೇರುತ್ತದೆ. 2024ರಲ್ಲಿ ಮಾರ್ಕಸ್ ಸ್ಟೋಯಿನಿಸ್ ಔಟಾಗದೆ 124 ರನ್ ಗಳಿಸಿರುವುದು ಈವರೆಗಿನ ದಾಖಲೆಯಾಗಿತ್ತು.
ಅಭಿಷೇಕ್ ಶರ್ಮಾ
40 ಎಸೆತಗಳಲ್ಲಿ ಶತಕ...
40 ಎಸೆತಗಳಲ್ಲಿ ಅಭಿಷೇಕ್ ಶತಕ ಸಾಧನೆ ಮಾಡಿದರು. ಇದು ಐಪಿಎಲ್‌ನಲ್ಲಿ ದಾಖಲಾದ ಆರನೇ ವೇಗದ ಶತಕವಾಗಿದೆ.
10 ಸಿಕ್ಸರ್...
ಅಭಿಷೇಕ್ ಇನಿಂಗ್ಸ್‌ನಲ್ಲಿ 10 ಸಿಕ್ಸರ್‌ಗಳು ಸೇರಿದ್ದವು. ಇದು ಐಪಿಎಲ್ ಇನಿಂಗ್ಸ್‌ವೊಂದರಲ್ಲಿ ಎಸ್‌ಆರ್‌ಎಚ್ ಬ್ಯಾಟರ್‌ನಿಂದ ದಾಖಲಾದ ಗರಿಷ್ಠ ಸಿಕ್ಸರ್‌ಗಳ ದಾಖಲೆಯಾಗಿದೆ.
3ನೇ ಸಲ 40ಕ್ಕೂ ಕಡಿಮೆ ಎಸೆತಗಳಲ್ಲಿ ಶತಕ ಸಾಧನೆ...
ಟಿ20 ಕ್ರಿಕೆಟ್‌ನಲ್ಲಿ ಮೂರನೇ ಸಲ 40 ಅಥವಾ ಅದಕ್ಕೂ ಕಡಿಮೆ ಎಸೆತಗಳಲ್ಲಿ ಅಭಿಷೇಕ್ ಶತಕದ ಸಾಧನೆ ಮಾಡಿದ್ದಾರೆ. 2024ರಲ್ಲಿ ಮೇಘಾಲಯ ವಿರುದ್ಧ 28 ಎಸೆತ ಹಾಗೂ 2025ರಲ್ಲೇ ಇಂಗ್ಲೆಂಡ್ ವಿರುದ್ಧ 37 ಎಸೆತಗಳಲ್ಲಿ ಶತಕ ಸಾಧನೆ ಮಾಡಿದ್ದರು.
75 ರನ್ ಬಿಟ್ಟುಕೊಟ್ಟ ಶಮಿ...
ಎಸ್‌ಆರ್‌ಎಚ್ ವೇಗಿ ಮೊಹಮ್ಮದ್ ಶಮಿ ತಮ್ಮ ನಾಲ್ಕು ಓವರ್‌ಗಳಲ್ಲಿ 75 ರನ್ ಬಿಟ್ಟು ಕೊಟ್ಟು ದುಬಾರಿಯೆನಿಸಿದರು. ಇದು ಐಪಿಎಲ್‌ನ ಎರಡನೇ ದುಬಾರಿ ಸ್ಪೆಲ್ ಆಗಿದೆ. ಪ್ರಸಕ್ತ ಸಾಲಿನಲ್ಲೇ 76 ರನ್ ಬಿಟ್ಟುಕೊಡುವ ಮೂಲಕ ಜೋಫ್ರಾ ಆರ್ಚರ್ ಐಪಿಎಲ್‌ನ ದುಬಾರಿ ಬೌಲರ್ ಎನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.