ಹೈದರಾಬಾದ್: ಶಾರ್ದೂಲ್ ಠಾಕೂರ್ (34ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ಬಳಿಕ ನಿಕೋಲಸ್ ಪೂರನ್ (70; 26ಎ, 4x6, 6x6) ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ಗುರುವಾರ ಐಪಿಎಲ್‌ನಲ್ಲಿ ಮೊದಲ ಜಯ ದಾಖಲಿಸಿತು.
ಉಪ್ಪಳದ ರಾಜೀವ್‌ಗಾಂಧಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಿಷಭ್ ಪಂತ್ ನಾಯಕತ್ವದ ಲಖನೌ ತಂಡವು ಐದು ವಿಕೆಟ್‌ಗಳಿಂದ ಸನ್‌ರೈಸರ್ಸ್ ತಂಡವನ್ನು ಅವರ ತವರಿನಲ್ಲೇ ಸೋಲಿಸಿತು. ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಒಂದು ವಿಕೆಟ್‌ನಿಂದ ಪರಾಭವಗೊಂಡಿದ್ದ ಲಖನೌ ತಂಡ ಗೆಲುವಿನ ಹಳಿಗೆ ಮರಳಿತು.
ರನ್‌ಗಳ ಹೊಳೆ ಹರಿಸಿ ಬೌಲರ್ ಗಳನ್ನು ದಂಡಿಸುವುದನ್ನೇ ‘ಹವ್ಯಾಸ’ ಮಾಡಿಕೊಂಡಿರುವ ಸನ್‌ರೈಸರ್ಸ್ ಈ ಪಂದ್ಯದಲ್ಲೂ ಮೊದಲು ಬ್ಯಾಟಿಂಗ್ ಇಳಿಸಲ್ಪಟ್ಟಿತ್ತು. ಪಂತ್ ನಿರ್ಧಾರವನ್ನು ಸಮರ್ಥಿಸುವಂತೆ ಲಖನೌ ತಂಡದ ಮಧ್ಯಮವೇಗಿ ಶಾರ್ದೂಲ್ ಎದುರಾಳಿ ತಂಡವನ್ನು ಕಟ್ಟಿಹಾಕಿದರು. ಆದರೂ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 190 ರನ್‌ಗಳ ಉತ್ತಮ ಕಲೆ ಹಾಕಿತು.
ಸವಾಲಿನ ಗುರಿಯನ್ನು ಬೆನ್ನತ್ತಿದ ಲಖನೌ ತಂಡವು ಆರಂಭದಲ್ಲೇ ಏಡನ್ ಮರ್ಕರಂ (1 ರನ್) ಅವರನ್ನು ಕಳೆದುಕೊಂಡಿತು. ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ (52;31ಎ, 4x7, 6x2) ಮತ್ತು ಪೂರನ್ ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ 116 ರನ್ (43ಎ) ಸೇರಿಸಿ ತಂಡದ ಗೆಲುವಿಗೆ ಉತ್ತಮ ಅಡಿಪಾಯ ಹಾಕಿದರು.
ನಂತರ 44 ರನ್‌ಗಳ ಅಂತರದಲ್ಲಿ ನಾಲ್ಕು ವಿಕೆಟ್‌ಗಳು ಉರುಳಿದರೂ ಡೇವಿಡ್ ಮಿಲ್ಲರ್ (ಔಟಾಗದೇ 13;7ಎ) ಮತ್ತು ಅಬ್ದುಲ್ ಸಮದ್ (ಔಟಾಗದೇ 22;8ಎ) ಅವರು ಮುರಿಯದ ಆರನೇ ವಿಕೆಟ್ ಜೊತೆಯಾಟದಲ್ಲಿ 29 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ‘ದುಬಾರಿ’ ಆಟಗಾರ ಪಂತ್ (15) ಈ ಪಂದ್ಯದಲ್ಲೂ ನಿರಾಸೆ ಮೂಡಿಸಿದರು. ಇನ್ನೂ 23 ಎಸೆತ ಬಾಕಿ ಇರುವಂತೆ 5 ವಿಕೆಟ್‌ಗೆ 193 ರನ್ ಗಳಿಸಿ ಲಖನೌ ತಂಡ ಜಯ ಸಾಧಿಸಿತು.
ಹೆಡ್ ಬೀಸಾಟ:
ಯಥಾಪ್ರಕಾರ ಹೈದರಾಬಾದ್‌ನ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ (47;28ಎ, 4X5, 6X3) ಬೀಸಾಟ ಶುರುವಿಟ್ಟುಕೊಂಡರು. ಇನ್ನೊಂದು ಬದಿಯಲ್ಲಿ ಒಂದು ಬೌಂಡರಿ ಹೊಡೆದು ಆಟ ಆರಂಭಿಸಿದ ಅಭಿಷೇಕ್ ಶರ್ಮಾ ಕೂಡ ಹೆಡ್ ಜೊತೆ ಮಿಂಚುವ ಭರವಸೆ ಮೂಡಿಸಿದ್ದರು. ಅದರೆ ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಠಾಕೂರ್ ಎಸೆತವನ್ನು ಆಡುವ ಭರದಲ್ಲಿ ಅಭಿಷೇಕ್ ಅವರು ನಿಕೊಲಸ್ ಪೂರನ್‌ಗೆ ಕ್ಯಾಚ್ ಆದರು. ನಂತರದ ಎಸೆತದಲ್ಲಿ ಇಶಾನ್ ಕಿಶನ್ ಅವರ ಕ್ಯಾಚ್ ಪಡೆಯುವಲ್ಲಿ ವಿಕೆಟ್‌ಕೀಪರ್ ಪಂತ್ ಯಶಸ್ವಿಯಾದರು. ಮೊದಲ ಪಂದ್ಯದಲ್ಲಿ ಇಶಾನ್ ಶತಕ ಗಳಿಸಿದ್ದರು.
ಸತತ ಎರಡು ವಿಕೆಟ್ ಪತನದಿಂದ ಅಂಜದ ಹೆಡ್ ಮತ್ತು ಅವರೊಂದಿಗೆ ಸೇರಿಕೊಂಡ ನಿತೀಶ್ ರೆಡ್ಡಿ (32; 28ಎ, 4X2) ರನ್ ಗಳಿಕೆಗೆ ಒತ್ತು ನೀಡಿದರು. 3ನೇ ವಿಕೆಟ್ ಜೊತೆಯಾಟದಲ್ಲಿ 61 ರನ್ ಸೇರಿಸಿದರು. ಮಧ್ಯಮವೇಗಿ ಪ್ರಿನ್ಸ್ ಯಾದವ್ ಎಸೆತವನ್ನು ಬೀಸಿಹೊಡೆಯುವ ಯತ್ನದಲ್ಲಿ ಹೆಡ್ ಕ್ಲೀನ್‌ಬೌಲ್ಡ್ ಆದರು. ಹೆನ್ರಿಚ್ ಕ್ಲಾಸ್ (26; 17ಎ, 4X2, 6X1), ಹೊಸ ಪ್ರತಿಭೆ ಅನಿಕೇತ್ ವರ್ಮಾ (36; 13ಎಸೆತ) ತಂಡದ ಮೊತ್ತ ಹೆಚ್ಚಿಸುವ ಪ್ರಯತ್ನ ಮಾಡಿದರು. ಅದರಲ್ಲೂ ಅನಿಕೇತ್ 5 ಸಿಕ್ಸರ್‌ಗಳನ್ನು ಸಿಡಿಸಿ
ಗಮನ ಸೆಳೆದರು.
ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 286 ರನ್ ಗಳಿಸಿದ್ದ ಸನ್‌ರೈಸರ್ಸ್ ತಂಡವು ಮತ್ತೆ ದ್ವಿಶತಕದ ಗಡಿ ದಾಟುವ ಭರವಸೆ ಮೂಡಿಸಿತ್ತು. ಆದರೆ ಕೊನೆಯ ಆರು ಓವರ್‌ಗಳಲ್ಲಿ 5 ವಿಕೆಟ್‌ಗಳು ಪತನಗೊಂಡವು.
ಈ ನಡುವೆ ನಾಯಕ ಪ್ಯಾಟ್ ಕಮಿನ್ಸ್ ಕೇವಲ 4 ಎಸೆತಗಳಲ್ಲಿ 18 ರನ್ ಗಳಿಸಿದರು. 450ರ ಸ್ಟ್ರೈಕ್ ರೇಟ್‌ನಲ್ಲಿ ಅವರು ಈ ರನ್‌ಗಳನ್ನು ಗಳಿಸಿದರು. ಅದರಲ್ಲಿ 3 ಭರ್ಜರಿ ಸಿಕ್ಸರ್ ಗಳಿದ್ದವು.
ಸಂಕ್ಷಿಪ್ತ ಸ್ಕೋರು:
ಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 190 (ಟ್ರಾವಿಸ್ ಹೆಡ್ 47, ನಿತೀಶ್ ರೆಡ್ಡಿ 32, ಹೆನ್ರಿಚ್ ಕ್ಲಾಸೆನ್ 26, ಅನಿಕೇತ್ ವರ್ಮಾ 36, ಪ್ಯಾಟ್ ಕಮಿನ್ಸ್ 18, ಹರ್ಷಲ್ ಪಟೇಲ್ ಔಟಾಗದೇ 12, ಶಾರ್ದೂಲ್ ಠಾಕೂರ್ 34ಕ್ಕೆ4).
ಲಖನೌ ಸೂಪರ್ ಜೈಂಟ್ಸ್: 16.1 ಓವರ್‌ಗಳಲ್ಲಿ 5 ವಿಕೆಟ್‌ಗೆ 193 (ಮಿಚೆಲ್ ಮಾರ್ಷ್ 52, ನಿಕೋಲಸ್ ಪೂರನ್ 70, ಅಬ್ದುಲ್ ಸಮದ್ ಔಟಾಗದೇ 22; ಪ್ಯಾಟ್ ಕಮಿನ್ಸ್ 29ಕ್ಕೆ 2, ಹರ್ಷಲ್ ಪಟೇಲ್ 28ಕ್ಕೆ 1).
ಫಲಿತಾಂಶ: ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ 5 ವಿಕೆಟ್‌ಗಳ ಗೆಲುವು.
ಪಂದ್ಯದ ಆಟಗಾರ: ಶಾರ್ದೂಲ್ ಠಾಕೂರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.