ಹೈದರಾಬಾದ್: ಟ್ರೆಂಟ್ ಬೌಲ್ಟ್ ಅವರ ಚುರುಕಿನ ದಾಳಿ ಮತ್ತು ‘ಹಿಟ್‌ಮ್ಯಾನ್’ ರೋಹಿತ್ ಶರ್ಮಾ ಅವರ ಅಬ್ಬರದ ಅರ್ಧಶತಕದ ಬಲದಿಂದ ಮುಂಬೈ ಇಂಡಿಯನ್ಸ್ ಜಯಿಸಿತು. ತಂಡಕ್ಕೆ ಇದು ಸತತ ನಾಲ್ಕನೇ ಗೆಲುವು.
ಉಪ್ಪಳದ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮುಂಬೈ ತಂಡವು 7 ವಿಕೆಟ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದಿತು.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟ್ರೆಂಟ್ (26ಕ್ಕೆ4) ಪರಿಣಾಮಕಾರಿ ದಾಳಿಯಿಂದಾಗಿ ಆತಿಥೇಯ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 143 ರನ್ ಗಳಿಸಿತು. ದೀಪಕ್ ಚಾಹರ್ (12ಕ್ಕೆ2) ಕೂಡ ಬೌಲ್ಟ್‌ಗೆ ಉತ್ತಮ ಜೊತೆ ನೀಡಿದರು. ಮುಂಬೈ ತಂಡವು 15.4 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 146 ರನ್ ಗಳಿಸಿತು.
ವೇಗದ ಬೌಲರ್‌ಗಳ ದಾಳಿಯಿಂದಾಗಿ ಸನ್‌ರೈಸರ್ಸ್ ತಂಡವು 35 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಹೆನ್ರಿಚ್ ಕ್ಲಾಸನ್ (71; 44ಎ, 4X9, 6X2) ಮತ್ತು ಅಭಿನವ್ ಮನೋಹರ್ (43; 37ಎ, 4X2, 6X3) ಅವರು ಆರನೇ ವಿಕೆಟ್ ಜೊತೆಯಾಟದಲ್ಲಿ 99 ರನ್ ಸೇರಿಸಿದರು. ಕ್ಲಾಸನ್ ವಿಕೆಟ್ ಅನ್ನು 19ನೇ ಓವರ್‌ನಲ್ಲಿ ಗಳಿಸಿದ ಜಸ್‌ಪ್ರೀತ್ ಬೂಮ್ರಾ ಸಂಭ್ರಮಿಸಿದರು. ಟಿ20 ಕ್ರಿಕೆಟ್‌ನಲ್ಲಿ ಬೂಮ್ರಾ ಒಟ್ಟು 300 ವಿಕೆಟ್ ಪಡೆದ ಸಾಧನೆ ಮಾಡಿದರು. ಕೊನೆಯ ಓವರ್‌ನಲ್ಲಿ ಅಭಿನವ್ ಮನೋಹರ್ ಅವರು ಹಿಟ್ ವಿಕೆಟ್ ಆದರು.
ಗುರಿ ಬೆನ್ನಟ್ಟಿದ ಮುಂಬೈ ತಂಡದ ಆರಂಭಿಕ ಆಟಗಾರ ರಿಯಾನ್ ರಿಕೆಲ್ಟನ್ (11 ರನ್) ಅವರ ವಿಕೆಟ್ ಅನ್ನು ಜಯದೇವ್ ಉನದ್ಕತ್ ಗಳಿಸಿದರು. ಇನಿಂಗ್ಸ್ ಹೊಣೆ ಹೊತ್ತ ರೋಹಿತ್ (70; 46ಎ, 4X8, 6X3) ಮತ್ತು ವಿಲ್ ಜಾಕ್ಸ್ (22; 19ಎ) ಎರಡನೇ ವಿಕೆಟ್ ಜೊತೆಯಾಟದಲ್ಲಿ 64 ರನ್ ಸೇರಿಸಿದರು. 10ನೇ ಓವರ್‌ನಲ್ಲಿ ವಿಲ್ ಔಟಾದ ನಂತರ ಸೂರ್ಯಕುಮಾರ್ ಯಾದವ್ ಕೂಡ 19 ಎಸೆತಗಳಲ್ಲಿ 40 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಸಂಕ್ಷಿಪ್ತ ಸ್ಕೋರು:
ಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ 8ಕ್ಕೆ143 (ಹೆನ್ರಿಚ್ ಕ್ಲಾಸನ್ 71, ಅಭಿನವ್ ಮನೋಹರ್ 43, ಟ್ರೆಂಟ್ ಬೌಲ್ಟ್ 26ಕ್ಕೆ4, ದೀಪಕ್ ಚಾಹರ್ 12ಕ್ಕೆ2, ಜಸ್‌ಪ್ರೀತ್ ಬೂಮ್ರಾ 39ಕ್ಕೆ1)
ಮುಂಬೈ ಇಂಡಿಯನ್ಸ್: 15.4 ಓವರ್‌ಗಳಲ್ಲಿ 3ಕ್ಕೆ146 (ರೋಹಿತ್ ಶರ್ಮಾ 70, ವಿಲ್ ಜ್ಯಾಕ್ಸ್ 22, ಸೂರ್ಯಕುಮಾರ್ ಯಾದವ್ ಔಟಾಗದೇ 40, ಜಯದೇವ್ ಉನದ್ಕತ್ 25ಕ್ಕೆ1, ಇಶಾನ್ ಮಾಲಿಂಗ 33ಕ್ಕೆ1) ಪಂದ್ಯದ ಆಟಗಾರ :ಟ್ರೆಂಟ್ ಬೌಲ್ಟ್.
ಕಪ್ಪು ಪಟ್ಟಿ ಧರಿಸಿದ ಆಟಗಾರರು...
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಗೌರವಾರ್ಥ ಇಂದು ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಆಟಗಾರರು ತಮ್ಮ ತೋಳುಗಳಿಗೆ ಕಪ್ಪು ಪಟ್ಟಿ ಧರಿಸಲಿದ್ದರು.
ಈ ಪಂದ್ಯದಲ್ಲಿ ಚಿಯರ್ ಲೀಡರ್ಸ್‌ಗಳ ನೃತ್ಯ ಇರುವುದಿಲ್ಲ. ಹಾಗೆಯೇ ಸಿಡಿಮದ್ದಿನ ಪ್ರದರ್ಶನವನ್ನು ಕೈಬಿಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.