ಅಭಿಷೇಕ್ ಶರ್ಮಾ
ಹೈದರಾಬಾದ್: ಈ ಋತುವಿನಲ್ಲಿ ಮಂಕಾಗಿದ್ದ ಅಭಿಷೇಕ್ ಶರ್ಮಾ (141, 55 ಎಸೆತ) ಅವರು ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಶನಿವಾರ ಸಿಕ್ಸರ್, ಬೌಂಡರಿಗಳ ಮಳೆಗರೆದು ಅಮೋಘ ಶತಕ ಪೋಣಿಸಿದರು. ಪಂಜಾಬ್ ಕಿಂಗ್ಸ್ ತಂಡದ 246 ರನ್‌ಗಳ ದೊಡ್ಡ ಗುರಿಯನ್ನು ಲೆಕಕ್ಕೆ ಇಲ್ಲದಂತೆ ಎದುರಿಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ನಿರಾಯಾಸ ಜಯ ಪಡೆಯಲು ಅವರ ಪರಾಕ್ರಮವೇ ಕಾರಣವಾಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ನಾಯಕ ಶ್ರೇಯಸ್ ಅಯ್ಯರ್ (82, 36ಎ, 4x6, 6x6) ಅವರ ಮಿಂಚಿನ ಆಟದ ನೆರವಿನಿಂದ 6 ವಿಕೆಟ್‌ಗೆ 245 ರನ್‌ಗಳ ದೊಡ್ಡ ಮೊತ್ತ ದಾಖಲಿಸಿತು. ಆದರೆ ಬ್ಯಾಟರ್‌ಗಳಿಗೆ ನೆರವಾಗುತ್ತಿದ್ದ ಪಿಚ್‌ನಲ್ಲಿ ಸನ್‌ರೈಸರ್ಸ್ ತಂಡ ಇನ್ನೂ 9 ಎಸೆತಗಳಿರುವಂತೆ 2 ವಿಕೆಟ್‌ಗೆ 247 ರನ್ ಹೊಡೆದು ತವರಿನ ಪ್ರೇಕ್ಷಕರು ಸಂಭ್ರಮ ಪಡುವಂತೆ ಮಾಡಿತು. ಸತತ ನಾಲ್ಕು ಸೋಲುಗಳಿಂದ ಕಂಗಾಲಾಗಿದ್ದ ಕಳೆದ ಬಾರಿಯ ರನ್ನರ್ ಅಪ್ ತಂಡ ಈ ಮೂಲಕ ಗೆಲುವಿನ ಹಳಿಗೆ ಮರಳಿತು.
ಅಭಿಷೇಕ್ ಮೊದಲ ವಿಕೆಟ್‌ಗೆ ಟ್ರಾವಿಸ್ ಹೆಡ್ (66, 37ಎಸೆತ)ಅವರೊಡನೆ 171 ರನ್‌ಗಳ ಭರ್ಜರಿ ಜೊತೆಯಾಟವಾಡಿದರು. ಅಭಿಷೇಕ್ ಆಟದಲ್ಲಿ 14 ಬೌಂಡರಿಗಳು ಮತ್ತು 10 ಭರ್ಜರಿ ಸಿಕ್ಸರ್‌ಗಳಿದ್ದವು. ಅವರು ಐಪಿಎಲ್ ಇತಿಹಾಸದಲ್ಲಿ ಮೂರನೇ ಗರಿಷ್ಠ ವೈಯಕ್ತಿಕ ಮೊತ್ತ ದಾಖಲಿಸಿದರು.
ಹೆಡ್ ನಿರ್ಗಮನದ ನಂತರ ಅಭಿಷೇಕ್ ಎರಡನೇ ವಿಕೆಟ್‌ಗೆ ಹೆನ್ರಿಚ್ ಕ್ಲಾಸೆನ್ (ಔಟಾಗದೇ 21) ಜೊತೆ 51 ರನ್ ಸೇರಿಸಿ ತಂಡ ಗೆಲುವಿನ ಹಾದಿಯಲ್ಲೇ ಮುಂದುವರಿಯುವಂತೆ ನೋಡಿಕೊಂಡರು. ಪಂಜಾಬ್‌ನ ಎಂಟು ಮಂದಿ ಬೌಲರ್‌ಗಳು ಈ ಪಂದ್ಯದಲ್ಲಿ ಬೌಲಿಂಗ್ ಮಾಡಿದರು!
ಮಿಂಚಿದ ಅಯ್ಯರ್: ಇದಕ್ಕೆ ಮೊದಲು ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಪಂಜಾಬ್ ಕಿಂಗ್ಸ್ ತಂಡ ಸವಾಲಿನ ಮೊತ್ತ ಗಳಿಸಿತ್ತು. ಆರಂಭ ಆಟಗಾರರಾದ ಪ್ರಿಯಾಂಶ್ ಆರ್ಯ (36;13ಎ, 4x2, 6x4) ಮತ್ತು ಪ್ರಭಸಿಮ್ರನ್ ಸಿಂಗ್ (42;23ಎ, 4x7, 6x1) ಅವರು ಮೊದಲ ವಿಕೆಟ್‌ಗೆ ಬಿರುಸಿನ 66 (24ಎ) ರನ್ ಸೇರಿಸಿದ್ದರು.
ಸನ್‌ರೈಸರ್ಸ್‌ನ ಯಶಸ್ವಿ ಬೌಲರ್ ಹರ್ಷಲ್ ಪಟೇಲ್ (42ಕ್ಕೆ4) ಅವರು ಪ್ರಿಯಾಂಶ್ ಆರ್ಯ ವಿಕೆಟ್ ಪಡೆದು ಜೊತೆಯಾಟ ಮುರಿದರು. ಇನ್ನೊಂದೆಡೆ ಅಯ್ಯರ್ ರನ್ ವೇಗ ಏರುಗತಿಯಲ್ಲೇ ಇರುವಂತೆ ನೋಡಿಕೊಂಡರು. ಹೀಗಾಗಿ ಪವರ್‌ಪ್ಲೇನಲ್ಲಿ ಪಂಜಾಬ್ ತಂಡ 1 ವಿಕೆಟ್‌ಗೆ 89 ರನ್ ಗಳಿಸಿತು.
ಸ್ಕೋರುಗಳು: ಪಂಜಾಬ್ ಕಿಂಗ್ಸ್: 20 ಓವರುಗಳಲ್ಲಿ 6ಕ್ಕೆ 245 (ಪ್ರಿಯಾಂಶ್ ಆರ್ಯ 36, ಪ್ರಭಸಿಮ್ರನ್ ಸಿಂಗ್ 42, ಶ್ರೇಯಸ್ ಅಯ್ಯರ್ 82, ಮಾರ್ಕಸ್ ಸ್ಟೊಯಿನಿಸ್ ಔಟಾಗದೇ 34; ಹರ್ಷಲ್ ಪಟೇಲ್ 42ಕ್ಕೆ4, ಇಶಾನ್ ಮಾಲಿಂಗ 45ಕ್ಕೆ2); ಸನ್‌ರೈಸರ್ಸ್ ಹೈದರಾಬಾದ್: 18.3 ಓವರುಗಳಲ್ಲಿ 2ಕ್ಕೆ 247 (ಟ್ರಾವಿಸ್ ಹೆಡ್ 66, ಅಭಿಷೇಕ್ ಶರ್ಮಾ 141, ಹೆನ್ರಿಚ್ ಕ್ಲಾಸೆನ್ ಔಟಾಗದೇ 21)
ಪಂದ್ಯದ ಆಟಗಾರ: ಅಭಿಷೇಕ್ ಶರ್ಮಾ.
ಟಾಸ್ ಗೆದ್ದ ಪಂಜಾಬ್ ಬ್ಯಾಟಿಂಗ್ ಆಯ್ಕೆ...
2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಇಂದು ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಪಂಜಾಬ್ ಕಿಂಗ್ಸ್ ತಂಡದ ಸವಾಲನ್ನು ಎದುರಿಸುತ್ತಿದೆ.
ಈ ಪಂದ್ಯ ಹೈದರಾಬಾದ್‌ನ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಕೊನೆಯ ಸ್ಥಾನದಲ್ಲಿ ಹೈದರಾಬಾದ್...
ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ರನ್ ಹೊಳೆ ಹರಿಸಿ ಎದುರಾಳಿಗಳನ್ನು ನಡುಗಿಸುವ ಸನ್‌ರೈಸರ್ಸ್ ಹೈದರಾಬಾದ್ ತಂಡವು ಈ ಬಾರಿ ಸತತ ನಾಲ್ಕು ಸೋಲುಗಳಿಂದ ಬಸವಳಿದಿದೆ.
ಹೈದರಾಬಾದ್ ತಂಡವು ಒಟ್ಟು ಐದು ಪಂದ್ಯಗಳನ್ನು ಆಡಿದೆ. ಗೆದ್ದಿದ್ದು ಮೊದಲ ಪಂದ್ಯದಲ್ಲಿ ಮಾತ್ರ. ಅಲ್ಲದೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಮತ್ತೊಂದೆಡೆ ಎಲ್ಲ ವಿಭಾಗಗಳಲ್ಲಿಯೂ ಉತ್ತಮವಾಗಿರುವ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಆಡಿರುವ 4 ಪಂದ್ಯಗಳಲ್ಲಿ 3 ಗೆದ್ದು, ಒಂದರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.