ADVERTISEMENT

IPL 2025 | ತಿಲಕ್‌ ವರ್ಮಾ ರಿಟೈರ್ಡ್‌ ಔಟ್‌; ಸೂರ್ಯಕುಮಾರ್ ಅಸಮಾಧಾನ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಏಪ್ರಿಲ್ 2025, 11:08 IST
Last Updated 5 ಏಪ್ರಿಲ್ 2025, 11:08 IST
<div class="paragraphs"><p>ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್</p></div>

ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್

   

ಲಖನೌ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 12 ರನ್ ಅಂತರದ ಸೋಲಿಗೆ ಶರಣಾಯಿತು.

ಈ ಪಂದ್ಯದಲ್ಲಿ ಎಡಗೈ ಬ್ಯಾಟರ್ ತಿಲಕ್ ವರ್ಮಾ ಅವರನ್ನು 'ರಿಟೈರ್ಡ್ ಔಟ್' ಮಾಡುವ ಮುಂಬೈ ಇಂಡಿಯನ್ಸ್ ತಂಡದ ನಿರ್ಧಾರವು ಭಿನ್ನಮತಕ್ಕೆ ಕಾರಣವಾಯಿತು.

ADVERTISEMENT

ಡಗೌಟ್‌ನಲ್ಲಿ ಕುಳಿತಿದ್ದ ಮುಂಬೈ ತಂಡದ ಆಟಗಾರ ಸೂರ್ಯಕುಮಾರ್ ಯಾದವ್ ತಮ್ಮ ಅಸಮಾಧಾನವನ್ನು ತೋಡಿಕೊಂಡರು. ಈ ಸಂದರ್ಭದಲ್ಲಿ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಅವರು ಸೂರ್ಯಕುಮಾರ್ ಅವರಿಗೆ ಸ್ಪಷ್ಟನೆ ನೀಡುತ್ತಿರುವ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಏನಿದು ಘಟನೆ?

ಮೊದಲು ಬ್ಯಾಟಿಂಗ್ ನಡೆಸಿದ ಲಖನೌ ಎಂಟು ವಿಕೆಟ್ ನಷ್ಟಕ್ಕೆ 203 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ ದಿಟ್ಟ ಹೋರಾಟವನ್ನು ನೀಡಿತು.

ಆದರೆ ಐದನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದಿದ್ದ ತಿಲಕ್ ವರ್ಮಾ ಬಿರುಸಾಗಿ ರನ್ ಗಳಿಸಲು ವಿಫಲರಾದರು. 23 ಎಸೆತಗಳಲ್ಲಿ ಎರಡು ಬೌಂಡರಿಗಳ ನೆರವಿನಿಂದ 25 ರನ್ ಗಳಿಸಿದರು.

ಮುಂಬೈ ಗೆಲುವಿಗೆ ಕೊನೆಯ ಏಳು ಎಸೆತಗಳಲ್ಲಿ 24 ರನ್ ಬೇಕಾಗಿತ್ತು. ಈ ಸಂದರ್ಭದಲ್ಲಿ ತಿಲಕ್ ವರ್ಮಾ ಅವರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಮುಂಬೈ ಮ್ಯಾನೇಜ್‌ಮೆಂಟ್ ನಿರ್ಧರಿಸಿತು. ಪರಿಣಾಮ ತಿಲಕ್ ವರ್ಮಾ ತಲೆ ತಗ್ಗಿಸುತ್ತಾ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ಈ ವೇಳೆ ವಿಕೆಟ್‌ನ ಇನ್ನೊಂದು ತುದಿಯಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಇದ್ದರು. ಬಳಿಕ ಕ್ರೀಸಿಗಿಳಿದ ಮಿಚೆಲ್ ಸ್ನಾಂಟನರ್ ಅವರಿಂದಲೂ ಹೆಚ್ಚೇನು ಮಾಡಲು ಸಾಧ್ಯವಾಗಲಿಲ್ಲ. ಎರಡು ಎಸೆತಗಳಲ್ಲಿ ಅಷ್ಟೇ ರನ್ ಗಳಿಸಿದರು.

ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ 16 ಎಸೆತಗಳಲ್ಲಿ 28 ರನ್ ಗಳಿಸಿ ಔಟಾಗದೆ ಉಳಿದರು. ಅಂತಿಮವಾಗಿ ಮುಂಬೈ 12 ರನ್‌ಗಳ ಅಂತರದಿಂದ ಸೋಲನುಭವಿಸಿತು.

ಏತನ್ಮಧ್ಯೆ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಅವರು ತಿಲಕ್ ವರ್ಮಾ ಅವರನ್ನು ರಿಟೈರ್ಡ್ ಔಟ್ ಮಾಡಿರುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. 'ಇದು ತಂಡದ ರಣನೀತಿಯ ಭಾಗವಾಗಿತ್ತು. ಕ್ರಿಕೆಟ್‌ನಲ್ಲಿ ಇವೆಲ್ಲ ಸಾಮಾನ್ಯ. ಆ ಸನ್ನಿವೇಶದಲ್ಲಿ ಅಗತ್ಯವೆನಿಸಿತ್ತು' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.