ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಬೀಸಿದ್ದು ಹೀಗೆ
ಪಿಟಿಐ ಚಿತ್ರ
ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ 31 ರನ್ ಬಾರಿಸಿದ ಅವರು, ಚೆನ್ನೈ ವಿರುದ್ಧ ಗಳಿಸಿದ ರನ್ ಸಂಖ್ಯೆಯನ್ನು 1,084ಕ್ಕೆ ಏರಿಸಿಕೊಂಡಿದ್ದಾರೆ.
ಅಂದಹಾಗೆ, ಅವರು ಈವರೆಗೆ 34 ಪಂದ್ಯಗಳ 33 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಅಜೇಯ 90 ರನ್, ಸಿಎಸ್‌ಕೆ ಎದುರು ಅವರ ಗರಿಷ್ಠ ಮೊತ್ತವಾಗಿದ್ದು, 9 ಅರ್ಧಶತಕ ಸಿಡಿಸಿದ್ದಾರೆ.
ಶುಕ್ರವಾರದ ಪಂದ್ಯಕ್ಕೂ ಮುನ್ನ ಸಿಎಸ್‌ಕೆ ಎದುರು ಹೆಚ್ಚು ರನ್ ಗಳಿಸಿದ ದಾಖಲೆ ಶಿಖರ್ ಧವನ್ ಅವರ ಹೆಸರಲ್ಲಿತ್ತು. ಅವರು, 29 ಪಂದ್ಯಗಳಲ್ಲಿ 1,054 ರನ್ ಗಳಿಸಿದ್ದಾರೆ. 1 ಶತಕ ಹಾಗೂ 8 ಅರ್ಧಶತಕ ಅವರ ಬ್ಯಾಟ್‌ನಿಂದ ಬಂದಿವೆ. ಸದ್ಯ ಇವರಿಬ್ಬರೇ ಸಿಎಸ್‌ಕೆ ಎದುರು ಸಾವಿರ ರನ್ ಕಲೆಹಾಕಿದ ಬ್ಯಾಟರ್‌ಗಳು.
ಉಳಿದಂತೆ ರೋಹಿತ್ ಶರ್ಮಾ (896 ರನ್), ದಿನೇಶ್ ಕಾರ್ತಿಕ್ (727 ರನ್) ಹಾಗೂ ಡೇವಿಡ್ ವಾರ್ನರ್ (696 ರನ್) ನಂತರದ ಸ್ಥಾನಗಳಲ್ಲಿ ಇದ್ದಾರೆ.
ನಾಲ್ಕು ತಂಡಗಳ ವಿರುದ್ಧ ಸಾವಿರ ರನ್
ಕ್ರಿಕೆಟ್ ಲೋಕದ 'ಕಿಂಗ್' ಖ್ಯಾತಿಯ ವಿರಾಟ್ ಕೊಹ್ಲಿ, ಐಪಿಎಲ್‌ನಲ್ಲಿ ಆಡುವ ನಾಲ್ಕು ತಂಡಗಳ ವಿರುದ್ಧ ಸಾವಿರಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಆ ಮೂಲಕ, ಈ ಸಾಧನೆ ಮಾಡಿದ ಏಕೈಕ ಆಟಗಾರ ಎನಿಸಿದ್ದಾರೆ.
ಸಿಎಸ್‌ಕೆ ವಿರುದ್ಧವಷ್ಟೇ ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ (29 ಪಂದ್ಯ, 1,057 ರನ್), ಕೋಲ್ಕತ್ತ ನೈಟ್ ರೈಡರ್ಸ್ (35 ಪಂದ್ಯ, 1,021 ರನ್) ಹಾಗೂ ಪಂಜಾಬ್ ಕಿಂಗ್ಸ್ (32 ಪಂದ್ಯ, 1,030 ರನ್) ವಿರುದ್ಧವೂ ಸಹಸ್ರ ರನ್ ಬಾರಿಸಿದ್ದಾರೆ.
ಡೇವಿಡ್ ವಾರ್ನರ್ (vs ಕೆಕೆಆರ್, ಪಂಜಾಬ್ ಕಿಂಗ್ಸ್) ಮತ್ತು ರೋಹಿತ್ ಶರ್ಮಾ (vs ಕೆಕೆಆರ್, ಡೆಲ್ಲಿ ಕ್ಯಾಪಿಟಲ್ಸ್) ತಲಾ ಎರಡು ತಂಡಗಳ ವಿರುದ್ಧ ಸಾವಿರ ರನ್ ಗಳಿಸಿದ್ದಾರೆ.
17 ವರ್ಷದ ಬಳಿಕ ಜಯ
ಶುಕ್ರವಾರ ರಾತ್ರಿ ಸಿಎಸ್‌ಕೆ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 196 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಸಿಎಸ್‌ಕೆ, 8 ವಿಕೆಟ್‌ಗೆ 146 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದು ಚೆನ್ನೈ ಪಿಚ್‌ನಲ್ಲಿ ಆರ್‌ಸಿಬಿಗೆ ದೊರೆತ ಎರಡನೇ ಜಯ.
ಐಪಿಎಲ್‌ನ ಮೊದಲ ಆವೃತ್ತಿಯ (2008ರ) ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಗೆದ್ದಿದ್ದ ಆರ್‌ಸಿಬಿ, ನಂತರ ಆಡಿದ ಸತತ 8 ಪಂದ್ಯಗಳಲ್ಲಿ ಸೋಲು ಕಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.