ADVERTISEMENT

IPL 2025: ಸುದರ್ಶನ್-ಪ್ರಸಿದ್ಧ ಕೃಷ್ಣ ಬಲ; ಟೈಟನ್ಸ್‌ಗೆ ನಾಲ್ಕನೇ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಏಪ್ರಿಲ್ 2025, 16:04 IST
Last Updated 9 ಏಪ್ರಿಲ್ 2025, 16:04 IST
<div class="paragraphs"><p>ಗುಜರಾತ್ ಟೈಟನ್ಸ್ ತಂಡದ ಎಂ. ಶಾರೂಕ್ ಖಾನ್ (ಎಡ) ಮತ್ತು ಸಾಯಿ ಸುದರ್ಶನ್</p></div>

ಗುಜರಾತ್ ಟೈಟನ್ಸ್ ತಂಡದ ಎಂ. ಶಾರೂಕ್ ಖಾನ್ (ಎಡ) ಮತ್ತು ಸಾಯಿ ಸುದರ್ಶನ್

   

ಅಹಮದಾಬಾದ್: ಚೆನ್ನೈ ಬ್ಯಾಟರ್ ಸಾಯಿ ಸುದರ್ಶನ್ ಮತ್ತು ಬೆಂಗಳೂರು ಬೌಲರ್ ಪ್ರಸಿದ್ಧ ಕೃಷ್ಣ  ಅವರ ಅಮೋಘ ಆಟದ ಬಲದಿಂದ ಗುಜರಾತ್ ಟೈಟನ್ಸ್ ತಂಡವು ಐಪಿಎಲ್ ಪಂದ್ಯದಲ್ಲಿ ಜಯಭೇರಿ ಬಾರಿಸಿತು. 

ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಆತಿಥೇಯ ಗುಜರಾತ್ ತಂಡವು 58 ರನ್‌ಗಳಿಂದ ರಾಜಸ್ಥಾನ ರಾಯಲ್ಸ್ ಎದುರು ಗೆದ್ದಿತು. ಟೂರ್ನಿಯಲ್ಲಿ ಸತತ ನಾಲ್ಕನೇ ಪಂದ್ಯ ಜಯಿಸಿದ ಶುಭಮನ್ ಗಿಲ್ ನಾಯಕತ್ವದ ಗುಜರಾತ್ ತಂಡವು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇ
ರಿತು. 

ADVERTISEMENT

ಟಾಸ್ ಗೆದ್ದ ರಾಜಸ್ಥಾನ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟೈಟನ್ಸ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 217 ರನ್ ಗಳಿಸಿತು. ಆರಂಭಿಕ ಬ್ಯಾಟರ್ ಸುದರ್ಶನ್ 18 ಓವರ್‌ಗಳವರೆಗೆ ಕ್ರೀ
ಸ್‌ನಲ್ಲಿದ್ದು ತಂಡಕ್ಕೆ ಆಸರೆಯಾದರು. ಸಾಯಿ (82; 53 ಎ, 4X8, 6X3 ) ಟೂರ್ನಿಯಲ್ಲಿ ಮೂರನೇ ಅರ್ಧಶತಕ ದಾಖಲಿಸಿದರು. ಸುದರ್ಶನ್ ಅವರಿಗೆ ಇದು ಐಪಿಎಲ್‌ನಲ್ಲಿ 30ನೇ ಪಂದ್ಯ.

ಗುರಿ ಬೆನ್ನಟ್ಟಿದ ಸಂಜು ಸ್ಯಾಮ್ಸನ್ ನಾಯಕತ್ವದ ರಾಯಲ್ಸ್ ತಂಡವು 19.2 ಓವರ್‌ಗಳಲ್ಲಿ 159 ರನ್ ಗಳಿಸಿ ಆಲೌಟ್ ಆಯಿತು. ವೇಗಿ ಪ್ರಸಿದ್ಧ ಕೃಷ್ಣ (24ಕ್ಕೆ3) ಅವರು ಪರಿಣಾಮಕಾರಿ ದಾಳಿ ನಡೆಸಿದರು. ಅವರೊಂದಿಗೆ ಸ್ಪಿನ್ನರ್ ರಶೀದ್ ಖಾನ್ ಮತ್ತು ಆರ್‌. ಸಾಯಿಕಿಶೋರ್ ತಲಾ 2 ವಿಕೆಟ್ ಗಳಿಸಿದರು. ವೇಗಿ ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದರು.

ಸುದರ್ಶನ್ ಆಟ: ಇನಿಂಗ್ಸ್‌ ಆರಂಭಿಸಿದ ಗುಜರಾತ್ ತಂಡಕ್ಕೆ ರಾಯಲ್ಸ್ ವೇಗಿ ಜೋಫ್ರಾ ಆರ್ಚರ್ ಮೊದಲ ಪೆಟ್ಟು ಕೊಟ್ಟರು. ಅವರ ನಿಖರ ಎಸೆತಕ್ಕೆ  ಗುಜರಾತ್ ತಂಡದ  ಗಿಲ್ ಕ್ಲೀನ್‌ಬೌಲ್ಡ್ ಆದರು. ಕ್ರೀಸ್‌ಗೆ ಬಂದ ಜೋಸ್ ಬಟ್ಲರ್ ತಾಳ್ಮೆಯಿಂದ ಇನಿಂಗ್ಸ್‌ ನಿರ್ವಹಿಸಿದರು. ಅವರು ಸುದರ್ಶನ್‌ಗೆ ಹೆಚ್ಚು ಬೆಂಬಲ ನೀಡಿದರು. ಇದರಿಂದಾಗಿ ಎರಡನೇ ವಿಕೆಟ್ ಜೊತೆಯಾಟದಲ್ಲಿ 80 (47ಎಸೆತ) ರನ್‌ ಸೇರಿದವು. ಅದರಲ್ಲಿ ಬಟ್ಲರ್‌ ಕಾಣಿಕೆ 36 (25ಎ, 4X5) ರನ್‌ಗಳಷ್ಠೇ. ಆಫ್‌ಬ್ರೇಕ್ ಬೌಲರ್ ಮಹೀಷ ತೀಕ್ಷಣ ಎಸೆತದಲ್ಲಿ ಬಟ್ಲರ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಇದರೊಂದಿಗೆ ಜೊತೆಯಾಟ ಮುರಿಯಿತು. 

ಕ್ರೀಸ್‌ಗೆ ಬಂದ ಶಾರೂಕ್ ಖಾನ್ (36; 20ಎ) ಕೂಡ ಸಾಯಿ ಸುದರ್ಶನ್‌ಗೆ ಉತ್ತಮ ಜೊತೆ ನೀಡಿದರು. ಇಬ್ಬರೂ ಮೂರನೇ ವಿಕೆಟ್ ಜೊತೆಯಾಟದಲ್ಲಿ 62 (34ಎ) ರನ್ ಸೇರಿಸಿದರು. ಕೊನೆಯ  ಐದು ಓವರ್‌ಗಳಲ್ಲಿ  ಸುದರ್ಶನ್ ಅವರು ತಮ್ಮ ಆಟದ ವೇಗ ಹೆಚ್ಚಿಸಿದರು. 

ಆದರೆ 16ನೇ ಓವರ್‌ನಲ್ಲಿ ತೀಕ್ಷಣ ಅವರೇ ಈ ಜೊತೆಯಾಟವನ್ನೂ ಮುರಿದರು. ಖಾನ್ ಕ್ರೀಸ್‌ನಿಂದ ಮುನ್ನುಗ್ಗಿ ಹೊಡೆಯುವ ಯತ್ನಿಸಿದರು.  ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್ ಸ್ಟಂಪಿಂಗ್ ಮಾಡಿದರು.  ತುಷಾರ್ ದೇಶಪಾಂಡೆ ಹಾಕಿದ 19ನೇ ಓವರ್‌ನಲ್ಲಿ ಸುದರ್ಶನ್ ಔಟಾದರು.

ಸಂಕ್ಷಿಪ್ತ ಸ್ಕೋರು: ಗುಜರಾತ್ ಟೈಟನ್ಸ್: 20 ಓವರ್‌ಗಳಲ್ಲಿ 6ಕ್ಕೆ217 (ಸಾಯಿ ಸುದರ್ಶನ್ 82, ಜೋಸ್ ಬಟ್ಲರ್ 36, ಶಾರೂಕ್ ಖಾನ್ 36, ರಾಹುಲ್ ತೆವಾಟಿಯಾ ಔಟಾಗದೇ 24, ರಶೀದ್ ಖಾನ್ 12, ತುಷಾರ್ ದೇಶಪಾಂಡೆ 53ಕ್ಕೆ2, ಮಹೀಶ್ ತೀಕ್ಷಣ 54ಕ್ಕೆ2) ರಾಜಸ್ಥಾನ ರಾಯಲ್ಸ್: 19.2 ಓವರ್‌ಗಳಲ್ಲಿ 159 (ಸಂಜು ಸ್ಯಾಮ್ಸನ್ 41, ರಿಯಾನ್ ಪರಾಗ್ 26, ಶಿಮ್ರಾನ್ ಹೆಟ್ಮೆಯರ್ 52, ಪ್ರಸಿದ್ಧ ಕೃಷ್ಣ 24ಕ್ಕೆ3, ರಶೀದ್ ಖಾನ್ 37ಕ್ಕೆ2, ಆರ್. ಸಾಯಿಕಿಶೋರ್ 20ಕ್ಕೆ2) ಫಲಿತಾಂಶ: ಗುಜರಾತ್ ಟೈಟನ್ಸ್ ತಂಡಕ್ಕೆ 58 ರನ್‌ ಜಯ. ಪಂದ್ಯದ ಆಟಗಾರ: ಸಾಯಿ ಸುದರ್ಶನ್.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.