ADVERTISEMENT

IPL Auction ದಾಖಲೆ ಮೊತ್ತಕ್ಕೆ CSK ಸೇರಿದ ಪ್ರಶಾಂತ್ ವೀರ್, ಕಾರ್ತಿಕ್ ಶರ್ಮಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಡಿಸೆಂಬರ್ 2025, 12:38 IST
Last Updated 16 ಡಿಸೆಂಬರ್ 2025, 12:38 IST
   

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್‌ 2026ನೇ ಸಾಲಿನ ಹರಾಜಿನಲ್ಲಿ ಅನ್‌ಕ್ಯಾಪ್ಡ್ ಆಟಗಾರರಾಗಿರುವ ಪ್ರಶಾಂತ್ ವೀರ್ ಹಾಗೂ ಕಾರ್ತಿಕ್ ಶರ್ಮಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತಲಾ ₹14.20 ಕೋಟಿ ಕೊಟ್ಟು ಖರೀದಿಸಿದೆ.

₹30 ಲಕ್ಷ ಮೂಲ ಬೆಲೆಯೊಂದಿಗೆ ಆಕ್ಷನ್‌ಗೆ ಬಂದಿದ್ದ ಪ್ರಶಾಂತ್ ವೀರ್ ಅವರನ್ನು ಖರೀದಿಸಲು ಮುಂಬೈ ಇಂಡಿಯನ್ಸ್, ಲಖನೌ ಸೂಪರ್‌ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗಳು ಪೈಪೋಟಿ ನಡೆಸಿದವು. ಆದರೆ, ಅಂತಿಮವಾಗಿ 5 ಬಾರಿಯ ಚಾಂಪಿಯನ್ ಚೆನ್ನೈ ಸೂ‍ಪರ್ ಕಿಂಗ್ಸ್ ಖರೀದಿಸುವಲ್ಲಿ ಯಶಸ್ವಿಯಾಯಿತು.

ಇವರ ಜೊತೆಗೆ ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಕಾರ್ತಿಕ್ ಶರ್ಮಾ ಅವರನ್ನು ಕೂಡ ಪೈಪೋಟಿ ನಡೆಸಿ ಖರೀದಿಸಿದೆ.

ADVERTISEMENT

ಉತ್ತರ ಪ್ರದೇಶ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡುವ 20 ವರ್ಷದ ಪ್ರಶಾಂತ್ ವೀರ್, ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಇದುವರೆಗೂ ಯುಪಿ ಪರ 2 ಪ್ರಥಮ ದರ್ಜೆ ಹಾಗೂ ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ 7 ಪಂದ್ಯಗಳಲ್ಲಿ ಆಡಿ, 37.33 ಸರಾಸರಿ ಹಾಗೂ 169.19ರ ಸ್ಟೈಕ್ ರೇಟ್‌ನಲ್ಲಿ 112 ರನ್ ಗಳಿಸಿದ್ದಾರೆ.

ಜೊತೆಗೆ ಪ್ರಥಮ ದರ್ಜೆಯಲ್ಲಿ 2 ಹಾಗೂ ಟಿ20 ಮಾದರಿಯಲ್ಲಿ 12 ವಿಕೆಟ್ ಪಡೆದಿದ್ದಾರೆ.

ಬೌಲಿಂಗ್‌ ಜೊತೆ ಬ್ಯಾಟಿಂಗ್‌ನಲ್ಲೂ ಕಮಾಲ್ ಮಾಡುವ ಸಾಮರ್ಥ್ಯ ಹೊಂದಿರುವ ಅವರನ್ನು, ರವೀಂದ್ರ ಜಡೇಜ ಜಾಗದಲ್ಲಿ ಆಡಿಸಲು ಸೂಕ್ತ ಎಂದು ನಿರ್ಧರಿಸಿರುವ ಸಿಎಸ್‌ಕೆ ಫ್ರಾಂಚೈಸಿ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಪ್ರಶಾಂತ್ ವೀರ್ ಜೊತೆಗೆ 19 ವರ್ಷದ ಕಾರ್ತಿಕ್ ಶರ್ಮಾ ಅವರನ್ನು ಕೂಡ ₹14.20 ಕೋಟಿ ನೀಡಿ ಸಿಎಸ್‌ಕೆ ಫ್ರಾಂಚೈಸಿ ಖರೀದಿಸಿದೆ. ರಾಜಸ್ಥಾನದ ಸ್ಫೋಟಕ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಆಗಿರುವ ಅವರು ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ಕಾರ್ತಿಕ್ ಶರ್ಮಾ ಫಿನಿಶರ್ ಪಾತ್ರದಲ್ಲಿ ಮಿಂಚುತ್ತಿದ್ದು, ಸಯ್ಯದ್ ಮುಷ್ತಾಕ್ ಅಲಿ ಟೂರ್ನಮೆಂಟ್‌ನಲ್ಲಿ 11 ಪಂದ್ಯಗಳಿಂದ 164.58 ಸ್ಟ್ರೈಕ್‌ರೇಟ್‌ನಲ್ಲಿ 316 ರನ್ ಗಳಿಸಿದ್ದಾರೆ. ಇದರಲ್ಲಿ 2 ಅರ್ಧಶತಕಗಳು ಹಾಗೂ 28 ಸಿಕ್ಸರ್‌ ಸಿಡಿಸಿದ್ದಾರೆ.

ದಾಖಲೆ ಬರೆದ ಕಾರ್ತಿಕ್ ಹಾಗೂ ಪ್ರಶಾಂತ್ ವೀರ್

ಇಬ್ಬರು ಯುವ ಆಟಗಾರರು ಕೂಡ ₹14.20 ಕೋಟಿಗೆ ಹರಾಜಾಗುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಮೊತ್ತ ‍ಪಡೆದ ಅನ್‌ಕ್ಯಾಪ್ಡ್ ಆಟಗಾರರು ಎಂಬ ಸಾಧನೆ ಮಾಡಿದರು. ಇದಕ್ಕೂ ಮೊದಲು ಈ ದಾಖಲೆ 2022ರಲ್ಲಿ ಲಖನೌ ಸೂಪರ್‌ಜೈಂಟ್ಸ್ ಸೇರಿದ್ದ ಆವೇಶ್ ಖಾನ್ ಹೆಸರಿನಲ್ಲಿತ್ತು. ಅವರು ₹10 ಕೋಟಿ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.